Advertisement

Farmers:ಆವರಿಸಿದ ದಟ್ಟ ಮಂಜು; ರೈತರಿಗೆ ಬೆಳೆ ನಷ್ಟದ ಭೀತಿ

02:43 PM Aug 16, 2023 | Team Udayavani |

ಎಚ್‌.ಡಿ.ಕೋಟೆ: ತಾಲೂಕು ಕೇಂದ್ರ ಎಚ್‌.ಡಿ.ಕೋಟೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಮಂಗಳವಾರ ಮುಂಜಾನೆ ಮಂಜು ಆವರಿಸಿದ್ದು ನಾವೆಲ್ಲಾ ಬೆಳೆನಷ್ಟಕ್ಕೆ ಒಳಗಾಗುತ್ತೇವೆ ಎಂಬುದು ರೈತರ ಅಭಿಪ್ರಾಯವಾಗಿದೆ.

Advertisement

ಪೂರ್ವ ಮುಂಗಾರು ಕೈಕೊಟ್ಟು, ಮುಂಗಾರು ಮಳೆ ತಡವಾದರೂ ಕಳೆದ ಜುಲೈನಲ್ಲಿ 15 ದಿನ ತಾಲೂಕಿನಾದ್ಯಂತ ಎಡಬಿಡದೆ ಮಳೆ ಸುರಿದಿತ್ತು. ಈಗ, ಮತ್ತೆ ಮಳೆರಾಯ ನಾಪತ್ತೆ ಆಗಿದ್ದಾನೆ. ವಾಡಿಕೆಯಂತೆ ತಾಲೂಕಿನಲ್ಲಿ ಆಗಸ್ಟ್‌ ತಿಂಗಳಿನಲ್ಲೇ ಹೆಚ್ಚು ಮಳೆಯಾಗುತ್ತಿತ್ತು. ಈ ಬಾರಿ ತಿಂಗಳು ಪ್ರಾರಂಭವಾಗಿ 15 ದಿನ ಸಮೀಪಿಸುತ್ತಿದ್ದರೂ ಮಳೆ ಬರುವ ಮನ್ಸೂಚನೆ ಕಾಣುತ್ತಿಲ್ಲ, ಈ ನಡುವೆ ಮುಂಜಾನೆ ಮಂಜು ಕಾಣಿಸಿಕೊಂಡಿರುವುದನ್ನು ಕಂಡ ತಾಲೂಕಿನ ರೈತರು, ಈ ಬಾರಿ ಮಳೆ ಕೊರತೆ ನಮ್ಮ ಬೆಳೆಗಳನ್ನು ಕಾಡಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕ್ಷೀಣಿಸಿದ ಒಳ ಹರಿವು: ಕಳೆದ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಎರಡು ವಾರ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಅಬ್ಬರಿಸಿದ್ದರಿಂದ ಜಲಾಶಯದ ಇತಿಹಾಸದಲ್ಲೇ ಸಂಗ್ರಹ ಮಟ್ಟ ತೀರಾ ಕುಸಿತ ಕಂಡು ಡೆಡ್‌ ಸ್ಟೋರೆಜ್‌ ತಲುಪಿದ್ದ ಜಲಾಶಯಕ್ಕೆ ಸತತ ಮಳೆಯಿಂದ ಹೆಚ್ಚಿನ ನೀರು ಬಂದ ಪರಿಣಾಮ ಜಲಾಶಯ ಭರ್ತಿಯಾಗಿದೆ. ಆದರೆ, ಅಗಸ್ಟ್‌ ತಿಂಗಳು ವಾಡಿಕೆಯಂತೆ 100 ಮಿ.ಮೀ ಮಳೆಗೆ ಕೇವಲ 3 ಮಿ.ಮೀ ಮಳೆ ಆಗಿರುವುದರಿಂದ ಜಲಾಶಯದ ಒಳ ಹರಿವು ತೀರಾ ಕ್ಷೀಣಿಸಿದೆ. ಇದೇ ಕಳೆದ 3 ವರ್ಷಗಳಲ್ಲಿ ಆಗಸ್ಟ್‌ ತಿಂಗಳಲ್ಲಿ 100 ಮಿ.ಮೀಟರ್‌ಗೂ ಹೆಚ್ಚು ಮಳೆ ಸುರಿದ ಪರಿಣಾಮ ಜಲಾಶಯಕ್ಕೆ 34 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿತ್ತು. 14 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿತ್ತು ಎಂದು ಕಬಿನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಕಡೆ ಮುಂಗಾರು ಮುನಿಸಿಕೊಂಡಿರು ವಾಗಲೇ ಸೋಮವಾರ ಮುಂಜಾನೆ ಮಂಜು ಆವರಿಸಿದ್ದನ್ನು ಕಂಡ ಸಾರ್ವಜನಿಕರು, ರೈತರಲ್ಲಿ ಬರದ ಛಾಯೆಯ ಸುಳಿವು ಎಂದು ಮಾತನಾಡಿ ಕೊಳ್ಳುತ್ತಿ ದ್ದಾರೆ. ಶೀಘ್ರ ಮುನಿಸಿಕೊಂಡಿರುವ ಮುಂಗಾರು ದಯೆತೋರಿ ಮಳೆ ಸುರಿಯುವಂತೆ ತಾಲೂಕಿನ ರೈತರು ವರುಣದೇವನಲ್ಲಿ ಮೊರೆಯಿಡುತ್ತಿದ್ದಾರೆ.

