Advertisement

Farmers: 2,250 ರೈತರು ಅಸಲು ಕಟ್ಟಿದರೆ 8 ಕೋಟಿ ಬಡ್ಡಿ ಮನ್ನಾ!

02:55 PM Jan 29, 2024 | Team Udayavani |

ಚನ್ನರಾಯಪಟ್ಟಣ: ಸಹಕಾರ ಬ್ಯಾಂಕ್‌ನಲ್ಲಿ ರೈತರು ಪಡೆದಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಯೋಜನೆಯನ್ನು ಸರ್ಕಾರ ಜಾರಿ ಮಾಡಿದ್ದು, ತಾಲೂಕಿನ ಪಿಕಾರ್ಡ್‌ ಬ್ಯಾಂಕ್‌ನಲ್ಲಿ 2,250 ಮಂದಿ ಸುಸ್ತಿದಾರರಾಗಿದ್ದು, ಅವರು 7.25 ಕೋಟಿ ರೂ. ಅಸಲು ಹಣ ಕಟ್ಟಿದರೆ 8 ಕೋಟಿ ರೂ. ಬಡ್ಡಿ ಮನ್ನವಾಗಲಿದೆ.

Advertisement

2,250 ರೈತರು ಮರು ಪಾವತಿಸಿಲ್ಲ: ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ, ಸಹಕಾರ ಬ್ಯಾಂಕ್‌ನಲ್ಲಿ ಪಡೆದಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಇದರ ಲಾಭವನ್ನು ರೈತರು ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ಪಿಕಾರ್ಡ್‌ ಬ್ಯಾಂಕ್‌ನಲ್ಲಿ 1992 ರಿಂದ 2023ರ ವರೆಗೆ 2,250 ಮಂದಿ ರೈತರು ಪಡೆದ ಸಾಲವನ್ನು ಮರು ಪಾವತಿ ಮಾಡಿಲ್ಲ. ಬಡ್ಡಿ ಮನ್ನ ಆಗುವುದರಿಂದ ರೈತರು ಇದರ ಲಾಭ ಪಡೆಯಬಹುದಾಗಿದೆ.

ಯಾರಿಗೆ ಅನ್ವಯ?: ಹಲವು ವರ್ಷದಿಂದ ಸಾಲವನ್ನು ಮರು ಪಾವತಿ ಮಾಡದೇ ಇರುವವರಿಗೆ ಇದು ಅನುಕೂಲ ಆಗಲಿದೆ. 1992 ರಿಂದ ಡಿ.31ರ 2023ರ ವರೆಗೆ ರೈತರು ಪಡೆದ ಸಾಲ ಮರು ಪಾವತಿ ಮಾಡದೆ ಇರುವವರಿಗೆ ಇದ್ದು ಅನ್ವಯವಾಗಲಿದೆ. ಈಗಾಗಲೇ ರೈತರಿಗೆ ನೀಡಿದ ಸಾಲಕ್ಕೆ ಸಹಕಾರ ನಿಯಮಾನುಸಾರ ಬ್ಯಾಂಕ್‌ಗಳು ಬಡ್ಡಿ ಹಾಕಿದ್ದು, ಅಸಲಿಗಿಂತ ಬಡ್ಡಿ ಹೆಚ್ಚಿದೆ.

ಸರ್ಕಾರದ ಬಡ್ಡಿ ಮನ್ನಾ ಯೋಜನೆ ಜಾರಿಗೆ ತಂದಿದ್ದು, ಫೆ.29ರಲ್ಲಿ ಅಸಲು ಕಟ್ಟಿದ ಸಂಪೂರ್ಣ ಬಡ್ಡಿ ಮನ್ನಾವಾಗಲಿದೆ. ರೈತರು ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ಕೃಷಿಯೇತರ ಸಾಲಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ನಬಾರ್ಡ್‌ ಗುರುತಿಸಿದ ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ, ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್‌ ಹಾಗೂ ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ.

