ಹೊಸಪೇಟೆ: ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಸರ್ಕಾರ ವಾಪಸ್ ಪಡೆದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆದಿದ್ದರೂ, ರಾಜ್ಯ ಸರ್ಕಾರ ಮಾತ್ರ ವಾಪಸ್ ಪಡೆಯುತ್ತಿಲ್ಲ. ಇವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಕಿವಿಗೆ ಹಾಕಿಕೊಳ್ಳದ ಸರ್ಕಾರ ಭಂಡತನದಿಂದ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿತ ಕಂಡಿದೆ. ಪರಿಹಾರ ನೀಡುವುದರ ಮೂಲಕ ರೈತರ ರಕ್ಷಣೆಗೆ ಧಾವಿಸಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ರಾಗಿ ಮತ್ತು ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಹಗರಿಬೊಮ್ಮನಹಳ್ಳಿಯಲ್ಲಿ ಕಾರ್ಖಾನೆಗೆ ನೀಡಿದ್ದ ಜಮೀನನನ್ನು ವಾಪಸ್ ನೀಡಬೇಕು. ಸಂಕಷ್ಟದಲ್ಲಿರುವ ಎಲ್ಲ ರೈತರ ಸಾಲಮನ್ನಾ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಏಳಿಗಿ ನಾಗರಾಜ, ಮುದುಕಪ್ಪ ಬಿಜಿಹಳ್ಳಿ, ಮುಗುಲಿ ನಾಗೇಂದ್ರಪ್ಪ, ಕೋಲ್ಕರ್ ಹನುಮಂತಪ್ಪ, ಹುಲುಗಪಗಪ, ಟಿ.ರಾಮಪ್ಪ, ಟಿ.ಗೋಣೆಪ್ಪ. ಶಿವಮ್ಮ, ಎಸ್. ಸೋಮಕ್ಕ, ಲಕ್ಷ್ಮೀದೇವಿ, ಟಿ.ಮಲ್ಲಿಕಾರ್ಜುನ, ಇಬ್ರಾಹಿಂಸಾಬ್, ಎಂ.ನಿಂಗಪ್ಪ, ಎಸ್.ನಿಂಗಪ್ಪ, ಹಳ್ಳಿ ಹನುಮಂತಪ್ಪ, ಟಿ.ಮಂಜುನಾಥ, ಟಿ.ದುರುಗಪ್ಪ ಇದ್ದರು.