Advertisement

ರೈತರಿಗೆ ಸಾಲ ಮನ್ನಾ ಚಾಲ್ತಿ ಸಂಕಷ್ಟ

12:30 AM Mar 14, 2019 | |

ಬೆಂಗಳೂರು: ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ, ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತಿಲ್ಲ. ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರಿಗೆ ಮೊದಲ ಕಂತಿನಲ್ಲಿ 50 ಸಾವಿರ ರೂಪಾಯಿ ಜಮೆ ಮಾಡಿದ್ದು, ಆ ಹಣ ಕಳೆದು ಉಳಿದಹಣವನ್ನು ಬ್ಯಾಂಕ್‌ಗೆ ಕಟ್ಟಿ ಸಾಲ ನವೀಕರಣ ಮಾಡಿಕೊಳ್ಳುವಂತೆ ರೈತರಿಗೆ ಬ್ಯಾಂಕ್‌ಗಳು ಒತ್ತಡ ಹೇರುತ್ತಿವೆ.

Advertisement

ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 31 ಡಿಸೆಂಬರ್‌ 2017 ರವರೆಗೆ ರೈತರ 2 ಲಕ್ಷದ ವರೆಗಿನ ಸಾಲ ಹಾಗೂ ಬಡ್ಡಿ ಸೇರಿಯೇ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು, ಬಾಕಿ ಸಾಲವನ್ನು ಮರು ಪಾವತಿಸಲು ರೈತರಿಗೆ ಯಾವುದೇ ಡೆಡ್‌ಲೈನ್‌ ನೀಡಿಲ್ಲ.ಸಾಲ ಮನ್ನಾ ಯೋಜನೆಯಿಂದ ರೈತರು ಯಾವುದೇ ಹೊಸ ಸಾಲ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಬ್ಯಾಂಕ್‌ಗಳು ಹೆಚ್ಚಿನ ಹಣಕಾಸು ವ್ಯವಹಾರ ನಡೆಸಲು ರೈತರಿಗೆ ಬಾಕಿ ಹಣ ಪಾವತಿಸಲು ಸೂಚನೆ ನೀಡುತ್ತಿರುವುದು ಅವರನ್ನುಗೊಂದಲ ಮತ್ತು ಆತಂಕಕ್ಕೆ ದೂಡಿದೆ. ಕೆಲವು ಬ್ಯಾಂಕ್‌ ಗಳಲ್ಲಿ ಮಾರ್ಚ್‌ 31, 2019ರೊಳಗೆ 2 ಲಕ್ಷದ ಮೇಲಿನ ಬಾಕಿ ಹಣ ಪಾವತಿಸಿದ್ದರೆ, ಸಾಲ ಮನ್ನಾ ಯೋಜನೆ ಸಿಗುವುದಿಲ್ಲ ಎಂದು ಹೇಳಿ ರೈತರಿಗೆ ಆತಂಕ ಸೃಷ್ಟಿಸಲಾಗುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಮೊದಲ ಕಂತಿನ ಹಣದ ಜೊತೆಗೆ ಬಾಕಿ ಹಣವನ್ನು ಪಾವತಿಸಿ ಚಾಲ್ತಿ ಸಾಲ ಮಾಡಿಕೊಳ್ಳಲು ಹೇಳುತ್ತಿರುವುದೂ ಕೂಡ ರೈತರು ಸಾಲ ಮನ್ನಾದಿಂದ ತಮಗೆ ಬರಬೇಕಿರುವ ಬಾಕಿ ಹಣದಿಂದ ವಂಚಿತ ರಾಗುತ್ತೇವೆ ಎಂಬ ಆತಂಕ ರೈತರಲ್ಲಿ ಮೂಡಿದೆ. ಯಾವುದೇ ಡೆಡ್‌ಲೈನ್‌ ಇಲ್ಲ: 2 ಲಕ್ಷಕ್ಕಿಂತ ಹೆಚ್ಚಿನ ಸಾಲದ ಮೊತ್ತವನ್ನು ಬ್ಯಾಂಕ್‌ಗಳಿಗೆ ಮರು ಪಾವತಿ ಮಾಡಲು ಸರ್ಕಾರ ಯಾವುದೇ ಡೆಡ್‌ಲೈನ್‌ ನೀಡಿಲ್ಲ.ರೈತರು ತಮ್ಮ ಜಮೀನಿನ ಪಹಣಿ, ಆಧಾರ್‌ ಹಾಗೂ ರೇಷನ್‌ ಕಾರ್ಡ್‌ ಗಳ ದಾಖಲೆಯನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿದರೆ, ಸರ್ಕಾರ ರೈತರ ಸಾಲದ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡುತ್ತದೆ.

ಒಂದು ಲಕ್ಷಕ್ಕಿಂತ ಹೆಚ್ಚು ಪಾವತಿಸಿದರೆ ಮಾತ್ರ ಅನ್ವಯ: ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಯೋಜ ನೆಗೆ ಅರ್ಹರಿರುವ 1 ಲಕ್ಷ ರೂಗಳ ಅಸಲು ಮತ್ತು ಸಂಪೂರ್ಣ ಚಾಲ್ತಿ ಸಾಲಕ್ಕೆ ಸಂಬಂಧಿಸಿದ ಬಡ್ಡಿಯನ್ನು “ಬಡ್ಡಿ ಸಹಾಯಧನ ಯೋಜನೆ’ ಅಡಿ ಯಲ್ಲಿ ಭರಿಸಲಾಗುವುದು. ಸುಸ್ತಿ ಪ್ರಕರಣದಲ್ಲಿ ಬಡ್ಡಿ ಮತ್ತು 1 ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು 2019ರ ಮಾರ್ಚ್‌ 31 ರೊಳಗೆ ಮರು ಪಾವತಿಸಲೇಬೇಕು. ಇಲ್ಲದಿದ್ದರೆ ಸಾಲ ಮನ್ನಾ ಯೋಜನೆ ಸಿಗುವುದಿಲ್ಲ.

ಸರ್ಕಾರ ಈಗ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ, ಆದರೆ, ಆ ಹಣದ ಜೊತೆಗೆ ಉಳಿದ ಹಣವನ್ನು ಕಟ್ಟಿ ರಿನಿವಲ್‌ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ. ಬ್ಯಾಂಕಿನವರು ಚಾಲ್ತಿ ಖಾತೆ ಎಂದು ವರದಿ ನೀಡಿದರೆ, ನಾವು ಸಾಲ ಮನ್ನಾದಿಂದವಂಚಿತರಾಗುವ ಹೆದರಿಕೆ ಇದೆ.

– ಮಲ್ಲಿಕಾರ್ಜುನ ಮುರಕಟ್ಟಿ, ರೈತ

Advertisement

— ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next