Advertisement

ಕುರ್ಕಾಲು: ನಾಟಿ ಮಾಡಲಾದ ಗದ್ದೆಗೆ ನುಗ್ಗಿದ ಕೃತಕ ನೆರೆ ನೀರು; ಬೆಳೆ ಹಾನಿಯ ಭೀತಿ

09:05 PM Dec 30, 2021 | Team Udayavani |

ಕಟಪಾಡಿ: ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಮೂಡು ಪಾಜೈ, ಪಡು ಪಾಜೈ, ಪಟ್ಲ, ಮೆನ್ನಲ ಮತ್ತಿತರೆಡೆಗಳಲ್ಲಿ  ಕೃಷಿ ಭೂಮಿಗೆ ಕುರ್ಕಾಲು ಪಾಪನಾಶಿನಿ ಹೊಳೆಯ ನೀರು ಉಕ್ಕೇರಿ ಹರಿದು ಸುಮಾರು 400 ಎಕರೆಗೂ ಅಧಿಕ ಪ್ರದೇಶದಲ್ಲಿ ನಾಟಿ ಮಾಡಲಾಗಿರುವ ಭತ್ತದ ಸಸಿ (ನೇಜಿ) ನೀರಿನಲ್ಲಿ ಮುಳುಗಿದ್ದು, ಕೊಳೆತು ಬೆಳೆ ಹಾನಿಯಾಗುವ ಭೀತಿ ರೈತರು ಎದುರಿಸುತ್ತಿದ್ದಾರೆ.

Advertisement

ಕಳೆದ 1 ವಾರದಿಂದ ಏಕಾಏಕಿಯಾಗಿ ನೀರು ಹರಿದು ಬರುತ್ತಿದ್ದು, ಕೊಳಕೆಯ  ಭತ್ತದ ಬೆಳೆಯನ್ನು ಬೆಳೆಯಲು ನಾಟಿ ಮಾಡಲಾದ ಗದ್ದೆಗೆ ನೀರು ನುಗ್ಗಿ ಬರುತ್ತಿದೆ. ನೀರಿನ ಪ್ರಮಾಣ ಇಳಿಕೆಯೂ ಆಗುತ್ತಿಲ್ಲ. ಆ ಕಾರಣದಿಂದಾಗಿ ಈ ಭಾಗದಲ್ಲಿ ಭತ್ತದ ಕೃಷಿ, ವಾಣಿಜ್ಯ ಬೆಳೆಗಳು ನೀರು ಪಾಲಾಗುತ್ತಿದ್ದು, ಸಣ್ಣ ಗಾತ್ರದ ನೇಜಿಯು ನೀರೊಳಗೆ ಇದ್ದು ಕೊಳೆಯುವ ಸಾಧ್ಯತೆಯು ಅಧಿಕವಾಗಿದ್ದು, ಇನ್ನೆರಡು ದಿನಗಳೊಳಗಾಗಿ ನೀರಿನ ಪ್ರಮಾಣ ತಗ್ಗದಿದ್ದಲ್ಲಿ  ಸಂಪೂರ್ಣವಾಗಿ ಬೆಳೆಯು ನಾಶಗೊಳ್ಳಲಿದೆ ಎಂಬ ಭೀತಿ ಈ ಭಾಗದ ಕೃಷಿಕರದ್ದು.

ಈಗಾಗಲೇ ರೈತರಾದ ಸುದರ್ಶನ್‌ ರಾವ್‌,  ಸಂಜೀವ ಶೆಟ್ಟಿ, ಜಯಕರ ರಾವ್‌, ಪ್ರಕಾಶ್‌  ಸೆಟ್ಟಿ, ಥೋಮಸ್‌ ಮಾರ್ಟಿಸ್‌, ಸುಧಾಕರ  ಪೂಜಾರಿ, ಕರುಣಾಕರ ಪೂಜಾರಿ, ರಾಮದಾಸ್‌ ಭಟ್‌, ಅಶೋಕ್‌ ಶೆಟ್ಟಿ, ಬಾಲಕೃಷ್ಣ  ಭಟ್‌ ಮತ್ತಿತರರು ಸಂಕಷ್ಟ  ಅನುಭವಿಸುತ್ತಿದ್ದು, ಈ ಬಗ್ಗೆ ಕೃಷಿ ಇಲಾಖಾಧಿಕಾರಿಗಳು, ಕ್ಷೇತ್ರದ ಶಾಸಕರ ಸಹಿತ ಹಲವರ ಗಮನಕ್ಕೆ  ತರಲಾಗಿದ್ದರೂ ಇದುವರೆಗೂ  ಸ್ಪಂದನೆ  ದೊರೆತಿಲ್ಲ.

