Advertisement

ನೋಟಿಸ್‌ಗೆ ಬೆಂಕಿಯಿಟ್ಟ ರೈತರು

09:02 AM Jan 09, 2019 | Team Udayavani |

ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದ ಆನಂದರಾವ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ಭೂಸ್ವಾಧೀನ ಪಡಿಸಿಕೊಳ್ಳುವ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆ ಭಾಗದ ರೈತರಿಗೆ ನೀಡಿರುವ ನೋಟಿಸ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಶಿವರಾಮ ಕಾರಂತ ಬಡಾವಣೆ ಹೆಸರಿನಲ್ಲಿ ಬಿಡಿಎಯಿಂದ 4.500 ಕೋಟಿ ರೂ.ಗೂ ಅಧಿಕ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಸರ್ಕಾರ ರೈತರಿಗೆ ನೀಡಿರುವ ನೋಟಿಸ್‌ಗಳನ್ನು ಹಿಂಪಡೆಯಬೇಕು. ಭೂಸ್ವಾಧೀನಪಡಿಸಿಕೊಳ್ಳಲು ಹೊರಡಿಸಿರುವ ಅಧಿಸೂಚನೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

2008ರಲ್ಲಿ ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 17 ಹಳ್ಳಿಗಳ ವ್ಯಾಪ್ತಿಯ 3,456 ಎಕರೆ 12 ಗುಂಟೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿತ್ತು. ಆದರೆ, ಬಿಡಿಎ ಐದು ವರ್ಷ ಕಳೆದರೂ ಡಾ ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಆಸಕ್ತಿ ತೋರಲಿಲ್ಲ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ 257 ಎಕರೆ ಮತ್ತು ಸಿದ್ದರಾಮಯ್ಯ ಅವರು 446 ಎಕರೆ 7 ಗಂಟೆ ಜಮೀನನ್ನು ಡಿನೋಟಿಫಿಕೇಷನ್‌ ಮಾಡಿದ್ದರು. ನಂತರ ಬಿಡಿಎ 1,356 ಎಕರೆಗಳಿಗೆ ಎನ್‌ಒಸಿ ನೀಡಿದ್ದು, ಭೂಪರಿವರ್ತನೆ ಸಹ ಮಾಡಲಾಗಿತ್ತು. ಈ ಮೂಲಕ ಸುಮಾರು 4,500 ಕೋಟಿ ರೂ.ಗಳಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಿವೆ. ಡಾ.ಶಿವರಾಮ ಕಾರಂತ ಬಡಾವಣೆಗಾಗಿ 17 ಹಳ್ಳಿಗಳಿಗೆ ಸೇರಿದ 3,546 ಎಕರೆ 12 ಗುಂಟೆ ಜಾಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಡಿ.30ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಆದರೆ, ಸ್ಥಳೀಯ ಪಂಚಾಯಿತಿ ಅನುಮತಿ ಪಡೆದು ಈಗಾಗಲೇ 25 ಸಾವಿರ ಮನೆ ನಿರ್ಮಿಸಲಾಗಿದ್ದು, ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೂ, ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಈ ಅಧಿಸೂಚನೆ ಹಾಗೂ ಸುಪೀಂ ಕೋರ್ಟ್‌ ಆದೇಶದ ಅನ್ವಯ ಶಿವರಾಮ ಕಾರಂತ ಬಡಾವಣೆಯ ಕೆಲ ರೈತರಿಗೆ ಬಿಡಿಎ ನಿವೇಶನ ಬಿಟ್ಟುಕೊಡುವಂತೆ ನೋಟಿಸ್‌ ಜಾರಿ ಮಾಡಿದೆ. ಕೂಡಲೇ ಬಿಡಿಎ ಹಾಗೂ ಸರ್ಕಾರ ರೈತರಿಗೆ ಕೊಟ್ಟಿರುವ ನೋಟಿಸ್‌ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಚಂದ್ರಶೇಖರ್‌ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next