ಕುಷ್ಟಗಿ: ಅಕಾಲಿಕ ಮಳೆಗೆ ತೊಗರಿ ಬೆಳೆಗೆ ವ್ಯಾಪಕ ಹಾನಿಯಾದ ಹಿನ್ನೆಲೆಯಲ್ಲಿ ರೈತರು ತೊಗರಿ ಬೆಳೆಗೆ ಪರಿಹಾರಕ್ಕೆ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದು ಅರ್ಜಿ ಸಲ್ಲಿಕೆ ಮುಂದಾಗಿದ್ದಾರೆ.
ವಾಯುಭಾರ ಕುಸಿತದಿಂದ ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಜಡಿ ಮಳೆಗೆ ತೊಗರಿ, ಭತ್ತ, ಶೇಂಗಾ, ದ್ರಾಕ್ಷಿ, ಮೆಣಸಿಕಾಯಿ, ಈರುಳ್ಳಿ, ಟೊಮ್ಯಾಟೊ ಬೆಳೆಗೆ ಹಾನಿಯಾಗಿದೆ. ಸರ್ಕಾರ ಭತ್ತ ತೊಗರಿ (ಕೃಷಿ ಇಲಾಖೆ), ಟೊಮ್ಯಾಟೊ, ಈರುಳ್ಳಿ, ಮೆಣಸಿಕಾಯಿ( ತೋಟಗಾರಿಕೆ ಇಲಾಖೆ) ಮೂಲಕ ಬೆಳೆ ಹಾನಿಯಾದ ಬಗ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಕುಷ್ಟಗಿ ತಾಲೂಕಿನಲ್ಲಿ ಭತ್ತ 150 ಹೆಕ್ಟೇರ್, ತೊಗರಿ 12ಸಾವಿರ ಹೆಕ್ಟೇರ್ ಬೆಳೆ ಇದೆ. ಈಗಾಗಲೇ ಭತ್ತಕ್ಕೆ ಹೆಕ್ಟೇರ್ ಗೆ 13,500 ರೂ ಪರಿಹಾರದ ಭರವಸೆಯನ್ನು ಗಣಿ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ ಭರವಸೆ ನೀಡಿದ್ದು, ತೊಗರಿ ಪರಿಹಾರದ ಬಗ್ಗೆ ಸ್ಪಷ್ಟ ಭರವಸೆ ಇಲ್ಲ.
ಆದಾಗ್ಯೂ ತಾಲೂಕಿನ ರೈತರು, ನಿಗದಿತ ಅರ್ಜಿ ನಮೂನೆಯಲ್ಲಿ ಪಹಣಿ, ಅಕೌಂಟ್ ಪಾಸ್ ಪುಸ್ತಕ ಝರಾಕ್ಸ್ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಲು ಸರದಿಯಲ್ಲಿ ನಿಂತಿದ್ದಾರೆ. ಅಕಾಲಿಕ ಮಳೆಗೆ ತೊಗರಿ ಗಿಡದಲ್ಲಿ ಮೊಳಕೆಯೊಡೆದು ವ್ಯಾಪಕ ಹಾನಿಯಾಗಿದ್ದರಿಂದ ರೈತರಿಗೆ ಕನಿಷ್ಠ ಪರಿಹಾರವಾದರೂ ಸಿಗುವ ಆಸೆಗೆ ರೈತರು ಅರ್ಜಿ ಹಿಡಿದು ನಿಂತಿದ್ದಾರೆ.
ಕೃಷಿ ಇಲಾಖೆ ತೊಗರೆ ಬೆಳೆ ಜಿಪಿಎಸ್ ಆಗಿರುವ ಬೆಳೆಗೆ ಅರ್ಜಿ ಪರಿಗಣಿಸುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಅರ್ಜಿ ಸಲ್ಲಿಕೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಹೆಚ್ಚುವರಿ ಅರ್ಜಿ ಸ್ವೀಕಾರ ಕೇಂದ್ರ ಆರಂಭಿಸಿಲ್ಲ. ಕಂದಾಯ ಇಲಾಖೆ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ರೈತರ ಸರದಿ ಬೆಳೆಯುತ್ತಿದ್ದು ರೈತರಿಗೆ ಕೆಲಸ ಬಿಟ್ಟು ಇಡೀ ದಿನ ನಿಲ್ಲಬೇಕಿದ್ದು ಸರ್ಕಾರ ಕೂಡಲೇ ಅಕಾಲಿಕ ಮಳೆಯಿಂದ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.