Advertisement

ಕೆಂಜಾಳದ ಕಾಪಾರು ಕೃಷಿಕ ಸೋದರರ ಮಾದರಿ ಗೋಪ್ರೇಮ

10:25 AM Oct 12, 2018 | Team Udayavani |

ಸುಬ್ರಹ್ಮಣ್ಯ: ಒಂದೆರಡು ಜಾನು ವಾರುಗಳನ್ನು ಸಾಕುವುದೆ ಕಷ್ಟ ಎನ್ನುವ ಈ ಕಾಲದಲ್ಲಿ ಇಲ್ಲಿಯ ಕುಟುಂಬವೊಂದರ ಸಹೋದರರಿಬ್ಬರು ನಲವತ್ತು ಜಾನುವಾ ರುಗಳನ್ನು ಸಾಕುತ್ತಿದ್ದಾರೆ. ಅದು ಕೂಡ ದೇಶಿ ಗೋವುಗಳು. ನಿತ್ಯವೂ ಕಾಡಿಗೆ ತೆರಳಿ ಜಾನುವಾರುಗಳನ್ನು ಮೇಯಿಸುತ್ತಿರುವ ಈ ಸಹೋದರರು ಮಾದರಿ ಕಾರ್ಯ ಮಾಡುತ್ತಿದ್ದಾರೆ.

Advertisement

ಸುಬ್ರಹ್ಮಣ್ಯ ಸಮೀಪದ ಕೆಂಜಾಳ ಬಳಿ ಕಾಪಾರು ಎಂಬಲ್ಲಿ ಕೃಷಿ ಕುಟುಂಬವೊಂದಿದೆ. ಮೂಲತಃ ಕೃಷಿಕ ತಿಮ್ಮಪ್ಪ ಕಾಪಾರು ಮತ್ತು ಸಹೋದರ ತಮ್ಮಣ್ಣ ಕುಟುಂಬದ ಹಿರಿಯರು. ಕೃಷಿಯೇ ಇವರಿಗೆ ಆಧಾರ. ಹಿಂದೆ ಭತ್ತ, ಈಗ ಅಡಿಕೆ ಬೆಳೆಯುತ್ತಿದ್ದಾರೆ. ಇದರೊಂದಿಗೆ ಜಾನುವಾರು ಸಾಕಾಣೆ ನಡೆಸುತ್ತ ಬಂದಿದ್ದಾರೆ. ಇವರ ಮನೆಯ ಹಟ್ಟಿ ಹಳೆಯ ಚಹರೆಯನ್ನೆ ತೋರಿಸುತ್ತಿದೆ. ಸುಮಾರು ನಲವತ್ತು ಜಾನುವಾರುಗಳು ಹಟ್ಟಿಯಲ್ಲಿವೆ.

10 ಎಕರೆಯಷ್ಟು ಕೃಷಿ ಭೂಮಿ ಹೊಂದಿರುವ ಈ ಸಹೋದರರು, ಹಿಂದೆ ಭತ್ತಾಯ ಬೇಸಾಯ ಹೊಂದಿದ್ದರು. ಉಳುಮೆ ಸಂದರ್ಭ ಹಸು, ಹೋರಿಗಳನ್ನು ಸಾಕುತ್ತಿದ್ದರು. ಬಳಿಕ ಹೊಲಗದ್ದೆಗಳಲ್ಲಿ ಅಡಿಕೆ ಬೆಳೆದಿದ್ದಾರೆ. ಆದರೆ, ಹೈನುಗಾರಿಕೆಯನ್ನು ಮುಂದುವರಿಸಿದ್ದಾರೆ. ಮನೆಯಲ್ಲಿ ಜನಿಸಿದ ಯಾವುದೇ ದನ-ಕರುಗಳುಗಳನ್ನು ಮಾರಾಟ ಮಾಡಿಲ್ಲ. ಈ ಸಹೋದರರು ಬೆಳಕು ಹರಿಯುವುದಕ್ಕೂ ಮೊದಲೇ ಎದ್ದು, ಬೆಳಗ್ಗೆ 10.30ರ ತನಕ ಮನೆಯ ಕೆಲಸಗಳನ್ನು ನಿರ್ವಹಿಸಿ, ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಅಟ್ಟಸಿಕೊಂಡು ಹೋಗುತ್ತಾರೆ. ಸಂಜೆ 5ರ ಸುಮಾರಿಗೆ ಮರಳುತ್ತಾರೆ. ಇಷ್ಟು ಅವಧಿಯೂ ಅವರು ಕಾಡಿನಲ್ಲಿ ದನ-ಕರುಗಳೊಂದಿಗೆ ಕಾಲ ಕಳೆಯುತ್ತಾರೆ. ದನ-ಕರುಗಳು ಹತ್ತಿರದಲ್ಲೇ ಮೇಯುತ್ತಿದ್ದರೆ, ಮನೆಗೆ ಬಂದು ಊಟ ಮಾಡಿ ಹೋಗುತ್ತಾರೆ.

