Advertisement

ಅಗಸಬಾಳ ಕೆರೆಗೆ ನೀರು ತುಂಬಿಸಲು ರೈತರ ಆಗ್ರಹ

12:09 PM Feb 05, 2019 | |

ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಕೆರೆಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಅಗಸಬಾಳ, ಹಳ್ಳೂರ, ಜಾಯವಾಡಗಿ, ಕಾನ್ಯಾಳ ಗ್ರಾಮ ವ್ಯಾಪ್ತಿಯ ನೂರಾರು ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದರು.

Advertisement

ಎಪಿಎಂಸಿ ಮೂಲಕ ಹಲಗೆ ಬಾರಿಸುತ್ತ ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿದ ರೈತರು ಅಲ್ಲಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ರೈತರನ್ನುದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಅರವಿಂದ ಕೊಪ್ಪ, ಸಂಗಣ್ಣ ಬಾಗೇವಾಡಿ, ವೈ.ಎಲ್‌. ಬಿರಾದಾರ ಮಾತನಾಡಿ, ಜನಪ್ರತಿನಿಧಿಗಳ ಮಲತಾಯಿ ಧೋರಣೆ ಖಂಡಿಸಿದರು.

ಮಳೆ ಕೈ ಕೊಟ್ಟಿದ್ದರಿಂದ 10 ವರ್ಷಗಳ ನಿರಂತರ ಬರಗಾಲಕ್ಕೆ ಈ ಭಾಗ ತುತ್ತಾಗಿದೆ. ಬೋರ್‌ವೆಲ್‌, ಬಾವಿ ಮುಂತಾದ ಜಲಮೂಲಗಳಲ್ಲಿ ಅಂತರ್ಜಲವೂ ಕೈಕೊಟ್ಟಿದ್ದರಿಂದ ಪರಿಸ್ಥಿತಿ ಗಂಭಿರವಾಗತೊಡಗಿದೆ. ತಾಲೂಕಿನಲ್ಲೇ ದೊಡ್ಡದಾಗಿರುವ ಈ ಕೆರೆಯಲ್ಲಿ ನೀರಿದ್ದಾಗ ಸುತ್ತಲಿನ ಹಳ್ಳಿಗಳ ಜನರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಬರಗಾಲ ಪರಿಣಾಮ ಕೆರೆ ಬತ್ತಿ ಹೋಗಿ ಬಂಜರು ಭೂಮಿಯಂತಾಗಿದೆ. ಇದೇ ಪರಿಸ್ಥಿತಿ ಸುತ್ತಲಿನ ಜಮೀನುಗಳಲ್ಲೂ ಇದೆ. ಪಕ್ಷಿ, ಪ್ರಾಣಿಗಳು ನೀರಿಲ್ಲದೆ ಸಾಯುತ್ತಿವೆ. ಜನರ ಪರಿಸ್ಥಿತಿಯೂ ಗಂಭಿರವಾಗತೊಡಗಿದೆ. ನೀರಿಗಾಗಿ ಎಲ್ಲ ಕಡೆ ಅಲೆದಾಡುವಂತಾಗಿದೆ ಎಂದು ಮನವಿಯಲ್ಲಿ ಸಮಸ್ಯೆ ಬಿಡಿಸಿಡಲಾಗಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಕೆರೆ ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಮಧ್ಯ ಚುನಾವಣೆ ಬಂದಿದ್ದರಿಂದ ಯೋಜನೆ ನನೆಗುದಿಗೆ ಬಿತ್ತು. ಆನಂತರ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಪ್ರಯೋಜನ ಆಗಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು, ಸಚಿವರು ಎಚ್ಚೆತ್ತುಕೊಂಡು 15 ದಿನಗಳಲ್ಲಿ ಈಗಿನ ಮಟ್ಟಿಗಾದರೂ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ 3 ಕಿ.ಮೀ. ಅಂತರದಲ್ಲಿರುವ ಆಲಕೊಪ್ಪರ-ಕಣಕಾಲ ಬಳಿ ಕಾಲುವೆ ಪ್ರಯೋಜನ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ. ಆ ವೇಳೆ ಪ್ರಾಣಾಹುತಿ ಆದರೆ ಅದಕ್ಕೆ ಸರ್ಕಾರ, ತಾಲೂಕು, ಜಿಲ್ಲಾ ಆಡಳಿತಗಳೇ ಹೊಣೆಯಾಗಬೆಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಅರವಿಂದ ಕೊಪ್ಪ, ಎನ್‌.ಆರ್‌. ಮೊಕಾಶಿ, ಅರವಿಂದ ಕಾಶಿನಕುಂಟಿ, ದುಂಡೇಶ ಅರಸುಣಗಿ, ಆರ್‌.ಎಸ್‌. ಪಾಟೀಲ, ಬಸನಗೌಡ ಪಾಟೀಲ, ರಾಜು ಕಾಶಿನಕುಂಟಿ, ರಾಮಣ್ಣ ಕುಂಬಾರ, ಹನುಮಂತ್ರಾಯ ಕುಂಬಾರ, ಹನುಮಂತ್ರಾಯ ಬಿಸನಾಳ, ಶಶಿಧರ ಕಾಶಿನಕುಂಟಿ ಸೇರಿದಂತೆ ನೂರಾರು ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next