Advertisement

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

12:24 AM May 17, 2022 | Team Udayavani |

ದಾವಣಗೆರೆ: ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರ ವಾಗುವ ಭೂಮಿಯನ್ನು ರೈತರಿಗೆ ಹಂಚುವ ಸರಕಾರದ ತೀರ್ಮಾನಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದು, ಆದರೆ ಇದಕ್ಕೆ ಗುತ್ತಿಗೆ ಪದ್ಧತಿ ಜಾರಿಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಕಂದಾಯ ಇಲಾಖೆಗೆ ಹಸ್ತಾಂತರವಾಗುವ ಆರು ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಐದು ಲಕ್ಷ ಹೆಕ್ಟೇರ್‌ ಅನ್ನು 15 ವರ್ಷಕ್ಕೂ ಮೊದಲು ಸಾಗುವಳಿ ಮಾಡುತ್ತಿರುವವರಿಗೆ ವಾರ್ಷಿಕ ಶುಲ್ಕ ನಿಗದಿಪಡಿಸಿ 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲು ಸರಕಾರ ನಿರ್ಧರಿಸಿದೆ. ಇದರಿಂದ ರಾಜ್ಯದಲ್ಲಿರುವ ಬಗರ್‌ಹುಕುಂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬುದು ಸರಕಾರದ ನಿರೀಕ್ಷೆ. ಆದರೆ ಗುತ್ತಿಗೆ ಪದ್ಧತಿಯು ಬಗರ್‌ಹುಕುಂ ಸಮಸ್ಯೆಗೆ ಪರಿಹಾರವಲ್ಲ ಎಂಬುದು ರೈತರ ವಾದ.

ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕೆಂದು ರೈತರು ರಾಜ್ಯಾದ್ಯಂತ ನಿರಂತರವಾಗಿ ಪ್ರತಿ ಭಟನೆ, ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇದಕ್ಕಾಗಿ ಲಕ್ಷಾಂತರ ಅರ್ಜಿಗಳು ಸಲ್ಲಿಕೆ ಯಾಗಿವೆ. ಸಾಗುವಳಿ ಭೂಮಿ ಸಕ್ರಮಗೊಳಿಸಿ ಒತ್ತುವರಿದಾರ ರೈತರ ಹೆಸರಿಗೆ ಹಕ್ಕುಪತ್ರ ನೀಡಬೇಕು ಎಂಬುದು ರೈತರ ಬೇಡಿಕೆ.

ಒತ್ತುವರಿ ಮಾಡಿಕೊಂಡವರಲ್ಲಿ ಸಣ್ಣ, ಅತೀ ಸಣ್ಣ ರೈತರೇ ಹೆಚ್ಚು. ಸರಕಾರದ ಅಂಕಿ ಅಂಶದ ಪ್ರಕಾರ ಹೇಳುವುದಾದರೆ ಐದು ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡವರ ಸಂಖ್ಯೆ ಶೇ. 90ರಷ್ಟಿದೆ. ಸರಕಾರಕ್ಕೆ ವಾರ್ಷಿಕ ಗುತ್ತಿಗೆ ಹಣ ತುಂಬಿ ಸಾಗುವಳಿ ಮಾಡುವುದು ಸಣ್ಣ ರೈತರಿಗೆ ಹೊರೆಯಾಗಲಿದ್ದು, ಆದ್ದರಿಂದ ಗುತ್ತಿಗೆ ಪದ್ಧತಿಯನ್ನು ರೈತರು ವಿರೋಧಿಸುತ್ತಿದ್ದಾರೆ.

ಕೃಷಿ ಸೌಲಭ್ಯ ಮರೀಚಿಕೆ
ಒತ್ತುವರಿ ಭೂಮಿಯನ್ನು ಗುತ್ತಿಗೆ ಪದ್ಧತಿಯಲ್ಲಿ ನೀಡಿದರೆ ಸರಕಾರವೇ ಭೂಮಿಯ ಅಧಿಕೃತ ಮಾಲಕತ್ವ ಪಡೆಯುತ್ತದೆ. ಬಿತ್ತನೆ ಬೀಜದಿಂದ ಹಿಡಿದು ಯಾವುದೇ ಸೌಲಭ್ಯ ಪಡೆಯಬೇಕಾದರೆ ರೈತನ ಹೆಸರಲ್ಲಿ ಪಹಣಿ ಇರಬೇಕು. ಆದ್ದರಿಂದ ಸರಕಾರ ಒತ್ತುವರಿ ದಾರರ ಹೆಸರಿಗೆ ಪಹಣಿ ಕೊಡುವ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಆಗ್ರಹ.

Advertisement

ಷರತ್ತು ಹಾಕಿ ಮಾಲಕತ್ವ ಕೊಡಲಿ
ಭೂಮಿಯನ್ನು ಸಾಗುವಳಿದಾರರ ಹೆಸರಿಗೆ ನೀಡಲಿ. ಅಗತ್ಯಬಿದ್ದರೆ ದೀರ್ಘಾವಧಿಗೆ ಪರಭಾರೆ ಮಾಡದಂತೆ ನಿಯಮ ಮಾಡಲಿ. ಜತೆಗೆ ಒಂದಿಷ್ಟು ಭೂಮಿಯಲ್ಲಿ ಮರಗಳನ್ನು ಬೆಳೆಸುವುದನ್ನೂ ಕಡ್ಡಾಯಗೊಳಿಸಲಿ ಎನ್ನುತ್ತಾರೆ ಒತ್ತುವರಿ ಭೂಮಿ ಹೊಂದಿರುವ ರೈತರು.

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next