Advertisement
ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ, ಬೆಳೆ ಸಾಲ ಮನ್ನಾ ಸೇರಿದಂತೆ ಇತ್ಯರ್ಥವಾಗದೇ ಇರುವ ತಮ್ಮ ಬೇಡಿಕೆಗಳಿಗೆ ಸಂಬಂಧಿಸಿ ಪ್ರತಿಭಟನೆ ಪುನರಾರಂಭಿಸಲು ಚಿಂತನೆ ನಡೆಸಿರುವುದಾಗಿ ಎಸ್‌ಕೆಎಂ ಹೇಳಿದೆ. ಸಂಘಟನೆಯ ಸಾಮಾನ್ಯ ಸಭೆಯ ಬೆನ್ನಲ್ಲೇ ಗುರುವಾರ ಮಾತನಾಡಿದ ರೈತ ನಾಯಕರು, “ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದ ಮನವಿ ಪತ್ರವನ್ನು ಜು.16ರಿಂದ 18 ರೊಳಗೆ ಪ್ರಧಾನಿ ಮೋದಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. 2021 ಡಿ.9ರಂದು ಕೇಂದ್ರವು ನಮ್ಮೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಒಪ್ಪಂದದಂತೆ ಬೇಡಿಕೆಗಳನ್ನು ಈಡೇರಿಸಬೇಕೆಂಬುದು ನಮ್ಮ ಆಗ್ರಹ ಎಂದಿದ್ದಾರೆ. ದೇಶವ್ಯಾಪಿ ಪ್ರತಿಭಟನೆ: ಜಮ್ಮು-ಕಾಶ್ಮೀರ ಸೇರಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳನ್ನು ಕೇಂದ್ರೀಕರಿಸಿ ಈ ಬಾರಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆಂದು ಎಸ್‌ಕೆಎಂ ಹೇಳಿದೆ.
ಆಗಸ್ಟ್ 9ರ ಕ್ವಿಟ್ ಇಂಡಿಯಾ ದಿನವನ್ನು ನಾವು “ಕಾರ್ಪೊರೇಟ್ ಕ್ವಿಟ್ ಇಂಡಿಯಾ ದಿನ’ವನ್ನಾಗಿ ಆಚರಿಸಲಿದ್ದೇವೆ. ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಭಾರತವು ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಒ)ಯಿಂದ ಹೊರಬರಬೇಕು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ದೇಶದ ಕೃಷಿ ಕ್ಷೇತ್ರವನ್ನು ಪ್ರವೇಶಿಸಲು ಬಿಡಬಾರದು ಎಂದೂ ಸಂಘಟನೆ ಆಗ್ರಹಿಸಿದೆ. ರೈತ ಸಂಘಟನೆಯ ಬೇಡಿಕೆಗಳೇನು?
ಎಂಎಸ್‌ಪಿಗೆ ಕಾನೂನು ಖಾತ್ರಿ ನೀಡಿ
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು.
ಪ್ರೀ ಪೇಯ್ಡ ಸ್ಮಾರ್ಟ್ ಮೀಟರ್ ಅನುಷ್ಠಾನ ಮಾಡಬಾರದು
ಎಲ್ಲ ಬೆಳೆಗಳಿಗೂ ಸಮಗ್ರ ವಿಮೆ ನೀಡಿ
ಎಲ್ಲ ರೈತರು, ಕೃಷಿ ಕಾರ್ಮಿಕರಿಗೆ ಮಾಸಿಕ 10,000 ರೂ. ಪಿಂಚಣಿ ನೀಡಬೇಕು
ಟಿಕ್ರಿ, ಸಿಂಘು ಗಡಿಯಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಗೌರವಾರ್ಥ ಸ್ಮಾರಕ ನಿರ್ಮಿಸಬೇಕು
2021ರ ಲಖೀಂಪುರ್ ಖೇರಿ ಸಂತ್ರಸ್ತ ರೈತರಿಗೆ ಪರಿಹಾರ ನೀಡಬೇಕು