Advertisement

ರೈತರಿಗೆ ಆತ್ಮಸ್ಥೈರ್ಯ ತುಂಬಿ: ವೀರೇಂದ್ರ ಹೆಗ್ಗಡೆ

12:33 PM Nov 03, 2018 | Team Udayavani |

ಮೈಸೂರು: ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳದೆ, ಸರ್ಕಾರ ಮತ್ತು ಸಂಘ ಸಂಸ್ಥೆಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆ ಅವರು ಸಲಹೆ ನೀಡಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೈಸೂರಿನಲ್ಲಿ ರಚಿಸಲಾದ ನೂತನ ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಪಟ್ಟಾಧಿಕಾರಿಯಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ಜನತೆಯ ಪರವಾಗಿ ನೀಡಲಾದ ಗೌರವ ಸಮರ್ಪಣೆ ಸ್ವೀಕರಿಸಿ ಅವರು ಮಾತನಾಡಿದರು.

ಮಹಿಳೆಯರ ಸಬಲೀಕರಣ: ರೈತನ ಆಪ್ರಮಿತ್ರ ಎನಿಸಿಕೊಂಡವರು ಕಷ್ಟಕ್ಕೆ ಸಿಲುಕಿದ ರೈತನಿಗೆ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡುವ ಬದಲಿಗೆ ಸಾಲಕ್ಕೆ ಹೆದರಿ ಸಾಯುವ ಯೋಚನೆ ಮಾಡುತ್ತಿರುವವನಿಗೆ ಪ್ರಪಾತಕ್ಕೆ ತಳ್ಳಿ, ತಾನೂ ಸಾಯುತ್ತಾನೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಲ ಪಡೆದವರು ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಹೀಗಾಗಿ ಯೋಜನೆಯ ಸದ್ವಿನಿಯೋಗ ಮಾಡಿಕೊಳ್ಳಿ. ಯೋಜನೆಯಿಂದ ಮಹಿಳೆಯರ ಸಬಲೀಕರಣವಾಗಿದೆ ಎಂದು ಹೇಳಿದರು.

ಪ್ರಗತಿ ರಕ್ಷಾ ಕವಚ: ಧರ್ಮಸ್ಥಳ ಸ್ವಸಹಾಯ ಸಂಘಗಳಿಂದ ಯಾರೇ ಸಾಲ ಪಡೆದರೂ ಸಾಲದ ಹಣಕ್ಕೆ ವಿಮೆ ಸೌಲಭ್ಯ ಕಲ್ಪಿಸಲು ಪ್ರಗತಿ ರಕ್ಷಾ ಕವಚ ಯೋಜನೆ ರೂಪಿಸಲಾಗಿದೆ. ಸ್ವಸಹಾಯ ಸಂಘಗಳಲ್ಲಿ ಸಾಲಪಡೆದಿರುವ 70 ಲಕ್ಷ ಜನರಿಗೆ ಎಲ್‌ಐಸಿಯ ವಿಮೆ ಸೌಲಭ್ಯ ದೊರೆಯಲಿದೆ.

ಯಾವುದೇ ಕಾರಣದಿಂದ ಮಧ್ಯದಲ್ಲಿ ಸಾಲಪಡೆದವರ ದೇಹಾಂತ್ಯವಾದರೆ ವಿಮೆಯ ಹಣ ಅವರ ಕುಟುಂಬದವರಿಗೆ ದೊರಕುತ್ತದೆ. ಹೀಗಾಗಿ ಈ ಯೋಜನೆಯ ಫ‌ಲವನ್ನು ಹೆಚ್ಚು ಪಡೆದುಕೊಳ್ಳಬೇಕು. ಈ ವರ್ಷ ಸಣ್ಣ ನೀರಾವರಿ ಇಲಾಖೆಯ ಸಹಯೋಗದಲ್ಲಿ ರಾಜ್ಯದ 93 ಕೆರೆಗಳನ್ನು ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಿರುವುದಾಗಿ ಹೇಳಿದರು.

