ಶಹಾಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಕೆರೆ ಹೂಳೆತ್ತುವ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿವೆ. ಕೆರೆ ಒತ್ತುವರಿ ಮತ್ತು ರೈತರು ಮಣ್ಣು ತೆಗೆದುಕೊಂಡು ಹೋಗದಿರುವುದು ಸೇರಿದಂತೆ ಕೆಲವು ಕೆರೆ ಮಣ್ಣು ಸವಳು ಇದೆ ಎಂಬ ಕಾರಣ ಸೇರಿದಂತೆ ಹಲವು ವಿಘ್ನ ನಿವಾರಿಸುವಲ್ಲಿ ಶಹಾಪುರ ತಾಲೂಕು ಆಡಳಿತ ವಿಫಲವಾಗಿದೆ.
ತಾಲೂಕಿನ 51 ಕೆರೆ ಹೂಳೆತ್ತುವ ಕಾರ್ಯಕ್ಕೆ ಕಳೆದ ವಾರ ಅಷ್ಟೇ ಸ್ಥಳೀಯ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಾಲೂಕಿನ ಉಕ್ಕಿನಾಳ ಗ್ರಾಮದ ಕೆರೆಯಲ್ಲಿ ಚಾಲನೆ ನೀಡಿದ್ದರು.
ಹೂಳೆತ್ತಲು ಜೆಸಿಬಿ ಯಂತ್ರಗಳನ್ನು ಯಾದಗಿರಿ ಜಿಲ್ಲೆಯ ಜೈನ್ ಸಂಘಟನೆ ಉಚಿತವಾಗಿ ನೀಡುತ್ತಿದೆ. ಜಿಲ್ಲಾಡಳಿತ ಯಂತ್ರಗಳಿಗೆ ಡೀಸೆಲ್ ಒದಗಿಸುವ ಕಾರ್ಯ ಮಾಡುತ್ತಿದೆ. ಅಲ್ಲದೆ ಕೆರೆ ಫಲವತ್ತಾದ ಹೂಳನ್ನು ರೈತರು ತಮ್ಮ ಜಮೀನಿಗೆ ಟ್ರ್ಯಾಕ್ಟರ್ ಮೂಲಕ ಹೊತ್ತೂಯ್ಯಲು ಗ್ರಾಮೀಣ ಭಾಗದಲ್ಲಿ ಡಂಗೂರ ಸಾರಿದೆ.
ಆದಾಗ್ಯು ಕೆರೆ ಹೂಳನ್ನು ಒಯ್ಯಲು ಇಲ್ಲಿನ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೆ ನಗರದ ಮಾವಿನ ಕೆರೆಯಲ್ಲೂ ಹೂಳೆತ್ತುವ ಕಾರ್ಯ ನಡೆದಿದೆ. ಹೂಳನ್ನು ತುಂಬಲು ಇಲ್ಲಿನ ಜೆಸಿಬಿ ಯಂತ್ರದ ಚಾಲಕ ಪ್ರತಿ ಟ್ರ್ಯಾಕ್ಟರ್‌ಗೆ 80 ರೂ. ಕೇಳುತ್ತಿದ್ದಾರೆ. ಮತ್ತು ಟ್ರ್ಯಾಕ್ಟರ್ ಬಾಡಿಗೆ ಹಣ ಬೇರೆ ನೀಡಬೇಕು. ಮೊದಲೇ ಬರದಿಂದ ತತ್ತರಿಸಿ ಹೋದ ನಾವುಗಳು ಎಲ್ಲಿಂದ ಇಷ್ಟೊಂದು ಹಣ ಭರಿಸಿ ಮಣ್ಣು ತೆಗೆದುಕೊಂಡು ಏನು ಮಾಡುವದಿದೆ ಎಂದು ರೈತ ಶರಣಪ್ಪ ಬೇಸರ ವ್ಯಕ್ತಪಡಿಸಿದ್ದಾನೆ.
ಅಲ್ಲದೆ ತಾಲೂಕಿನ ಉಕ್ಕಿನಾಳ, ಚಾಮನಾಳ ಮತ್ತು ನಡಿಹಾಳ ಗ್ರಾಮದ ಕೆರೆ ಹೂಳು ಚೆನ್ನಾಗಿ ಇರುವುದಿಲ್ಲ. ಸವಳು ಮಿಶ್ರಿತ ಮಣ್ಣಾಗಿರುವುದರಿಂದ ಇದನ್ನು ಯಾರೊಬ್ಬ ರೈತರು ಒಯ್ಯುತ್ತಿಲ್ಲ. ಕಾರಣ ಸವಳು ಮಣ್ಣು ಹೊಂದಿದ ಕೆರೆಗಳ ಹೂಳೆತ್ತುವ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ಅಲ್ಲದೆ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಉಕ್ಕಿನಾಳ ಕೆರೆಯ ಹೂಳು ತೆಗೆದು ಕಾಲುವೆ ಮೂಲಕ ನೀರು ತುಂಬಿಸಲು 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹೂಳನ್ನು ತೆಗೆದುಕೊಂಡು ಹೋಗದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆರೆ ಒತ್ತುವರಿ ತೆರವುಗೊಳಿಸಲು ಮನವಿ ತಾಲೂಕಿನ 51 ಕೆರೆ ಹೂಳೆತ್ತುವ ಕಾರ್ಯ ಪ್ರಧಾನಿ ಮೋದಿ ಅವರ ಮಹತ್ವಕಾಂಕ್ಷೆ
ಯೋಜನೆಯಾಗಿದ್ದು, ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಆಯಾ ತಾಲೂಕು ಆಡಳಿತ ಕೆರೆಗಳ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸುವ ಮೂಲಕ ಕೆರೆ ಹೂಳೆತ್ತಲು ಅನುಕೂಲ ಕಲ್ಪಿಸಬೇಕೆಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಭಾವಿ ವ್ಯಕ್ತಿಗಳಿಂದ ಕೆರೆಗಳ ಒತ್ತುವರಿಯಾಗಿದ್ದು, ಇಲ್ಲಿನ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆ ಅಧಿ ಕಾರಿಗಳು ಕೆರೆಯ ಸಮರ್ಪಕ ವಿಸ್ತೀರ್ಣ ಹಾಗೂ ಗಡಿ ಭಾಗ ಗುರುತಿಸಿಕೊಡಲು ಹಿಂದೇಟು ಹಾಕುತ್ತಿದ್ದಾರೆ. ಒತ್ತುವರಿ ಮಾಡಿ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೂಡಲೇ ಕೆರೆ ಸರ್ವೇ ಕಾರ್ಯ ನಡೆಸಬೇಕು.
ಯಲ್ಲಯ್ಯ ನಾಯಕ, ರೈತ ಮುಖಂಡ
ಮಲ್ಲಿಕಾರ್ಜುನ ಮುದ್ನೂರ