Advertisement

ರೈತರೇ ಬೆಳೆ ಸಮೀಕ್ಷೆಗೆ ಸಹಕರಿಸಿ

10:15 AM Oct 01, 2018 | |

ಕಲಬುರಗಿ: ರಾಜ್ಯ ಸರ್ಕಾರವು 2018ರ ಮುಂಗಾರು ಋತುವಿನಲ್ಲಿ ಖಾಸಗಿ ನಿವಾಸಿಗಳನ್ನು ಬಳಸಿ ಬೆಳೆ ಸಮೀಕ್ಷೆ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಬೆಳೆ ಸಮೀಕ್ಷೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಸುತ್ತೋಲೆಯಲ್ಲಿ ಮಾರ್ಗಸೂಚಿ ಹೊರಡಿಸಿದ್ದು, ಈ ಬೆಳೆ ಸಮೀಕ್ಷೆಯಿಂದ ರೈತರಿಗೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದ್ದು, ಜಿಲ್ಲೆಯ ಎಲ್ಲ ರೈತರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಕೋರಿದ್ದಾರೆ.

Advertisement

ರೈತರು ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಸರ್ಕಾರಿ ದಾಖಲೆಗಳಲ್ಲಿ ನಿಖರವಾಗಿ ದಾಖಲಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈ ಮಾಹಿತಿಯನ್ನು ಹಲವು ರೈತ ಫಲಾನುಭವಿ ಯೋಜನೆಗಳಲ್ಲಿ ಉಪಯೋಗಿಸಲಾಗುವುದು. ಜಿಲ್ಲೆಯಲ್ಲಿ ಖಾಸಗಿ ನಿವಾಸಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಸದ್ಯದಲ್ಲಿಯೇ ಖಾಸಗಿ ನಿವಾಸಿಗಳು ಕ್ಷೇತ್ರಮಟ್ಟದಲ್ಲಿ ಬೆಳೆ ವಿವರಗಳನ್ನು ಮೊಬೈಲ್‌ ಆ್ಯಪ್‌ ಮೂಲಕ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಲಿದ್ದಾರೆ ಎಂದಿದ್ದಾರೆ.

ಸಮೀಕ್ಷೆಯಿಂದ ಸರ್ಕಾರಕ್ಕೆ ಅನುಕೂಲತೆಗಳು: ಬೆಳೆ ಸಮೀಕ್ಷೆಯಿಂದ ಖಚಿತವಾಗಿ ಯಾವ ಬೆಳೆ ಎಷ್ಟು ವಿಸ್ತೀರ್ಣದಲ್ಲಿ ಬೆಳೆದಿದೆ ಎಂಬುದನ್ನು ತಿಳಿಯ ಬಹುದಾಗಿದೆ. ಯಾವುದೇ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದಲ್ಲಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಎಷ್ಟು ನಷ್ಟವಾಗಿದೆ ಎಂದು ಅಂದಾಜಿಸಬಹುದು. ರಾಜ್ಯದಲ್ಲಿ ಯಾವ ಬೆಳೆಯ ಉತ್ಪಾದನೆ ಎಷ್ಟಿದೆ? ಯಾವ ಬೆಳೆಯ ಉತ್ಪಾದನೆ ಕಡಿಮೆ ಇದೆ. ಉತ್ಪಾದನೆ ಕಡಿಮೆಯಾದ್ದರಿಂದ ಬೆಲೆಯಲ್ಲಿ ಏರುಪೇರಾಗಲಿದೆಯೇ? ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳಬಹುದು ಎಂದು ಅಂದಾಜಿಸಲು ಸಾಧ್ಯವಾಗುತ್ತದೆ.

ಈ ಮೂಲಕ ಯಾವ ಬೆಳೆಗಳಿಗೆ ಬೆಂಬಲಿತ ಬೆಲೆ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಬಹುದು. ಬೆಳೆ ವಿಮೆಯಲ್ಲಿ
ವಿಮಾ ಘಟಕದ ಖಚಿತವಾದ ವಿಸ್ತೀರ್ಣ ಲಭ್ಯವಾಗಲಿದೆ. ಸರ್ಕಾರದಿಂದ ನೀಡುವ ಸೌಲಭ್ಯಗಳಿಗೆ ಉಪಯೋಗ ಮತ್ತು ಯಾವ ಬೆಳೆಗಳು ನಶಿಸುತ್ತಿವೆ? ಯಾವ ಬೆಳೆಗಳು ಹೊಸದಾಗಿ ಬೆಳೆಯಲಾಗುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ.

ಸಮೀಕ್ಷೆಯಿಂದ ರೈತರಿಗೆ ಅನುಕೂಲತೆಗಳು: ಪಹಣಿಯಲ್ಲಿ ರೈತರ ಸರ್ವೇ ನಂಬರ್‌ನಲ್ಲಿ ಯಾವ ಬೆಳೆ ಬೆಳೆದಿದೆಯೋ ಆ ಬೆಳೆಯ ಹೆಸರು ಮತ್ತು ವಿಸ್ತೀರ್ಣ ಸರಿಯಾಗಿ ದಾಖಲಾಗುತ್ತದೆ. ಪ್ರತಿ ಸರ್ವೇ ನಂಬರ್‌ನಲ್ಲಿ ಬೆಳೆಯ ವಿಸ್ತೀರ್ಣ ಲಭ್ಯವಿರುವುದರಿಂದ ಸರ್ಕಾರದಿಂದ ಸೌಲಭ್ಯ ಪಡೆಯಲು ನೇರವಾಗಿ ಉಪಯೋಗಿಸುವುದರಿಂದ ರೈತರು ಪುನಃ ಪಹಣಿಯಲ್ಲಿ ದಾಖಲಿಸುವ ಬಗ್ಗೆ ಕ್ರಮವಹಿಸುವ ಅಗತ್ಯವಿರುವುದಿಲ್ಲ.

