ಹನೂರು: ಚೆಂಗಡಿ ಗ್ರಾಮ ಸ್ಥಳಾಂತರ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆವತಿಯಿಂದ ಹನೂರು ಪಟ್ಟಣದಲ್ಲಿ ರಸ್ತೆತಡೆ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಮುಖ್ಯ ವೃತ್ತದ ಬಳಿ ಜಮಾಯಿಸಿದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮತ್ತು ಪ್ರತಿಭಟನಾಕಾರರು ಜಿಲ್ಲಾಡಳಿತ, ಸರ್ಕಾರ,ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಮೊಳಗಿಸಿದರು.
ಈ ವೇಳೆ ಹೊನ್ನೂರು ಪ್ರಕಾಶ್ ಮಾತನಾಡಿ, ಅರಣ್ಯದೊಳಗಿನ ಚೆಂಗಡಿ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ಕಳೆದ 5 ವರ್ಷದಿಂದ ಜರುಗುತ್ತಿದೆ. ಸ್ಥಳಾಂತರಗೊಂಡ ಚೆಂಗಡಿ ಗ್ರಾಮಸ್ಥರಿಗೆ ಪುನರ್ವಸತಿಕಲ್ಪಿಸಲು ಅರಣ್ಯ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ ಇತರೆ ಇಲಾಖೆಗಳು ಸಹಕಾರನೀಡುತ್ತಿಲ್ಲ. ದೊಡ್ಡಾಣೆ ಗ್ರಾಮದಲ್ಲಿ ಇಡೀ ಗ್ರಾಮವೇ ಅಸ್ವಸ್ಥಗೊಂಡು ನರಳಾಡುತ್ತಿದ್ದರೂ ನಾವು ಕರೆಮಾಡುವವರೆಗೆ ಅವರಿಗೆ ವೈದ್ಯಕೀಯ ಸೇವೆ ದೊರಕಿರಲಿಲ್ಲ. ಇನ್ನು ವಿದ್ಯುತ್ ಇಲಾಖೆಯಿಂದಅರಣ್ಯದೊಳಗಿನ ಗ್ರಾಮಗಳ ಸಾರ್ವಜನಿಕರಿಗೆನೀಡಿರುವ ಸೋಲಾರ್ ದೀಪಗಳು 6 ಗಂಟೆಗೆ ಆಫ್ಆಗುತ್ತಿದೆ. ಗ್ರಾಮಸ್ಥರು ಕಗ್ಗತ್ತಲಿನಲ್ಲಿ ಬೆಂಕಿ ಹಾಕಿ ಒಲೆಹಚ್ಚಿ ಊಟಮಾಡುವ ಪರಿಸ್ಥಿತಿಯಿದೆ. ಇನ್ನು ವಿದ್ಯಾರ್ಥಿಗಳು ಓದಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರಿಗೆ ತರಾಟೆ: ಈ ವೇಳೆ ಹೊನ್ನೂರು ಪ್ರಕಾಶ್ ಮಾತನಾಡಿ, ಜಿಲ್ಲಾ ಉಸ್ತುವಾರಿಸಚಿವರು ಬೃಹತ್ ಹಾರ, ಸ್ವಾಗತ ಫ್ಲೆಕ್ಸ್ ಹಾಕಿಸಿಕೊಳ್ಳುತ್ತಿದ್ದಾರೆ. ಮಲೆ ಮಹದೇಶ್ವ ಬೆಟ್ಟಕ್ಕೆ ಬಂದ ಸಚಿವರು ಈ ಭಾಗದ ಸಮಸ್ಯೆಗಳ ಬಗ್ಗೆ ಚಕಾರವೆತ್ತಿಲ್ಲ. ಕೆಡಿಪಿ ಸಭೆಯಲ್ಲಿ ಕಾಡಂಚಿನ ಸಮಸ್ಯೆಗಳ ಬಗ್ಗೆಯೂ ಯಾವುದೇ ಚರ್ಚೆ ಮಾಡಿಲ್ಲ.ಜಿಲ್ಲಾ ಉಸ್ತುವಾರಿ ಸಚಿವರು ಮಾದಪ್ಪನ ದರ್ಶನಪಡೆದು ಪೂಜೆ ಸಲ್ಲಿಸಲು ಮಾತ್ರ ಈ ಭಾಗಕ್ಕೆ ಬರುತ್ತಾರೆ. ಮುಂದಿನ 15 ದಿನಗಳೊಳಗಾಗಿ ನಮ್ಮಸಮಸ್ಯೆಗಳನ್ನು ಬಗೆಹರಿಸಿದ್ದಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಮುಖ್ಯಮಂತ್ರಿಗಳೇ ಆಗಲಿ, ಸಚಿವರೇ ಆಗಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಮತ್ತು ಅವರಿಗೆ ಮಾದಪ್ಪನ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜು ಮತ್ತು ಸೆಸ್ಕ್ ಎಇಇ ಶಂಕರ್ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕಪ್ರತಿಭಟನೆಯನ್ನು ಕೈಬಿಡಲಾಯಿತು. ಈಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಹೊನ್ನೂರುಬಸವಣ್ಣ, ತಾಲೂಕು ಅಧ್ಯಕ್ಷ ಚೆಂಗಡಿ ಕರಿಯಪ್ಪ, ದೊಡ್ಡೇಗೌಡ, ಲಕ್ಷ್ಮಣ ಇತರರಿದ್ದರು.