ದೇವನಹಳ್ಳಿ: ಚಳಿಗಾಲದ ಸಮೃದ್ಧ ಬೆಳೆಯಾಗಿರುವ ತೊಗರಿಕಾಯಿಗೆ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿ ಬಂಪರ್ ಬೆಲೆ ಬಂದಿದ್ದು. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ನಾನಾ ಕಡೆ ರಸ್ತೆ ಬದಿಗಳಲ್ಲಿ ತೊಗರಿಕಾಯಿ ಮಾರಾಟ ಜೋರಾಗಿಯೇ ನಡೆಯುತ್ತಿದೆ.
ಕಾರ್ತಿಕ ಸೋಮವಾರದ ನಂತರ ಮಾರುಕಟ್ಟೆಯಲ್ಲಿ ತೊಗರಿಕಾಯಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ. ಈ ಬಾರಿ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ತೊಗರಿಕಾಯಿ ಬಂದಿಲ್ಲ. ಹೀಗಾಗಿ ಸಹಜವಾಗಿ ಬೆಲೆ ಏರಿಕೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಹಸಿ ತೊಗರಿ ಸಮೃದ್ಧವಾಗಿ ಬೆಳೆದಿಲ್ಲ. ಹಾಗಾಗಿ ಮರುಕಟ್ಟೆಯಲ್ಲಿ ತೊಗರಿ ನಿರೀಕ್ಷಿತ ಅವಕ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ ವಾರದಿಂದ ವಾತಾವರಣ ಮೋಡ ಕವಿದಿದೆ ವಾತಾವರಣ ಕಂಡುಬಂದಿದೆ. ಚುಮುಚುಮು ಚಳಿ ಹೆಚ್ಚಾಗಿದೆ ತರಕಾರಿ ಸೊಪ್ಪು ಖರೀದಿಸುತ್ತಿದ್ದ ಗ್ರಾಹಕರು ತೊಗರಿಕಾಯಿ ಅವರೇ ಖರೀದಿಸಲು ಮುಂದಾಗಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಅವರೇ, ತೊಗರಿ ಕಾಯಿಗೆ ಉತ್ತಮ ಬೆಲೆ ಬಂದಿದೆ.
ಒಂದು ಕೆಜಿ ತೊಗರಿ ಕಾಯಿ 60 ರಿಂದ 70 ರೂ. ಇದೆ. ಇನ್ನು ಕೆಲವು ಕಡೆ 50ರಿಂದ 60 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ದರದಲ್ಲಿ ಎಷ್ಟೇ ಚೌಕಾಶಿ ಮಾಡಿದರೂ ದರವನ್ನು ಇಳಿಕೆ ಮಾಡುತ್ತಿಲ್ಲ.
ದೀಪಾವಳಿ ಬಳಿಕ ಕಾರ್ತಿಕ ಮಾಸದಲ್ಲಿ ತೊಗರಿಕಾಯಿ ಆವಕ: ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಆಶ್ರಿತವಾಗಿ ರೈತರು ರಾಗಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬೆಳೆಯಲ್ಲಿ 8 ರಿಂದ 10 ಅಡಿ ಸಾಲಿನಲ್ಲಿ ಅವರೇ ,ತೊಗರಿ ಸೇರಿದಂತೆ ಹಲವು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಅಂದರೆ ಈ ಬಾರಿ ಮಳೆ ಕೊರತೆಯಿಂದ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ನಾಶಗೊಂಡಿವೆ. ದ್ವಿದಳ ಧಾನ್ಯಗಳು ಸಹ ನೆಲಕಚ್ಚಿವೆ. ಬೆಂ. ಗ್ರಾಮಾಂತರ ಜಿಲ್ಲೆಯ ತಾಲೂಕುಗಳಲ್ಲಿ ತೊಗರಿ ಕಾಯಿ ಬೆಳೆಯನ್ನು ಮನೆಯ ಸುತ್ತಮುತ್ತಲು ಮತ್ತು ಇತರೆ ಭಾಗಗಳಲ್ಲಿ ಬೆಳೆಯುತ್ತಾರೆ. ಈ ಭಾಗದಿಂದ ಪ್ರತಿ ವರ್ಷ ಚಳಿಗಾಲದ ಸೀಸನ್ ಬಂದಾಗೆಲ್ಲ ಸ್ಥಳೀಯ ಮಾರುಕಟ್ಟೆಗಳಲ್ಲಿ ತೊಗರಿಕಾಯಿ ಮೂಟೆಗಟ್ಟಲೆ ಅವಕವಾಗುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಅವರೇ, ತೊಗರಿಕಾಯಿ ಹೆಚ್ಚು ನಾಶವಾಗಿದೆ. 100 ರಲ್ಲಿ 50 ಮಂದಿಗಷ್ಟೇ ಅದರಲ್ಲೂ ನೀರಾವರಿ ಹೊಂದಿರುವ ರೈತರು ಮಾತ್ರ ಬೆಳೆದು ಮಾರಾಟ ಮಾಡುತ್ತಿದ್ದಾರೆ.
ಈ ಬಾರಿ ಮಳೆ ಕೈಕೊಟ್ಟಿದೆ. ತೊಗರಿಕಾಯಿ ಈ ಬಾರಿ ಸರಿಯಾಗಿ ಬಂದಿಲ್ಲ. ಇರುವ ಅಲ್ಪಸ್ವಲ್ಪದ ನೀರಿನಲ್ಲಿ ತೊಗರಿ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿ ದ್ದೇವೆ. ಮಳೆಯಿಲ್ಲದೇ ಇರುವುದರಿಂದ ಬಿತ್ತನೆ ಮಾಡಿದ್ದ ತೊಗರಿ ಕಾಯಿ ನೆಲಕಚ್ಚಿದೆ.
– ವೆಂಕಟೇಶ್, ರೈತ ಜಿಲ್ಲೆಯಲ್ಲಿ
ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯಬೇಕು. ರಾಗಿ ಜತೆ ತೊಗರಿ ಕಾಯಿ, ಅವರೇ ಬೆಳೆಯನ್ನು ಎಂಟರಿಂದ 10 ಅಡಿಗೆ ಹಾಕಿದರೆ ರೈತರಿಗೆ ಅನುಕೂಲ ವಾಗುತ್ತದೆ. ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ 782 ಹೆಕ್ಟೇರ್ ತೊಗರಿಕಾಯಿ ಬೆಳೆಯಲಾಗುತ್ತಿದೆ.
● ಡಾ. ಲಲಿತಾ ರೆಡ್ಡಿ, ಜಿಲ್ಲೆ ಜಂಟಿ ಕೃಷಿ ನಿರ್ದೇಶಕಿ
– ಎಸ್ .ಮಹೇಶ್