ಯಳಂದೂರು: ಪಟ್ಟಣವೂ ಸೇರಿದಂತೆ, ತಾಲೂಕಿನಲ್ಲಿ ಮುಖ್ಯ ನಾಲೆಗಳು ಹಾಗೂ ಉಪ ಕಾಲುವೆಗಳಲ್ಲಿನ್ನು ಹೂಳುನ್ನು ತೆಗೆಯದ ಕಾರಣ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ನಾಲೆಗಳ ಹೂಳನ್ನು ತೆಗೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಳಂದೂರು ಪಟ್ಟಣದ ರೈತರು ಇದನ್ನು ಮಾಡಿ ತೋರಿಸಿದ್ದಾರೆ!
ಸಂಬಂಧಪಟ್ಟ ಎಂಜಿನಿಯರ್ ವರ್ತನೆಯಿಂದ ಬೇಸತ್ತ ರೈತರು ಉಪ ಕಾಲುವೆಯಲ್ಲಿ ಬೆಳೆದು ಕೊಂಡಿರುವ ಗಿಡಗಂಟಿಗಳು ತೆಗೆಯದ ಕಾರಣ ನೀರು ಸರಾಗವಾಗಿ ಹರಿಯದೆ ರೈತರು ಪ್ರಯಾಸಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಳಂದೂರು ಪಟ್ಟಣದಿಂದ ಹಾದು ಹೋಗಿರುವ ಕಬಿನಿ ಕಾಲುವೆಯಲ್ಲಿ ಈಗಾಗಲೇ ಕಾಲುವೆ ತುಂಬೆಲ್ಲಾ ಜೊಂಡು ಬೆಳೆದು ಹೂಳು ತುಂಬಿದೆ. ಕಾಲುವೆ ಕೊನೆ ಕೊನೆಗೊಳ್ಳುವಲ್ಲಿ ಇರುವ ರೈತರು ನೀರಿಗಾಗಿ ಕಾಯುವಂತಾಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಕಾಲುವೆ ಗಳಲ್ಲಿ ಮೆಕ್ಕಲು ಮಣ್ಣು, ಕಸಕಡ್ಡಿಗಳು ತುಂಬಿ ಮುಚ್ಚಿ ಕೊಂಡು ನೀರು ಸರಾಗವಾಗಿ ಹರಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಕೊಳ್ಳೇಗಾಲ ಕಾವೇರಿ ನೀರಾವರಿ ನಿಗಮ ಇಲಾಖೆಗೆ ಅರ್ಜಿ ಸಲ್ಲಿಸಿ ಹೂಳನ್ನು ತೆಗೆಸುವಂತೆ ತಿಳಿಸಿದರು ಕ್ರಮ ವಹಿಸಿಲ್ಲ ಎಂಬುದು ಈ ಭಾಗದ ರೈತರ ಆರೋಪವಾಗಿದೆ.
4 ವಿಭಾಗಗಳಿಗೆ ಹಂಚಿಕೆಯಾಗಿರುವ ತಾಲೂಕು: ಯಳಂ ದೂರು ತಾಲೂಕಿನಲ್ಲಿ ಕಬಿನಿ ಕಾಲುವೆ ಹಾದು ಹೋಗಿದ್ದು ಇದು ಕಾವೇರಿ ನೀರಾವರಿ ಇಲಾಖೆಯ ವ್ಯಾಪ್ತಿಯ ನಾಲ್ಕು ವಿಭಾಗಗಳಲ್ಲಿ ಹಂಚಿಹೋಗಿದೆ. ಚಾ.ನಗರ ನೀರಾವರಿ, ಸಂತೇಮರಹಳ್ಳಿ ನೀರಾವರಿ ಇಲಾಖೆ, ಕೊಳ್ಳೇ ಗಾಲದ ಎರಡು ನೀರಾವರಿ ನಿಗಮ ಗಳಿಗೆ ತಾಲೂಕು ಹರಿದು ಹಂಚಿ ಹೋಗಿರುವ ಹಿನ್ನಲೆ ಸಮ ಪರ್ಕವಾದ ಪೂರ್ಣಪ್ರಮಾಣದ ಕೆಲಸಗಳು ನಡೆ ಯುವು ದಿಲ್ಲ. ಸಮಸ್ಯೆ ಬಂದಾಗ ಈ ಬಗ್ಗೆ ಅಧಿಕಾರಿಗಳಿಗೆ ರೈತರು ದೂರು ನೀಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವು ದಿಲ್ಲ ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ.
