ಯಳಂದೂರು: ತಾಲೂಕಿನಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆ ಇದ್ದು ಕಬಿನಿ ಕಾಲುವೆಯಲ್ಲಿ ನೀರು ಹರಿಯುತ್ತಿದ್ದರೂ, ಇದು ನಿರಂತರವಾಗಿ ಹರಿಯುತ್ತದೆ ಎಂದು ಅಧಿಕಾರಿಗಳು ಈವರೆಗೆ ರೈತರಿಗೆ ಭರವಸೆ ನೀಡಿಲ್ಲ. ಹೀಗಾಗಿ ಭತ್ತ ಬೆಳೆಯುತ್ತಿದ್ದ ರೈತರು ಈಗ, ಇತರೆ ಬೆಳೆಗಳತ್ತ ತಮ್ಮ ಚಿತ್ತಹರಿಸಿದ್ದಾರೆ.
ತಾಲೂಕು ಬಹುತೇಕ ಅರೆ ನೀರಾವರಿ ಪ್ರದೇಶವಾಗಿದೆ. ಪ್ರತಿ ವರ್ಷ ಜುಲೈನಲ್ಲಿ ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಆ ನಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ರೈತರು ಭತ್ತವನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಈ ಬಾರಿಯೂ ಕಬಿನಿ ನಾಲೆಗಳಲ್ಲಿ ನೀರು ಹರಿಯುತ್ತಿದೆ. ಆದರೆ, 60 ದಿನ ನಿರಂತರವಾಗಿ ನೀರು ಹರಿಯುವುದೇ ಎಂಬುದು ಪ್ರಶ್ನೆಯಾಗಿದೆ.
3ಸಾವಿರ ಹೆಕ್ಟೇರ್‌ಗೆ ಕುಸಿದ ಭತ್ತದ ಭೂಮಿ: ಯಳಂದೂರು ತಾಲೂಕು ಪುಟ್ಟ ತಾಲೂಕಾಗಿದೆ. ಇಲ್ಲಿ ಈ ಹಿಂದೆ 5 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಒಂದೆಡೆ ಮಳೆ ಇಲ್ಲದೆ, ಮತ್ತೂಂದೆಡೆ ಕಾಲುವೆಯಲ್ಲಿ ನೀರು ಹರಿಯದ ಪರಿಣಾಮ ಹೆಚ್ಚು ರೈತರು ಕಬ್ಬು, ರಾಗಿ, ಜೋಳ ಸೇರಿ ಇತರೆ ಪರ್ಯಾಯ ಬೆಳೆ ಬೆಳೆಯಲು ಆಸಕ್ತಿ ತೋರಿದ್ದಾರೆ. ಹೀಗಾಗಿ ಈ ಬಾರಿ 3 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಕೆಲ ರೈತರು ಭತ್ತದ ಬದಲು ಕಬ್ಬು, ಜೋಳ, ರಾಗಿ ಸೇರಿ ತೋಟಗಾರಿಕೆ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ಭತ್ತದ ಬೆಳೆ ಕೈ ಕೊಟ್ಟರೆ, ಈ ಬಾರಿ ಮಳೆ ಕೊರತೆಯಿಂದ ಈ ಭಾಗದ ರೈತರಿಗೆ ಭತ್ತದ ಬೆಳೆ ಬೆಳೆಯುವುದಾ?, ಬೇಡವಾ ಎಂಬ ಆತಂಕವಿದೆ.
ಆಗಸ್ಟ್ ಆರಂಭವಾದರೂ ಭತ್ತ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಜೂನ್ ಮತ್ತು ಜುಲೈನಲ್ಲಿ ಮಳೆ ಕೊರತೆ ಹಿನ್ನೆಲೆ ಕಬಿನಿ ಜಲಾಶಯ ನೀರಿನ ಕೊರತೆ ಎದುರಿಸುತ್ತಿತ್ತು. ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ಕಬಿನಿ ಡ್ಯಾಮ್ ಭರ್ತಿಯಾಗಿ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ, ನೀರಾವರಿ ಸಲಹೆ ಸಮಿತಿ ಸಭೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿಯೇ ಭತ್ತ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ರೋಗ ಭೀತಿ: ಸಾಮಾನ್ಯವಾಗಿ ಭತ್ತ ಬೆಳೆಯುವ ರೈತರು ಮೇ, ಜೂನ್‌ನಲ್ಲಿ ಬಿತ್ತನೆ ಮಾಡಿ ಜುಲೈ ವೇಳೆಗೆ ನಾಟಿ ಆಗದೇ ಇರುವುದರಿಂದ ಭತ್ತ ನಾಟಿ ತಡವಾಗಿದೆ. ಒಂದು ವೇಳೆ ಆಗಸ್ಟ್‌ನಲ್ಲಿ ನಾಟಿ ಮಾಡಿದರೆ ಅಕ್ಟೋಬರ್, ನವೆಂಬರ್‌ನಲ್ಲಿ ಭತ್ತಕ್ಕೆ ರೋಗ ಭೀತಿ ಕಾಡುವ ಸಾಧ್ಯತೆ ಇದೆ. ಹೀಗಾಗಿ ರೈತರು ಪರ್ಯಾಯ ಬೆಳೆಯತ್ತ ಚಿತ್ತ ನೆಟ್ಟಿದ್ದಾರೆ.
ಈ ಬಾರಿ ಮಳೆ ಕೊರತೆ ಹಾಗೂ ನಾಲೆಗಳಲ್ಲಿ ನೀರು ಬಿಡುಗಡೆ ವಿಳಂಬ ದಿಂದ ಭತ್ತದ ಬಿತ್ತನೆಗೆ ರೈತರು ನಿರ್ಲಕ್ಷ್ಯವಹಿಸಿದ್ದು, ಜೋಳ. ಕಬ್ಬು, ತರಕಾರಿ ಬೆಳೆ ಸೇರಿ ಇತರೆ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಭತ್ತ ಬೀಜ ದಾಸ್ತಾನಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.
-ವೆಂಕಟರಂಗಶೆಟ್ಟಿ, ಕೃಷಿ ಅಧಿಕಾರಿ ಯಳಂದೂರು
ನಾಲೆಗಳಲ್ಲಿ ನೀರು ಬಿಡುಗಡೆ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆದಷ್ಟು ಬೇಗ ಕರೆದು ನೀರು ಬಿಡುಗಡೆ ಬಗ್ಗೆ ಜಿಲ್ಲಾಧಿಕಾರಿಗಳು , ಜನಪ್ರತಿನಿಧಿಗಳು ಅಧಿಕೃತ ಘೋಷಣೆ ಮಾಡಿ ರೈತರಿಗೆ ಮಾಹಿತಿ ನೀಡಬೇಕಿದೆ.
-ಹೊನ್ನೂರು ಪ್ರಕಾಶ್,ಜಿಲ್ಲಾಧ್ಯಕ್ಷ ರೈತಸಂಘ
-ಫೈರೋಜ್ ಖಾನ್