Advertisement

ಶೇ. 33 ನಷ್ಟವಾದರಷ್ಟೇ ಪರಿಹಾರ ಧನ

08:10 PM Nov 18, 2021 | Team Udayavani |

ಪುತ್ತೂರು: ಭತ್ತ ಬೆಳೆಯೋಣ ಬನ್ನಿ ಎಂಬುದು ಅಭಿಯಾನದ ರೂಪ ಪಡೆದ ಪರಿಣಾಮ ಪುತ್ತೂರು, ಕಡಬ ತಾಲೂಕಿನಲ್ಲಿ ಭತ್ತದ ಕೃಷಿಯು ಹೆಚ್ಚಿದ್ದು, ಈ ಬಾರಿ ದಾಖಲೆಯ ಫಸಲು ನಿರೀಕ್ಷಿಸಿದ್ದರೂ ಅಕಾಲಿಕ ಮಳೆಯ ಪರಿಣಾಮ ಫಸಲು ನಷ್ಟ, ಕೊಯ್ಲು ಕಾರ್ಯಕ್ಕೆ ತಡೆ ಒಡ್ಡಿದೆ.

Advertisement

ಈಗಾಗಲೇ ಕೃಷಿ ಮತ್ತು ಕಂದಾಯ ಇಲಾಖೆ ಪ್ರಾಥಮಿಕ ಸಮೀಕ್ಷೆ ನಡೆಸುತ್ತಿದ್ದು ನಷ್ಟದ ಪೂರ್ಣ ಲೆಕ್ಕಚಾರ ಇನ್ನಷ್ಟೇ ದೊರೆಯಲಿದೆ.

ಶೇ. 70 ಕಟಾವು:

ಪ್ರತೀ ವರ್ಷದಂತೆ ಈ ಸಮಯ ಬಿಸಿಲಿನ ವಾತಾವರಣ ಇರುತ್ತಿದ್ದರೆ ಕೆಲವು ದಿನಗಳಲ್ಲಿ ಬಹುತೇಕ ಭತ್ತದ ಬೆಳೆ ರೈತರ ಕೈ ಸೇರುತ್ತಿತ್ತು. ಕೃಷಿ ಇಲಾಖೆಯ ಸರ್ವೇ ಪ್ರಕಾರ ಉಭಯ ತಾಲೂಕಿನಲ್ಲಿ ಶೇ. 70ರಷ್ಟು ಮುಂಗಾರು ಹಂಗಾಮಿನ ಭತ್ತ ಕೃಷಿಯ ಕಟಾವು ಪೂರ್ಣಗೊಂಡಿದ್ದು ಶೇ. 30ರಷ್ಟು ಬಾಕಿ ಉಳಿದಿದೆ. ಕಟಾವು ಮಾಡಿದ ಪೈರಿನಿಂದ ಭತ್ತ ಬಿಡಿಸಲು ಆಗದೆ ರಾಶಿ ಹಾಕಲಾಗಿದೆ. ಕೆಲವೆಡೆ ಬೈ ಹುಲ್ಲು ಒಣಗದೆ ಮಳೆಗೆ ಕೊಳೆಯುತ್ತಿದೆ ಎನ್ನುತ್ತಾರೆ ಕೃಷಿಕ ರತನ್‌.

1,860 ಟನ್‌ ನಿರೀಕ್ಷೆ:

Advertisement

ಕಳೆದ ವರ್ಷ ಉಭಯ ತಾಲೂಕಿನಲ್ಲಿ 370 ಹೆಕ್ಟೇರ್‌ ಭತ್ತದ ಕೃಷಿ ಇತ್ತು. ಈ ಬಾರಿ 414 ಹೆಕ್ಟೇರ್‌ಗೆ ಏರಿಕೆ ಕಂಡಿದೆ. ಹೆಕ್ಟೇರ್‌ಗೆ 45 ಕಿಂಟ್ವಾಲ್‌ ಭತ್ತದ ನಿರೀಕ್ಷೆ ಇದ್ದು ಒಟ್ಟು 1,860 ಟನ್‌ ಭತ್ತ ದೊರೆಯುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಅಕಾಲಿಕ ಮಳೆ ಪರಿಣಾಮ ಈ ಪ್ರಮಾಣದಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ. ಈ ವರ್ಷ ಹಲವು ವರ್ಷಗಳಿಂದ ಹಡಿಲು ಬಿದ್ದಿರುವ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ್ದು ಪ್ರತೀ ಎಕರೆ ಭತ್ತ ಬೆಳೆಯಲು ಅಂದಾಜು 70 ಸಾವಿರ ರೂ.ವರೆಗೆ ಖರ್ಚು ಮಾಡಿರುವ ಬೆಳೆಗಾರರಿಗೆ ಮಳೆಯಿಂದ ಫಸಲು ನಷ್ಟವಾಗಿದೆ.