ಅಲ್ಲದೆ ಯಳಂದೂರು ಪಟ್ಟಣದಲ್ಲಿ ಇಲಾಖೆಯ ಕಚೇರಿಯೇ ಇಲ್ಲ! ತಾಲೂಕಿನಲ್ಲಿ ನೀರಾವರಿ ಇಲಾಖೆ ಕಚೇರಿಯನ್ನು ತೆರೆದು ರೈತರಿಗೆ ಅನುಕೂಲ ಮಾಡಬೇಕು ಎಂದು ಹಲವು ವರ್ಷಗಳಿಂದ ಇಲ್ಲಿನ ರೈತರು ಸಂಬಂಧಪಟ್ಟವರ ಗಮನಕ್ಕೆ ಈ ವಿಷಯದ ತಂದರೂ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಇಲ್ಲಿನ ರೈತರು ದೂರದ ಚಾ.ನಗರ, ಕೊಳ್ಳೇಗಾಲ, ಸಂತೆ ಮರಹಳ್ಳಿಯಲ್ಲಿರುವ ಕೇಂದ್ರಗಳ ಕಚೇರಿಗೆ ತೆರಳಿ ತಮ್ಮ ಕಷ್ಟಗಳನ್ನು ಹೇಳಿ ಕೊಳ್ಳಬೇಕಾದ ಅನಿವಾರ್ಯತೆ ಇದೆ.
ನಮ್ಮ ವ್ಯಾಪ್ತಿಯ ಪ್ರಮುಖ ನಾಲೆಗಳಲ್ಲಿ ಹೂಳೆತ್ತಲು ಕ್ರಮ ವಹಿಸಲಾಗಿದೆ. ಈಗಾಗಲೇ ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ನಮಗೆ ಅನುದಾನದ ಕೊರತೆಯೂ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಯಳಂದೂರು ವ್ಯಾಪ್ತಿಯಲ್ಲಿ ಕಾಲುವೆ ಹೂಳೆತ್ತುವ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲಾಗುವುದು.
●ಸತೀಶ್, ಜೆಇ ಕಾವೇರಿ ನೀರಾವರಿ ನಿಗಮ, ಕೊಳ್ಳೇಗಾಲ
ಕಾವೇರಿ ನೀರಾವರಿ ವಿಭಾಗಕ್ಕೆ 42ನೇ ವಿತರಣಾ ನಾಲೆಯಿಂದ ಉಪಕಾಲುವೆಯಲ್ಲಿ ಹೂಳನ್ನು ತೆಗೆಯುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಸಂಬಂಧಪಟ್ಟ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳು ತಲೆಕೆಡೆಸಿಕೊಂಡಿಲ್ಲ. ಈಗ ಕಾಲುವೆಯಲ್ಲಿ ನೀರು ಹರಿಸುವ ಸಮಯವಾಗಿದ್ದು ನಮ್ಮ ಜಮೀನಿಗೆ ನೀರು ಬರುವಂತೆ ಮಾಡಲು ಈ ಭಾಗದ ರೈತರೇ ಹಣವನ್ನು ಸಂಗ್ರಹಿಸಿ ಜೆಸಿಬಿ ಯಂತ್ರದ ಮೂಲಕ ಹೂಳು ತೆಗೆಯಿಸುತ್ತಿದ್ದೇವೆ.
– ಜೆ.ಶ್ರೀನಿವಾಸ್, ರೈತ, ಯಳಂದೂರು
– ಫೈರೋಜ್ ಖಾನ್