ಕಿಂಡಿ ಅಣೆಕಟ್ಟು ನಿರ್ಮಾಣ ಹಂತದ ಸಮಸ್ಯೆ:

ಕುರ್ಕಾಲು ಮೆನ್ನಲ ಎಂಬಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣದ ಹಂತದಲ್ಲಿರುವ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗಾಗಿ ಹೊಳೆಯ ನೀರಿನ ಸರಾಗ ಹರಿಯುವಿಕೆಗೆ ತಡೆತಡೆಯೊಡ್ಡಲಾಗಿದ್ದು, ನೀರು ಹರಿಯಲು ಮಾದ್‌ನ್ನು ನಿರ್ಮಿಸಿ ಕೊಡದ ಕಾರಣ ಈ ಭಾಗದಲ್ಲಿ ಕೃತಕ ನೆರೆ ಉಂಟಾಗಿದ್ದು, ಕೃಷಿ ಗದ್ದೆಗೆ ನೀರು ನುಗ್ಗಿ ಬರುವಂತಾಗಿದೆ ಎಂದು ಕೃಷಿಕರು ಪರಿತಪಿಸುತ್ತಿದ್ದಾರೆ. ವೆಂಟೆಡ್‌ ಡ್ಯಾಂ ನಿರ್ಮಿಸುವ ಗುತ್ತಿಗೆದಾರರಿಗೂ ಈ ಬಗ್ಗೆ ವಿನಂತಿ ಮಾಡಿಕೊಂಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ  ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈಗಾಗಲೇ ಉಳುಮೆ, ಗೊಬ್ಬರ, ನೇಜಿ ನಾಟಿ ಸಹಿತ ಈ ಭಾಗದಲ್ಲಿನ 300 ಎಕರೆಗೂ ಅಧಿಕ ಪ್ರದೇಶದ ಗದ್ದೆಗಳಿಗೆ ಸುಮಾರು 4.5 ಲಕ್ಷ ರೂ.ಯನ್ನು  ಭತ್ತದ ಫಸಲಿಗೆ  ಈಗಾಗಲೇ ವಿನಿಯೋಗಿಸಲಾಗಿದ್ದು ನೀರು ಹರಿದು ಹೋಗುವಾಗ ಗೊಬ್ಬರವೂ ಕೊಚ್ಚಿಕೊಂಡು ಹೋಗಿ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನಹರಿಸಿ ಸಂಕಷ್ಟಕ್ಕೆ ಸ್ಪಂದಿಸುವಂತೆ ರೈತರು ಆಗ್ರಹಿಸಿದ್ದಾರೆ.

ರೈತರು ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ನೀರಿನ ಮಟ್ಟ ಇಳಿದ ಕೂಡಲೇ ರೈತ ಕ್ಷೇತ್ರಕ್ಕೆ ತೆರಳಿ ಬೆಳೆ ಹಾನಿಯ ಬಗ್ಗೆ ಪರಿಶೀಲನೆಯನ್ನು ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ . ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು ತಾಲೂಕು

ಏಕಾಏಕಿ ಮಣ್ಣು ತುಂಬಿಸಿ ಹೊಳೆಯ ನೀರು ಹರಿಯುವಿಕೆಗೆ ತಡೆಯೊಡ್ಡಿದ್ದಾರೆ. ಆದರೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸದೆ ಇದೀಗ ರೈತರಿಗೆ ಸಮ ಸ್ಯೆಯಾಗಿದೆ. ಕಾರ್ತಿ ಬೆಳೆಯು ನಷ್ಟ ಅನುಭವಿಸುವಂತಾಗಿತ್ತು. ಪರಿಹಾರವೂ ಬಂದಿಲ್ಲ. ಕೊಳಕೆ ಬೇಸಾಯವಾದರೂ ಮನೆ ಮುಟ್ಟುವಂತೆ ಮಾಡಲಿ. ಸುದರ್ಶನ್‌ ರಾವ್‌, ಕೃಷಿಕ, ಕುರ್ಕಾಲು ಗ್ರಾ.ಪಂ. ಸದಸ್ಯ

ಈಗಾಗಲೇ ಪೈಪು ಅಳವಡಿಸಿ ನೀರಿನ ಹರಿಯುವಿಕೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ನೀರಿನ ಪ್ರಮಾಣ ಇಳಿಕೆ ಆಗುತ್ತಿದೆ. ಮಮತಾ, ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next