ಚಾಮರಾಜನಗರ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಮುಖ್ಯ ಮಂತ್ರಿ ಹುದ್ದೆ ನೀಡಿರುವ ಹಾಗೆ ಸುತ್ತೂರುಶ್ರೀ ದೇಶಿಕೇಂದ್ರ ಸ್ವಾಮೀಜಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿ ಬಳಿಕ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಎಂದು ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಒತ್ತಾಯಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ, ಜಲ, ಭಾಷೆ ಹಾಗೂ ನಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಆಗ ರಾಜ್ಯದಲ್ಲಿ ಸುಭದ್ರ ಸರ್ಕಾರ ನೀಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದರು.
ಸಮ ಸಮಾಜದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಸುತ್ತೂರು ಶ್ರೀಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಲು ಕಷ್ಟಪಡುವ ಕೆಲಸಗಳನ್ನು ಸುತ್ತೂರುಶ್ರೀಗಳು ಸರಾಗವಾಗಿ ಮಾಡುತ್ತಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ರೈತರಿಗೆ ಅನುಕೂಲವಾಗಲು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಆಳ್ವಿಕೆ ಮಾಡಿದ ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ಮೂಲಕ ಈ ಕಾರ್ಯದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಗತವಾಗಲು ಅವರೇ ಪ್ರಮುಖ ಕಾರಣಕರ್ತರು ಎಂದು ಅವರು ಹೇಳಿದರು.
ಇದನ್ನೂ ಓದಿ:ಬೈಕ್ ಮತ್ತು ಗೂಡ್ಸ್ ರಿಕ್ಷಾಗಳ ನಡುವೆ ಅಪಘಾತ : ಬೈಕ್ ಸವಾರ ಸಾವು
ಸುತ್ತೂರು ಶ್ರೀಗಳು ಮುಖ್ಯಮಂತ್ರಿಯಾದರೆ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ, ಹಸಿವು ಮುಕ್ತ, ನಿರುದ್ಯೋಗ ಮುಕ್ತ ರಾಜ್ಯವನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಆಲೋಚನೆ ಮಾಡಬೇಕಿದೆ ಎಂದು ಮಲ್ಲು ತಿಳಿಸಿದರು.
ಮುಖ್ಯಮಂತ್ರಿಯಾಗಬೇಕೆಂಬುದು ಸ್ವಾಮೀಜಿಯವರ ಅಭಿಪ್ರಾಯವಲ್ಲ. ಇದು ನಮ್ಮೆಲ್ಲರ ಮನವಿ ಅಷ್ಟೇ. ಅವರು ಮುಖ್ಯಮಂತ್ರಿಯಾಗಬೇಕೆಂಬ ಬಗ್ಗೆ ಇತರ ಸಮುದಾಯಗಳ ಮುಖಂಡರೂ ಒತ್ತಾಯ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ಪ್ರಕಾಶ್, ಮುಖಂಡರಾದ ಹೊನ್ನೂರು ಬಸವಣ್ಣ, ಚಿನ್ನಸ್ವಾಮಿ, ವಾಸು ಉಪಸ್ಥಿತರಿದ್ದರು.