Advertisement

ನೆಮ್ಮದಿಗಾಗಿ ಪ್ರಾರ್ಥಿಸಿ: ರಾಕ್ಷಸರು ಹೊರಗೆಲ್ಲೋ ಇಲ್ಲ, ನಮ್ಮೊಳಗೇ ಇದ್ದಾರೆ. ನನ್ನೊಳಗೆ ಬಲಭಾಗದಲ್ಲಿ ದೇವರು, ಎಡಭಾಗದಲ್ಲಿ ರಾಕ್ಷಸರಿದ್ದಾರೆ. ನ್ಯಾಯದೇವತೆ, ಸತ್ಯದೇವತೆ ಮನೆಗೆ ಬಂದು ಒಳ್ಳೆಯದನ್ನು ಮಾಡು ಎಂದು ಒಂದು ಕಾಲನ್ನು ತಿಕ್ಕಿದರೆ, ರಾಕ್ಷಸರು ಸೋಮಾರಿಗಳಾಗುವಂತೆ ಕಾಲು ತಿಕ್ಕುತ್ತಾರೆ. ನಿಮ್ಮ ಭಾಗ್ಯದ ಬಾಗಿಲು ಈಗ ತೆರೆದಿದೆ. ಕಣ್ಮುಚ್ಚಿ ಕೂರದೆ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.

ಹಿಂದಿನ 20 ಹೆಗ್ಗಡೆಯವರು ಮಾಡಿದ್ದನ್ನು ನಾನು ಮುಂದುವರಿಸುತ್ತಿದ್ದೇನೆ. ಸ್ವಸಹಾಯ ಸಂಘಗಳ ಮೂಲಕ ಕುಟುಂಬ, ಗ್ರಾಮ ವಿಕಾಸದ ಕನಸು ಕಂಡು ಬಳಸಿಕೊಳ್ಳಿ. ನಾಳಿನ ಸುಖ, ನೆಮ್ಮದಿಗಾಗಿ ದೇವರನ್ನು ಪ್ರಾರ್ಥಿಸಿ, ದೇವರು ಕೊಟ್ಟಿದ್ದನ್ನು ಬಳಸಿಕೊಳ್ಳುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳವನ್ನು ಧಾರ್ಮಿಕ ಸಹಿಷ್ಣು ಕ್ಷೇತ್ರವಾಗಿಸಿದ್ದಾರೆ. ಮನುಷ್ಯನನ್ನು ಧಾರ್ಮಿಕ ಕ್ಷೇತ್ರದ ಮೂಲಕ ದೈವತ್ವದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಶ್ರೀಕ್ಷೇತ್ರದಿಂದ ಸಮಾಜಕ್ಕೆ ನೇರವಾಗಿ ಕಾರ್ಯಕ್ರಮಗಳನ್ನು ತಲುಪಿಸಿ ಸಮಾಜದಲ್ಲಿ ಸಮಾನತೆ, ಆರ್ಥಿಕ ಭದ್ರತೆ ಒದಗಿಸಿಕೊಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಮಾತನಾಡಿ, ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯಲ್ಲಿ ಅನೇಕರು ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಹೀಗಾಗಿ ಮಹಿಳಾ ಸಂಘಗಳ ಸಾಲ ಮರುಪಾವತಿಗೆ ಕಾಲಾವಕಾಶ ಕೊಡುವಂತೆ ಮನವಿ ಮಾಡಿದರು. ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಖಾವಂದಿರು ಅಂದರೆ ಧಣಿ ಎಂದು ಅರ್ಥ. ಆದರೆ, ವೀರೇಂದ್ರಹೆಗ್ಗಡೆಯವರು ಧಣಿಯಲ್ಲ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿರುವ ಇವರು ಮಾತನಾಡುವ ಮಂಜುನಾಥ ಎಂದು ಬಣ್ಣಿಸಿದರು.

ಗಾವಡಗೆರೆ ಓಂ ಶ್ರೀಗುರುಲಿಂಗಜಂಗಮ ಮಠದ ನಟರಾಜ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್‌.ನಾಗೇಂದ್ರ, ಗೌರವಾರ್ಪಣ ಸಮಿತಿ ಗೌರವಾಧ್ಯಕ್ಷರಾದ ವಿಧಾನಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್‌, ಡಿ.ಮಾದೇಗೌಡ, ಸಮಿತಿ ಕಾರ್ಯಾಧ್ಯಕ್ಷ ಎಚ್‌.ವಿ.ರಾಜೀವ್‌ ಉಪಸ್ಥಿತರಿದ್ದರು.

ಮಹಾರಾಷ್ಟ್ರದಿಂದ ರೈತರ ಆತ್ಮಹತ್ಯೆ ಗಾಳಿ ಕರ್ನಾಟಕಕ್ಕೂ ಬಂದಿರುವುದು ಚಿಂತೆಗೀಡು ಮಾಡಿದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಪಾಪ ಮಾತ್ರವಲ್ಲ, ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನು ಅನಾಥ ಮಾಡಿ ಹೋಗುವವರನ್ನು ದೇವರು ಕೂಡ ಕ್ಷಮಿಸುವುದಿಲ್ಲ.
-ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next