Advertisement

ಸೈನಿಕ ಹುಳುಗಳ ಕಾಟಕ್ಕೆ ರೈತರು ತತ್ತರ

04:01 PM Dec 23, 2018 | |

ಇಂಡಿ: ವಿಜಯಪುರ ಜಿಲ್ಲೆಯಲ್ಲಿ ಪರಕೀಯ ಹಾಗೂ ಆಕ್ರಮಣಕಾರಿ ಕೀಟ ನ್ಪೋಡಾಪ್ಟೀರಾ ಫ್ರೂಜಿಪೆರಡಾ ಹಾವಳಿ ಕಂಡುಬಂದಿದ್ದು ಹಾನಿ ಪ್ರಮಾಣವು ಶೇ. 20ರಿಂದ 70ರವರೆಗೆ ವರದಿಯಾಗಿದೆ.

Advertisement

ತೀವೃವಾಗಿ ಹಾರಬಲ್ಲ ಹಾಗೂ ಅಷ್ಟೇ ತೀಕ್ಷ್ಣ ಮಟ್ಟದಲ್ಲಿ ಬೇಗನೆ ಹರಡಿ ಬೆಳೆಗಳಿಗೆ ಹಾನಿ ಮಾಡುತ್ತ ಸ್ವಪ್ನ ಪಿಶಾಚಿಯಾಗಿ ಇದು ಕಾಡಬಲ್ಲದೆಂದು ರುಜುವಾತು ಆಗಿದೆ. ಈ ಕೀಟ ವ್ಯಾಪಕವಾಗಿ ಮೆಕ್ಕೆಜೋಳ ಬೆಳೆಯಲ್ಲಿ ಹರಡಿದ್ದು ಬೆಳೆಯ ಸುಳಿಯಲ್ಲಿ ಇದ್ದು ಹಗಲು ರಾತಿಯಿಡಿ ಚಟುವಟಿಕೆಯಿಂದ ಕೂಡಿ ಎಲೆ ತಿನ್ನುತ್ತ ಬೆಳೆ ಹಾನಿ ಮಾಡುತ್ತಿದೆ.

ನಿರಂತರವಾಗಿ ಆಹಾರ ಭಕ್ಷಿಸುವ ಬೆಳೆದ ಕೀಡೆಗಳು ತಾವು ತಿನ್ನುವ ಆಹಾರ ಖಾಲಿಯಾದ ತಕ್ಷಣ ಆಹಾರ ಅನ್ವೇಷಣೆಯಲ್ಲಿ ಒಂದು ಗದ್ದೆಯಿಂದ ಮತ್ತೂಂದು ಗದ್ದೆಗೆ ಸೈನಿಕೋಪಾದಿಯಲ್ಲಿ ಪಸರಿಸುವ ಶಕ್ತಿ ಹೊಂದಿವೆ. ಗೋವಿನ ಜೋಳದ ಬೆಳೆ ಹಾನಿ ಮಾಡುವ ಈ ಕೀಟವು ಬಕಾಸುರನಂತೆ ತನಗೆ ಲಭ್ಯವಿರುವ ಎಲ್ಲ ಬೆಳೆಗಳನ್ನು ತಿಂದು ತೇಗುವ ಬಹುಮುಖ ಗುಣ ಹೊಂದಿದೆ.

ಭತ್ತ, ಜೋಳ, ಕಿರು ಧಾನ್ಯಗಳು, ಸೋಯಾಬಿನ್‌, ಗೋಧಿ, ಕುದುರೆಮೆಂತೆ, ಹತ್ತಿ ಹಾಗೂ ಮೇವಿನ ಬೆಳೆಗಳಿಗೆ ಈ ಕೀಟದ ಬಾಧೆ ಹೆಚ್ಚಾಗಿದ್ದು ನಿರಂತರ ಆಹಾರ ಬೆಳೆ ಸಿಗುತ್ತಿರುವುದರಿಂದ ಕೀಟದ ಬಾಧೆ ಇನ್ನೂ ತೀವ್ರವಾಗುವ ಸಂಭವವಿದೆ. ಈ ಕೀಟವು ತನ್ನ ಜೀವನ ಚಕ್ರವನ್ನು 30-40 ದಿವಸಗಳಲ್ಲಿ ಪೂರ್ಣಗೊಳಿಸಬಲ್ಲದಾಗಿದ್ದು ಪ್ರೌಢ ಪತಂಗವು ಒಂದು ರಾತ್ರಿಯಲ್ಲಿ ಕನಿಷ್ಠ 100 ಕಿ.ಮೀ. ದೂರ ಕ್ರಮಿಸಬಲ್ಲದು.

