ವಿಜಯಪುರ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ವಿಜಯ ಪೂಜಾರ ಮಾತನಾಡಿ, ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದಿಲ್ಲ. ಹೀಗಾಗಿ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆದು ಆದೇಶ ಹೊರಡಿಸಬೇಕು. ಕೃಷ್ಣಾ ನದಿಯ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 524.264 ಅಡಿಗೆ ಗೇಟ್ ಎತ್ತರಿಸಬೇಕು. ಡಾ| ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಜಾನುವಾರು ಹತ್ಯೆ ಕಾಯ್ದೆ ಹಿಂಪಡೆದು ಕಾನೂನಾತ್ಮಕವಾಗಿ ಬೆಂಬಲ ಬೆಲೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಹಕಾರಿ, ಖಾಸಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ನಂತರ ಬಡ್ಡಿ ರಹಿತ ಸಾಲ ವಿತರಿಸಬೇಕು. ರಾಜ್ಯ ಸರ್ಕಾರದ ಗೋಮಾಳ ಜಮೀನುಗಳನ್ನು ಯಾವುದೇ ಉದ್ಯಮಿಗಳು ಅಥವಾ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡದೆ ಯಥಾಸ್ಥಿತಿ ಕಾಪಾಡಬೇಕು. ದೆಹಲಿಯಲ್ಲಿ ನಡೆದ ರೈತ ಚಳವಳಿಯಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿಜಯುಪುರ ಜಿಲ್ಲೆಯಾದ್ಯಂತ ಬರುವ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಬೇರೆ ಬೇರೆ ಬೆಲೆ ನಿಗದಿಪಡಿಸಿದ್ದು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ 2900 ರೂ.ನಂತೆ ಕಬ್ಬಿನ ದರ ನಿಗದಿಪಡಿಸಬೇಕು. ಗುತ್ತಿ ಬಸವೇಶ್ವರ ಏತ ನೀರಾವರಿ ಯೋಜನೆಯ ನೀರು ಸಿಂದಗಿ ತಾಲೂಕಿನ ಮಾತ್ರ ನೀರು ಸೀಮಿತವಾಗಿರುತ್ತದೆ. ಸದರಿ ನೀರನ್ನು ಆಲಮೇಲ ತಾಲೂಕಿನ ಎಲ್ಲ ಹಳ್ಳಿಗಳ ನೀರಾವರಿ ವ್ಯಾಪ್ತಿಗೆ ಹರಿಸಬೇಕು. ಸಿಂದಗಿ ತಾಲೂಕಿನ ಗೊರವಗುಂಡಗಿ ಮತ್ತು ಸುಂಗಠಾಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ತಕ್ಷಣವೇ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಮಂಜುನಾಥ ಬಿರಾದಾರ, ಆಯಪ್ಪ ಬಿದರಗುಂದಿ, ವೈ.ಎಲ್. ಬಿರಾದಾರ, ಗುರುನಾಥ ನಾಟೀಕಾರ, ಸಂತೋಷ, ಗಂಗಾ ಪಾಟೀಲ, ಶಾರದಾ ಕಾಳಣ್ಣವರ, ಶಂಕರ ದೇಶವಂತ, ಲಲಿತಾ ಬಿರಾದಾರ, ಶಾಂತಾ ಕೋಳೂರ, ವಿಜಯಲಕ್ಷ್ಮೀ ಡೊಮನಾಳ, ವೀರಣ್ಣ ಕೆರೂರ ಸೇರಿದಂತೆ ಇತರರು ಇದ್ದರು.