Advertisement

ಬೇಡಿಕೆ ಈಡೇರಿಕೆಗೆ ರೈತ ಸಂಘ ಒತ್ತಾಯ

07:51 PM Jul 07, 2021 | Nagendra Trasi |

ವಿಜಯಪುರ: ರೈತ-ಕೂಲಿಕಾರರಿಗೆ ಸರ್ಕಾರ ಘೋಷಿಸಿರುವ ಕೋವಿಡ್‌ ಪರಿಹಾರ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣದಿಂದ ರಾಜ್ಯದಾದ್ಯಂತ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನತೆಯ ಆಗ್ರಹದ ಬಳಿಕ ಸರ್ಕಾರ ಕಾರ್ಮಿಕರಿಗೆ ಘೋಷಿಸಿರುವ ಪರಿಹಾರ ಸೂಕ್ತವಾಗಿಲ್ಲ. ಗ್ರಾಮೀಣ ಪ್ರದೇಶದ ಕೋವಿಡ್‌ ಪರಿಹಾರ ನೀಡಿಕೆಯಲ್ಲಿ ಹೆಚ್ಚಳ ಮಾಡಲಿಲ್ಲ. 2020 ಮಾರ್ಚ್‌ನಿಂದಲೇ ಕೋವಿಡ್‌ ತೀವ್ರತೆ ಹೆಚ್ಚಿದ್ದು, ಈಗಲೂ ಮುಂದುವರಿದ ಕಾರಣ ಜನರೂ ಕಂಗಾಲಾಗಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ರೋಗ ನಿಗ್ರಹಕ್ಕಾಗಿ ಸರ್ಕಾರಗಳು ಘೋಷಿಸಿದ ಲಾಕ್‌ಡೌನ್‌ ಬಡವರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಸರ್ಕಾರ ಘೋಷಿತ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ರೈತರ ವ್ಯಾಪಕ ವಿರೋಧದ ನಡುವೆ ರೈತ-ಕೃಷಿ ವಿರೋಧಿ ಕಾಯ್ದೆ ಜಾರಿಗೊಳಿಸಲು ಆಸಕ್ತಿ ತೋರಿದ ಸರ್ಕಾರ, ಲಾಕ್‌ಡೌನ್‌ ಕಾರಣದಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಹೊಲದಲ್ಲೇ ಕೊಳೆತು ಹೋದ ಬಗ್ಗೆ ಚಕಾರ ಎತ್ತಲಿಲ್ಲ. ಹೀಗಾಗಿ ಹಾನಿಯಾದ ತರಕಾರಿ, ಹಣ್ಣು, ಹೂ ಸೇರಿದಂತೆ ತೋಟಗಾರಿಕೆ ಎಲ್ಲ ಬೆಳೆಗಳ ನಷ್ಟಕ್ಕೆ ಸರ್ಕಾರ 25 ಸಾವಿರ ರೂ. ಪರಿಹಾರ ನೀಡಬೇಕು.