ಹಾನಿ ಲಕ್ಷಣಗಳು: ಮೊಟ್ಟೆಯಿಂದ ಬಂದ ಮರಿಗಳು ಗುಂಪಿನಲ್ಲಿದ್ದು ಮೊದಲು ಮೊಟ್ಟೆಯ ಸಿಪ್ಪೆಯನ್ನೆ ತಿಂದು ಬದುಕುವವು. ತದ ನಂತರ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿಂದು ಬದಕುತ್ತವೆ. ಇಂತಹ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೋಚರಿಸಿ, ಎಲೆಗಳಲ್ಲಿ ದೊಡ್ಡ ದೊಡ್ಡ ಹಾಗೂ ಸಾಲಿನಲ್ಲಿರುವ ಕಿಡಕಿಗಳನ್ನು ಅಥವಾ ರಂಧ್ರಗಳನ್ನು ಕೊರೆಯುತ್ತದೆ. ಗೋವಿನ ಜೋಳದ
ಬೆಳೆಯಲ್ಲಿ ಸಮಾನಾಂತರವಾಗಿ ಈ ರೀತಿಯ ರಂಧ್ರಗಳನ್ನು ಗಮನಿಸಿದರೆ ಆಕ್ರಮಣಕಾರಿ ಕೀಟವು ಒಳಗಡೆ ಇದೆಎಂದು ಭಾವಿಸಬೇಕು. 

Advertisement

ಕೀಟದ ಬಾಧೆ ತೀವೃವಾದಲ್ಲಿ ಬೆಳೆಯುತ್ತಿರುವ ಸುಳಿಯನ್ನೇ ತಿಂದು ಹಾಕಿ ಬೆಳೆಗೆ ತೀವೃ ಹಾನಿ ಉಂಟು ಮಾಡಬಲ್ಲದು. ಕೀಡೆಗಳು ಬೆಳೆದಂತೆ ಹಾನಿ ಮಟ್ಟ ತೀವೃವಾಗುತ್ತದೆ. ಬೆಳೆದ ಕೀಡೆಗಳು ಒಂದನ್ನೊಂದು ತಿಂದು ಕೀಟ ಭಕ್ಷಕ ಪ್ರವೃತ್ತಿಯನ್ನು ತೋರುತ್ತವೆ. 

ತಾತ್ಕಾಲಿಕ ನಿರ್ವಹಣಾ ಕ್ರಮಗಳು: ಪತಂಗಗಳ ಚಟುವಟಿಕೆಯನ್ನು ಬೆಳಕಿನ ಬಲೆ ಅಥವಾ ಲಿಂಗಾಕರ್ಷಕ ಬಲೆಗಳಿಂದ ಕಂಡುಕೊಳ್ಳಬಹುದು.  ಈಗಾಗಲೇ ಕೀಟದ ಹಾನಿಯು ವರದಿಯಾಗಿರುವ ಜಿಲ್ಲೆಗಳಲ್ಲಿ ರೈತರು ಲ್ಯಾಮಾ ಸೈಹೆಲೋತ್ರಿನ್‌, 0.5 ಮಿ.ಲೀ, ಎಮಾಮೆಕ್ಟಿನ್‌ ಬೆಂಜೋಯೇಟ್‌ 5 ಎಸ್‌ಐ, 0.4 ಗ್ರಾಂ ಹಾಗೂ ಕ್ಲೋರ್‍ಯಾಂಟ್ರಿನಿಲಿಪೊಲ್‌ 18.5 ಎಸ್‌ಸಿ, 0.2 ಮಿ.ಲೀ ಪ್ರತಿ ಲೀ. ನೀರಿಗೆ ಸಿಂಪಡಿಸಿದಾಗ ಯಶಸ್ವಿ ನಿಯಂತ್ರಣ ಕಂಡು ಬಂದಿರುವುದಾಗಿ ರೈತರು ಮಾಹಿತಿ ನೀಡಿದ್ದಾರೆ. ಪ್ರತಿ ಹೆಕ್ಟೇರ್‌ಗೆ ಬೇಕಾಗುವ 50 ಕೆಜಿ ಭತ್ತ ಅಥವಾ ಗೋದಿ ತೌಡಿನ ಮೇಲೆ 5 ಲೀ. ನೀರಿನಲ್ಲಿ 250 ಮಿ.ಲೀ. ಮೊನೊಕ್ರೋಟೋಫಾಸ್‌ 36 ಎಸ್‌. ಎಲ್‌. ಕೀಟನಾಶಕವನ್ನು 2 ಕೆಜಿ ಬೆಲ್ಲದೊಂದಿಗೆ ಬೆರೆಸಿ ತೌಡಿನ ಮೇಲೆ ಸಿಂಪರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಪಾಷಾಣವನ್ನುಒಂದರಿಂದಎರಡು ದಿನ ಗೋಣಿ ಚೀಲದಲ್ಲಿ ಮುಚ್ಚಿಡಬೇಕು. ನಂತರ ಸಾಯಾಂಕಾಲದ ವೇಳೆ ಬೆಳೆಗಳ
ಮೇಲೆ ವಿಷ ಪಾಷಾಣ ಎರಚಬೇಕು. ಹೆಚ್ಚಿನ ಮಾಹಿತಿಗಾಗಿ ಸೈಯದ್‌ ಸಮೀನ ಅಂಜುಮ್‌ (9739321487) ಮತ್ತು ಡಾ| ಆರ್‌. ಬಿ. ನೆಗಳೂರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಇಂಡಿ (7829629407) ಇವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next