ಪರಿಹಾರ ಜುಜುಬಿ:

ಎನ್‌ಡಿಆರ್‌ಎಫ್ ಮಾನದಂಡದಲ್ಲಿ ಪಾಕೃತಿಕ ವಿಕೋ ಪದಲ್ಲಿ ಅಡಿಕೆ, ಬಾಳೆ, ಭತ್ತದ ಕೃಷಿ ನಷ್ಟಕ್ಕೆ ಸಿಗುವ ಪರಿಹಾರ ಮೊತ್ತ ಕೇಳಿದರೆ ನಷ್ಟಕ್ಕೊಳಗಾದ ಯಾವುದೇ ಕೃಷಿಕರು ಅರ್ಜಿ ಸಲ್ಲಿಸಲಾರರು. ಸಿಗುವ ಜುಜುಬಿ ಮೊತ್ತ ಪಡೆಯಲು ಕೆಲ ನಿಬಂಧನೆಗಳು ಇವೆ. ಹೀಗಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಪ್ರಾಕೃತಿಕ ವಿಕೋಪದ ಪರಿಹಾರ ದೊರೆಯಬೇಕಾದರೆ ಒಟ್ಟು ತೋಟದ ಶೇ. 33 ಬೆಳೆ ನಷ್ಟವಾಗಬೇಕು.

ಅದಕ್ಕಿಂತ ಕಡಿಮೆ ನಷ್ಟವಾಗಿದ್ದರೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಗ್ರಾಮಕರಣಿಕರು ಸ್ಥಳ ತಪಾಸಣೆ ನಡೆಸುತ್ತಾರೆ. ಬೆಳೆ ನಷ್ಟದ ಬಗ್ಗೆ ಕಂದಾಯ ಅಧಿಕಾರಿಗಳಿಂದ ಶಿಫಾರಸುಗೊಂಡು ತಹಶೀಲ್ದಾರ್‌ ರುಜು ಪಡೆದು, ಆಯಾ ಕೃಷಿಗೆ ಸಂಬಂಧಿಸಿದ ಇಲಾಖೆ ಸಮ್ಮತಿ ಸಿಕ್ಕಿದ ಅನಂತರ ಕಂದಾಯ ಇಲಾಖೆ ಮೂಲಕ ಚೆಕ್‌ ನೀಡಲಾಗುತ್ತದೆ.

ಅಡಿಕೆ, ತೆಂಗು, ಭತ್ತ ಮೊದಲಾದ ಕೃಷಿ ಆಧಾರಿತ ಬೆಳೆಗೆ ಹೆಕ್ಟೇರ್‌ಗೆ ನೀಡುವ ಪರಿಹಾರದ ಮೊತ್ತ 6,800 ರೂ., ಅಂದರೆ ಎರಡೂವರೆ ಎಕ್ರೆಯ ಎಲ್ಲ ಕೃಷಿ ನಷ್ಟವಾದರೆ ಮಾತ್ರ ಇಷ್ಟು ಮೊತ್ತ ದೊರೆಯಬಲ್ಲುದು ಅನ್ನುತ್ತದೆ ಇಲಾಖೆ ನಿಯಮ. ಭತ್ತದ ಕೃಷಿಗೆ ಸಂಬಂಧಿಸಿ

ದಂತೆ ಡ್ರೈಲ್ಯಾಂಡ್‌ನ‌ಲ್ಲಿ ಎರಡೂವರೆ ಎಕ್ರೆ ನಷ್ಟಕ್ಕೆ 6,500 ರೂ., ವೆಟ್‌ ಲ್ಯಾಂಡ್‌ನ‌ಲ್ಲಿ 13 ಸಾವಿರ ರೂ., ಫ್ಲಾಂಟೇಶನ್‌ಗೆ 18 ಸಾವಿರ ರೂ.ನಿಗದಿಪಡಿಸಲಾಗಿದೆ. ಈ ವರ್ಷ ಕಡಬ ತಾಲೂಕಿನ ಓರ್ವ ಭತ್ತದ ಬೆಳೆಗಾರ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಾಕೃತಿಕ ವಿಕೋಪದಿಂದ ಕಡಬ ತಾಲೂಕಿನಲ್ಲಿ 30 ಸೆಂಟ್ಸ್‌ ಭತ್ತದ ಕೃಷಿ ನಷ್ಟವಾಗಿದ್ದು, ಈ ಬಗ್ಗೆ ಇಲಾಖೆಗೆ ಮಾಹಿತಿ ದೊರೆತು ಪರಿಶೀಲನೆ ಬಳಿಕ ನಷ್ಟದ ಅಂದಾಜು ಅನ್ನು ಕಂದಾಯ ಇಲಾಖೆಗೆ ಕಳುಹಿಸಲಾಗಿದೆ. ಉಭಯ ತಾಲೂಕಿನಲ್ಲಿ ಈಗಾಗಲೇ ಶೇ. 70ರಷ್ಟು ಕಟಾವು ಪ್ರಕ್ರಿಯೆ ನಡೆದಿದೆ. ಮಳೆಯಿಂದ ಇತರೆಡೆ ಹಾನಿ ಉಂಟಾಗಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು, ಕೃಷಿ ಇಲಾಖೆ

 

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next