ರಾಜ್ಯ ಸರ್ಕಾರ ಕೇರಳ ರಾಜ್ಯದ ಮಾದರಿಯಲ್ಲಿ ಎಲ್ಲ ರೈತರು, ಕೂಲಿಕಾರರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು, ಮಹಿಳೆಯರ ಎಲ್ಲ ರೀತಿಯ ಸಾಲವನ್ನು ಒಂದೇ ಬಾರಿಗೆ ಮನ್ನಾ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ನಿಯಂತ್ರಣ ಹೇರಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಭಾರಿ ತೆರಿಗೆ ಹೇರಿಕೆ ಹಿಂಪಡೆಯಬೇಕು. ಬೀಜ, ರಸಗೊಬ್ಬರ, ಕ್ರಿಮಿನಾಶಕ, ಯಂತ್ರೋಪಕರಣ ಸೇರಿದಂತೆ ಕೃಷಿಗಾಗಿ ಬಳಸುವ ಎಲ್ಲ ವಸ್ತುಗಳಿಗೆ ಈ ಹಿಂದಿನಂತೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಆದಾಯ ತೆರಿಗೆ ವ್ಯಾಪ್ತಿಯಲ್ಲಿಲ್ಲದ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರ ಧಾನ್ಯದ ಕಿಟ್‌ ಹಾಗೂ 10 ಸಾವಿರ ರೂ. ವಿತರಿಸಬೇಕು. ಆರೋಗ್ಯ ಸುರಕ್ಷತಾ ಸಾಮಗ್ರಿ, ಸೌಲಭ್ಯ ಕಲ್ಪಿಸಬೇಕು. ಪ್ರತಿ ಗ್ರಾಮ-ನಗರಗಳ ದಲಿತರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಬೇಕು. ವೃದ್ಧಾಪ್ಯ, ಅಂಗವಿಕಲ, ವಿಧವಾ, ದೇವದಾಸಿ ಮಹಿಳೆಯರಿಗೆ ನೀಡುವ ಸಾಮಾಜಿಕ ಭದ್ರತೆಯ ಮಾಸಿಕ ಪಿಂಚಣಿಯನ್ನು 3 ಸಾವಿರ ರೂ. ಗೆ ಏರಿಸಬೇಕು. ಎಲ್ಲ ಶಿಕ್ಷಣಾರ್ಥಿಗಳಿಗೆ ತ್ವರಿತವಾಗಿ ಶಿಷ್ಯ ವೇತನ, ಆಹಾರ ಧಾನ್ಯ ವಿತರಿಸಬೇಕು ಎಂದು ಆಗ್ರಹಿಸಿದರು.

Advertisement

ಇದಲ್ಲದೇ ಮುಂಗಾರು ಬಿತ್ತನೆ ಬಳಿಕ ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಕೂಡಲೇ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ಸರ್ಕಾರ ನೀರು ಹರಿಸಿ, ಬೆಳೆ ರಕ್ಷಣೆ ಮಾಡಬೇಕು. ಸರ್ಕಾರ ಭೂಮಿ ಅರಣ್ಯ ಭೂಮಿ ಸಾಗುವಳಿ ಮಾಡುವವರಿಗೆ ಅಕ್ರಮ ಸಕ್ರಮ ಗೊಳಿಸಲು ಸಮಿತಿ ರಚಿಸಬೇಕು. ಡಾ| ಸ್ವಾಮೀನಾಥನ್‌ ವರದಿ ಜಾರಿಯಾಗಬೇಕು. ರೈತರು ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆಗಳನ್ನು ಎದುರುಸುತ್ತಿದ್ದಾರೆ. ರೈತರ ಜಮೀನುಗಳಿಗೆ ತೆರಳಿ ಸ್ಥಳದಲ್ಲಿಯೇ ನ್ಯಾಯ ಒದಗಿಸಿಕೊಡಬೇಕು.ಅಗತ್ಯ ವಸ್ತುಗಳ ಬೆಲೆ ಏರಿಕೆ ತಗ್ಗಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಜನವಾದಿ ಮಹಿಳಾ ರಾಜ ಉಪಾಧ್ಯಕ್ಷೆ ಸುರೇಖಾ ರಜಪೂತ ಮಾತನಾಡಿದರು. ಸುಮಿತ್ರಾ ಘೊಣಸಗಿ, ಕೃಷಿ ಕೂಲಿಕಾರ ಸಂಘಟನೆಯ ಮಳಸಿದ್ದ ನಾಯೊRಡಿ, ಸೋನಾಬಾಯಿ ರಾಠೊಡ, ಸಿದ್ರಾಮ ಬಂಗಾರಿ, ಗಂಗಾರಾಮ ಪವಾರ, ಇರ್ಫಾನ್‌ ಕನ್ನೂರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next