ಲಾಭಕ್ಕಾಗಿ ಅಲ್ಲ, ಪ್ರೀತಿಯಿಂದ!
ದೇಸಿ ಹಸುಗಳೇ ಜಾಸ್ತಿ ಇರುವುದರಿಂದ ಹೆಚ್ಚು ಹಾಲು ಸಿಗುವುದಿಲ್ಲ. ಸದ್ಯ ಎರಡೇ ಹಸುಗಳು ಹಾಲು ಕೊಡುತ್ತಿವೆ. ಅದು ಮನೆ ಖರ್ಚಿಗಷ್ಟೇ ಸಾಕಾಗುತ್ತದೆ. ಆದರೂ, ಹೈನುಗಾರಿಕೆಯನ್ನು ಪ್ರೀತಿಯಿಂದಲೇ ಮಾಡುತ್ತಿದ್ದಾರೆ. ಕೇಳಿದರೆ, ಹಿಂದಿನಿಂದಲೂ ಹಸುಗಳನ್ನು ಸಾಕುತ್ತಿದ್ದೇವೆ. ಕಟುಕರಿಗೆ ಗೋವುಗಳನ್ನು ಮಾರುವುದಿಲ್ಲ. ಗೋಮಾ ತೆಯ ಮೇಲಿನ ಪ್ರೀತಿಯಿಂದಲೇ ಸೇವೆ ಮಾಡುತ್ತಿದ್ದೇವೆ. ತೋಟದಲ್ಲಿ ಸಾಕಷ್ಟು ಮೇವು ಸಿಗದ ಕಾರಣ ಕಾಡಿನತ್ತ ಕರೆದೊಯ್ಯುತ್ತೇವೆ. ಹಾಲು ಸಿಗದಿದ್ದರೆ ಏನಂತೆ? ತೋಟಕ್ಕೆ ಗೊಬ್ಬರ ಸಿಗುತ್ತಿದೆ. ಹಿಂಡಿಗೇ ಅಧಿಕ ಖರ್ಚಾಗುತ್ತಿದೆ ಎನ್ನುತ್ತಾರೆ.

ಶ್ಲಾಘನೀಯ ಕಾರ್ಯ
ಗೋಹತ್ಯೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಲಾಭದಾಯಕ ಅಲ್ಲದಿ ದ್ದರೂ ಗೋವುಗಳನ್ನು ಸಾಕುತ್ತಿದ್ದಾರೆ ಎಂದರೆ ನಿಜಕ್ಕೂ ಶ್ಲಾಘನೀಯ. ಇಂತಹವರನ್ನು ಗುರುತಿಸುವ ಕೆಲಸ ಆಗಬೇಕಿದೆ.
– ಶ್ರೀಕುಮಾರ್‌
ವಿಶ್ವ ಹಿಂದೂ ಪರಿಷತ್‌ ಮುಖಂಡ

Advertisement

ತೃಪ್ತಿ ಸಿಗುತ್ತಿದೆ
ನಮ್ಮದು ಕೃಷಿ ಕುಟುಂಬ. ಹಿಂದಿನಿಂದಲೂ ಗೋಸಾಕಣೆ ನಡೆಸುತ್ತಿದ್ದೇವೆ. ನಮ್ಮ ಹಿರಿಯರೂ ಸಾಕುತ್ತಿದ್ದರು. ಗೋವುಗಳ ಜತೆಗೆ ಕಾಲ ಕಳೆಯುವುದಕ್ಕಿಂತ ಹೆಚ್ಚಿನ ತೃಪ್ತಿ, ಸಂತೋಷ ಇನ್ನೆಲ್ಲೂ ಸಿಗುವುದಿಲ್ಲ. 
ತಮ್ಮಣ್ಣ ಕಾಪಾರು
  ಸಹೋದರ 

ಕೃಷಿಕರಿಗೆ ಮಾತ್ರ
ಜಾನುವಾರುಗಳನ್ನು ಖರೀದಿಸಲು ಬಂದವರನ್ನು ನಾವು ನಿರಾಕರಿಸಿದ್ದೇವೆ. ಬಂದವರ ಉದ್ದೇಶ ಕೃಷಿಗಾಗಿ ಬಳಕೆ ಆಗಿರಲಿಲ್ಲ. ಕೃಷಿಕರು ಕೇಳಿದರೆ ಮಾತ್ರ ಖಚಿತಪಡಿಸಿಕೊಂಡು ಮಾರಾಟ ಮಾಡುತ್ತೇವೆ. ಗೋಶಾಲೆಗೆ ಜಾನುವಾರು ನೀಡಲು ಸಿದ್ಧರಿದ್ದೇವೆ.
– ತಿಮ್ಮಪ್ಪ ಕಾಪಾರು, ಗೋಪ್ರೇಮಿ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next