ದೇವನಹಳ್ಳಿ: ಸಿರಿಧಾನ್ಯ ಬೆಳೆಯುವ ರೈತರ ಸಂಖ್ಯೆ ತೀರ ಕಡಿಮೆಯಾಗುತ್ತಿದೆ. ಕೇಂದ್ರ ಸರಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತ ಸಿರಿ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದು ರೈತರು ಸಿರಿಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲಾಗುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್. ಎಂ.ರವಿಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಶ್ಯಾನಪ್ಪನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಸಿರಿಧಾನ್ಯ ಬೆಳೆಯುವ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳಾದ ಊದಲು, ನವಣೆ, ಕೊರಲೆ, ಹಾರಕ, ಅರ್ಕ, ಬರಗು ಮತ್ತು ಸಾಮೆಗಳ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಇಂತಹದೊಂದು ಕಾರ್ಯಕ್ರಮವನ್ನು ಇಡೀ ತಾಲೂಕಾದ್ಯಂತ ಮಾಡುವಂತೆ ಆಗಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ಆಗಬೇಕು. ರೈತರಿಗೆ ಸಾಕಷ್ಟು ಕೃಷಿ ಇಲಾಖೆ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದ್ದು, ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಜೊತೆಗೆ ಈ ಕಾರ್ಯಕ್ರಮದ ಭಾಗವಾಗಿ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಚಿತ್ರಕಲೆಗಳ ಸ್ಪರ್ಧೆಯನ್ನು ಏರ್ಪಡಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದದ್ದು, ಸಿರಿಧಾನ್ಯ ಬೆಳೆಯುವ ರೈತರಿಗೆ ಸರಕಾರದ ಕೃಷಿ ಇಲಾಖೆಯಲ್ಲಿ ರೈತಸಿರಿ ಯೋಜನೆಯು ವರದಾನವಾಗಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ: ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ಮಾತನಾಡಿ, ರಾಷ್ಟ್ರೀಯ ವಿಕಾಸ್ ಯೋಜನೆಯಡಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲು ರೈತ ಸಿರಿ ಯೋಜನೆಯನ್ನು ಕೃಷಿ ಇಲಾಖೆ ಅನುಷ್ಠಾನಗೊಳಿಸಿದೆ. ಇತ್ತೀಚೆಗೆ ರೈತರು ಸಿರಿಧಾನ್ಯಗಳನ್ನು ಬೆಳೆಯುವುದನ್ನು ಕೈಬಿಟ್ಟಿರುವುದರಿಂದ ಸರ್ಕಾರ ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಲು ಈ ಯೋಜನೆ ಸಹಕಾರಿಯಾಗಿದೆ. ಸಿರಿಧಾನ್ಯಗಳನ್ನು ಬೆಳೆಯಲು ಕಡಿಮೆ ನೀರು ಬೇಕಾಗುತ್ತದೆ. ಕ್ರಿಮಿನಾಶಕಗಳ ಅವಶ್ಯಕತೆಯೇ ಬರುವುದಿಲ್ಲ. ಬೆಳೆಯಬಹುದಾದ ಈ ಸಿರಿಧಾನ್ಯಗಳು ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಹೃದಯದ ಕಾಯಿಲೆ, ಮಧುಮೇಹ, ಇತರೆ ಕಾಯಿಲೆಗೆ ಸಂಜೀವಿನಿಯಾಗುತ್ತದೆ ಎಂದರು.
ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ: ಕೊಯಿರಾ ಗ್ರಾಪಂ ಸದಸ್ಯೆ ವೀಣಾರಾಣಿ ಮಾತನಾಡಿ, ಸರ್ಕಾರ ರೈತರಿಗೆ ಸಾಕಷ್ಟು ಯೋಜನೆಗಳ ಮೂಲಕ ಪ್ರೋತ್ಸಾಹಿಸುತ್ತಿದೆ. ಮಾಹಿತಿ ಕೊರತೆಯಿಂದ ರೈತರು ಹಿಂದೇಟು ಹಾಕುತ್ತಾರೆ. ಸ್ಥಳೀಯವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸರಿಯಾದ ಮಾರ್ಗದರ್ಶನವನ್ನು ಕೃಷಿ ಇಲಾಖೆ ಅಧಿಕಾರಿಗಳಿಂದ ಪಡೆದರೆ, ಉತ್ತಮ ಇಳುವರಿ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುತ್ತದೆ. ಪ್ರತಿ ರೈತರು ಯಾವುದೇ ಕೃಷಿ ಬೆಳೆ ಬೆಳೆಯುವ ಮುನ್ನಾ ರೈತ ಸಂಪರ್ಕಕ್ಕೆ ಭೇಟಿ ನೀಡಿ ಸಲಹೆ ಪಡೆದುಕೊಳ್ಳುವುದು ಉತ್ತಮ ಎಂದರು.
ಕೊಯಿರ ಗ್ರಾಪಂ ಸದಸ್ಯ ಆನಂದ್‌ಗೌಡ, ವೀಣಾರವಿಕುಮಾರ್, ಎಂಪಿಸಿಎಸ್ ಅಧ್ಯಕ್ಷ ಕೆಂಪಣ್ಣ, ಹೊಸೂರಿನ ಹಿರಿಯ ಮುಖಂಡ ಕೃಷ್ಣಪ್ಪ, ಶ್ರೀನಿವಾಸ್, ಮಂಗಳಾ, ವಿಜಯಮ್ಮ, ಕೃಷಿ ಇಲಾಖೆಯ ಅಧಿಕಾರಿ ಸತ್ಯನಾರಾಯಣ್, ಸಹಾಯಕ ಚೇತನ್ ಇದ್ದರು.