Advertisement

ಬೆಳೆ ವಿಮೆಯಲ್ಲಿ ಆ ಬೆಳೆಯ ಸಮರ್ಪಕ ವಿಸ್ತೀರ್ಣ ಸಿಗುವುದರಿಂದ ರೈತರಿಗೆ ವಿಮಾ ಪರಿಹಾರದಲ್ಲಿ ಕಡಿತ ಇರುವುದಿಲ್ಲ. ಬೆಳೆಯು ನಷ್ಟವಾದಲ್ಲಿ ಅವರು ಬೆಳೆ ಬೆಳೆದ ವಿಸ್ತೀರ್ಣಕ್ಕೆ ಸರಿಯಾಗಿ ವಿಮೆ ಸಿಗುತ್ತದೆ. ಬೆಳೆಯ ವಿಸ್ತೀರ್ಣ ತಿಳಿಯುವುದರಿಂದ ಉತ್ಪಾದನೆ ಬಗ್ಗೆಯೂ ತಿಳಿಯಬಹುದಾಗಿದೆ. ಬೆಲೆ ಏರಿಕೆ, ಇಳಿಕೆ ಬಗ್ಗೆ ತಿಳಿದು ಎಂ.ಎಸ್‌.ಪಿ ನಿರ್ಧರಿಸಿ ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಲು ಅನುಕೂಲವಾಗುತ್ತದೆ.

ಸ್ಥಳೀಯರಿಂದ ಸಮೀಕ್ಷೆ: ತಮ್ಮ ಹಳ್ಳಿಯಲ್ಲೇ ವಾಸಿಸುವ ಪಿಯುಸಿ ಅಥವಾ ಹೆಚ್ಚಿನ ವಿದ್ಯಾರ್ಹತೆಯುಳ್ಳ ಯುವ ಖಾಸಗಿ
ನಿವಾಸಿಗಳು ಅಥವಾ ಸಿಬ್ಬಂದಿಗಳಿಂದ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಬೆಳೆ ಸಮೀಕ್ಷೆದಾರರಾದ ಖಾಸಗಿ ನಿವಾಸಿ, ಸರ್ಕಾರಿ ಸಿಬ್ಬಂದಿಗಳಿಗೆ ರೈತರು ಅಗತ್ಯ ಸಹಕಾರ ನೀಡಬೇಕು.
 
ಈ ಮೂಲಕ ಸರ್ಕಾರದ ಉದ್ದೇಶ ಸಫಲವಾಗಲು ಕಾರಣೀಭೂತರಾಗಬೇಕು ಎಂದು ಮನವಿ ಮಾಡಿದ್ದಾರೆ. ಜಮೀನಿಗೆ ಬರುವ ಪೂರ್ವದಲ್ಲಿ ರೈತರಿಗೆ ತಿಳಿಸಲಾಗುವುದು. ತಾವು ಅವರ ಜೊತೆಯಲ್ಲಿದ್ದು, ಸರ್ವೇ ನಂಬರ್‌ನ್ನು ಗುರುತಿಸುವಲ್ಲಿ ಮತ್ತು ಸರ್ವೇ ನಂಬರ್‌ ನಲ್ಲಿನ ಬೆಳೆಯ ವಿವರಗಳನ್ನು ಸರಿಯಾಗಿ ದಾಖಲಿಸುವಲ್ಲಿ ಸಹಕರಿಸಬೇಕು.
 
ಸಮೀಕ್ಷೆದಾರರು ನಿಮ್ಮ ಸರ್ವೇ ನಂಬರಿನ ಭಾವಚಿತ್ರ ತೆಗೆದುಕೊಳ್ಳುವಾಗ ಕನಿಷ್ಠ ಒಂದು ಭಾವಚಿತ್ರದಲ್ಲಾದರೂ ನೀವಿರಬೇಕು. ಬೆಳೆ ಸಮೀಕ್ಷೆದಾರರಿಗೆ ಮೊಬೈಲ್‌ ಸಂಖ್ಯೆ ನೀಡಬೇಕು. ಇತರೆ ರೈತರು ಬಂದಿಲ್ಲವಾದಲ್ಲಿ ಅವರ ಸರ್ವೇ ನಂಬರ್‌ ಗುರುತಿಸುವಲ್ಲಿ ಸಹಕರಿಸುವ ಜೊತೆಗೆ ಅವರ ಮೊಬೈಲ್‌ ಸಂಖ್ಯೆ ನೀಡಬೇಕು ಎಂದು ಕೋರಿದ್ದಾರೆ. 

ಬೆಳೆ ಸಮೀಕ್ಷೆಯನ್ನು ಬೆಳೆಗಳ ಮಾಹಿತಿಯನ್ನು ಸರ್ಕಾರಿ ದಾಖಲೆಗಳಲ್ಲಿ ದಾಖಲಿಸುವ ಹಾಗೂ ವಿವಿಧ ರೈತ ಫಲಾನುಭವಿ ಯೋಜನೆಗಳಲ್ಲಿ ಬಳಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದೆ. ಭೂ ದಾಖಲಾತಿ ಸಂಬಂಧಿತ ಇತರೆ ಎಲ್ಲ ವಿಷಯಗಳಿಗಾಗಿ ಹಿಂದಿನ ಕಾರ್ಯವಿಧಾನಗಳು ಮುಂದುವರಿಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next