ಬಿತ್ತನೆಯಾಗಿರುವ ಬೆಳೆಗಳ ಫಲವತ್ತತೆ ಹೆಚ್ಚುತ್ತೆ :

Advertisement

ಇನ್ನೂ ಕಳೆದ ಜುಲೈನಲ್ಲಿ ವಾಡಿಕೆಯಂತೆ 138 ಮಿ.ಮೀ ಮಳೆಗೆ 183 ಮಿ.ಮೀ ಮಳೆ ಸುರಿದು ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿತ್ತು, ಆಗಸ್ಟ್‌ ಮೊದಲ ವಾರದಲ್ಲಿ 4.7 ಮಿ.ಮೀ ಮಳೆಗೆ 0.7 ಮಿ.ಮೀ ಮಳೆಯಾಗುವ ಮೂಲಕ ಶೇ.86 ಮಳೆ ಕೊರತೆಯಾಗಿದೆ, ಸದ್ಯಕ್ಕೆ ಬೆಳೆಗಳು ಒಣಗುವ ತೊಂದರೆಯಿಲ್ಲ, ಈ ತಿಂಗಳು ಮಳೆಯಾದರೆ ಬಿತ್ತನೆಯಾಗಿರುವ ಬೆಳೆಗಳ ಫಲವತ್ತತೆ ಹೆಚ್ಚಾಗಲಿದೆ ಎಂದು ಸಹಾಯಕ ಕೃಷಿ ಅಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.

ರೈತರ ಆತಂಕವೇನು?:

ಮುಂಗಾರು ಮತ್ತೆ ಮುನಿಸಿಕೊಂಡು ಆಗಸ್ಟ್‌ ತಿಂಗಳಲ್ಲಿ ವಾಡಿಕೆ ಮಳೆ ಸುರಿಯದ ಪರಿಣಾಮ ನಳನಳಿಸುತ್ತಿದ್ದ ಬೆಳೆಗಳು ಬಾಡತೊಡಗಿವೆ. ಮಂಜು ಆವರಿಸಿದ್ದನ್ನು ಕಂಡ ರೈತರು ಆತಂಕಕ್ಕೆ ಒಳಗಾಗಿದ್ದು ಇಬ್ಬನಿ ಕಾಣಿಸಿಕೊಂಡರೆ ಹೆಚ್ಚಿನ ಮಳೆ ಆಗುವುದಿಲ್ಲ ಎಂಬ ನಂಬಿಕೆ ರೈತರದ್ದಾಗಿದೆ. ಇದಕ್ಕೆ ಇಂಬು ನೀಡುವಂತೆ ಆಗಸದಲ್ಲಿ ಆಗಾಗ ಕಾಮನಬಿಲ್ಲು ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ದುಗುಡ ಹೆಚ್ಚಿಸಿದೆ.

– ಬಿ.ನಿಂಗಣ್ಣಕೋಟೆ

 

Advertisement

Udayavani is now on Telegram. Click here to join our channel and stay updated with the latest news.

Next