ಟ್ರ್ಯಾಕ್ಟರ್‌ ಸಾಲದ ಬಡ್ಡಿ ಮನ್ನಾ: ಪಿಕಾರ್ಡ್‌ ಬ್ಯಾಂಕ್‌ ನಲ್ಲಿ 36 ಮಂದಿ ಕೃಷಿ ಮಾಡಲು ಯಂತ್ರೋಪಕರಣದ ಅಡಿಯಲ್ಲಿ ಟ್ರ್ಯಾಕ್ಟರ್‌ ಸಾಲ ಪಡೆದಿದ್ದು, 16 ಮಂದಿ ನಿಗದಿತರ ಅವಧಿಯಲ್ಲಿ ಸಾಲ ಹಾಗೂ ಬಡ್ಡಿ ಮರು ಪಾವತಿ ಮಾಡುತ್ತಿದ್ದಾರೆ. ಇನ್ನು 20 ಮಂದಿ ಸಾಲ ಹಾಗೂ ಬಡ್ಡಿ ನೀಡಿಲ್ಲ. ಇದರಿಂದ 50 ಲಕ್ಷ ಟ್ರ್ಯಾಕ್ಟರ್‌ ಸಾಲ ಬ್ಯಾಂಕ್‌ಗೆ ಬರಬೇಕಾಗಿದೆ. 20 ಮಂದಿ ಅಸಲು ಕಟ್ಟಿದರೆ ಬಡ್ಡಿಯನ್ನು ಸರ್ಕಾರ ತಾಲೂಕಿನ ಪಿಕಾರ್ಡ್‌ ಬ್ಯಾಂಕ್‌ಗೆ ಕಟ್ಟಲಿದೆ.

Advertisement

ಬಡ್ಡಿ ಮನ್ನಾದ ಷರತ್ತುಗಳು : ಸರ್ಕಾರದ ಬಡ್ಡಿ ರಿಯಾಯತಿ ಬದ್ಧತೆಯಡಿ ವಿತರಿಸಿರುವ ಕೃಷಿ ಮತ್ತು ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಬ್ಯಾಂಕ್‌ ಗಳಿಂದ ಪಡೆದು 31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲನ್ನು 29.02.2024 ರೊಳಗೆ ಪಿಕಾರ್ಡ್‌ ಬ್ಯಾಂಕ್‌ಗೆ ಸಾಲ ಪಡೆದ ರೈತರು ಮರುಪಾವತಿ ಮಾಡಿದಲ್ಲಿ ಸದರಿ ಸಾಲಗಳ ಮೇಲಿನ ಮರುಪಾವತಿ ದಿನಾಂಕದವರೆಗಿನ ಬಡ್ಡಿಯನ್ನು ಮನ್ನಾ ಮಾಡಿ ಪಿಕಾರ್ಡ್‌ ಬ್ಯಾಂಕಿಗೆ ಸರ್ಕಾರ ಭರ್ತಿ ಮಾಡಲಿದೆ. ಈ ಯೋಜನೆಯು ಮಾರಿಟೋರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಸಹ ಅನ್ವಯವಾಗುತ್ತದೆ.

ಸಾಕಷ್ಟು ಮಂದಿ ರೈತರು ತಾವು ಪಡೆದ ಸಾಲಕ್ಕಿಂತ ಬಡ್ಡಿ ಹೆಚ್ಚಿದೆ. ಅಂತಹ ರೈತರು ಹಾಗೂ ಬ್ಯಾಂಕ್‌ನಲ್ಲಿ ಸುಸ್ತಿಯಾಗಿರುವ ಎಲ್ಲಾ ರೈತರು ಒಂದು ತಿಂಗಳೊಳಗೆ ಸಾಲ ಮರುಪಾವತಿ ಮಾಡುವ ಮೂಲಕ ಬಡ್ಡಿಯಿಂದ ಮುಕ್ತಿ ಹೊಂದಲು ಸರ್ಕಾರ ಆದೇಶಿಸಿದ್ದು, ರೈತರ ದರ ಲಾಭ ಪಡೆದುಕೊಳ್ಳುವುದು ಒಳಿತು. -ಜಗದೀಶಚಂದ್ರ, ಪಿಕಾರ್ಡ್‌ ಬ್ಯಾಂಕ್‌ ವ್ಯವಸ್ಥಾಪಕ

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next