ಮೈಸೂರು: ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಸೆ.23 ರಿಂದ ಅ.2 ರವರೆಗೆ ರೈತರ ಕ್ರಾಂತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಚುನಾವಣೆ ವೇಳೆ ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿಗೊಳಿಸಿವ ಭರವಸೆ ನೀಡಿತ್ತು. ಆದರೆ ಮತ್ತೂಂದು ಲೋಕಸಭಾ ಚುನಾವಣೆ ಬರುತ್ತಿದ್ದರೂ ಈ ಭರವಸೆ ಈಡೇರಿಲ್ಲ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಘೋಷಿಸಿರುವ ರೈತಪರವಾದ ಹೊಸ ಯೋಜನೆಗಳೆಲ್ಲವೂ ಸುಳ್ಳಾಗಿದ್ದು,
ಹಳೆ ಯೋಜನೆಗಳನ್ನೇ ಹೊಸದೆಂದು ಬಿಂಬಿಸಲು ಹೊರಟಿವೆ. ಯಾವುದೇ ರೈತಪರವಾದ ನೀತಿಯನ್ನು ಜಾರಿಗೊಳಿಸಿಲ್ಲ. ಬದಲಿಗೆ ಹಳೆಯ ಯೋಜನೆಗಳಿಗೆ ಹೊಸ ಹೆಸರು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನಡೆಸುತ್ತಿರುವ ರೈತ ಕ್ರಾಂತಿ ಯಾತ್ರೆ ಸೆ.23ರಂದು ಹರಿದ್ವಾರದಲ್ಲಿ ಆರಂಭವಾಗಿ, ಅ.2ರಂದು ದೆಹಲಿಯ ಕಿಸಾನ್ ಘಾಟ್‌ನಲ್ಲಿ ಮುಕ್ತಾಯವಾಗಲಿದೆ. ಈ ಯಾತ್ರೆಯಲ್ಲಿ ದೇಶದ ವಿವಿಧ ರಾಜ್ಯಗಳ ರೈತರು ಭಾಗವಹಿಸಿ, ತಮ್ಮ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಅಲ್ಲದೆ ರೈತ ಕ್ರಾಂತಿ ಯಾತ್ರೆ ಮೂಲಕ ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿಗೊಳಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಪಿ. ರಾಮಸ್ವಾಮಿ, ಮಂಜುನಾಥ್ ಮುಡಿಗೇರಿ, ಕಾರ್ಯಾಧ್ಯಕ್ಷ ಶಾಂತಸ್ವಾಮಿ ಮಠ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್. ಅಶ್ವಥ್‌ನಾರಾಯಣರಾಜೇ ಅರಸ್, ಲೋಕೇಶ್‌ರಾಜ ಅರಸ್ ಹಾಜರಿದ್ದರು.
ರಾಜ್ಯದ ಅಭಿವೃದ್ಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಪಾತ್ರ ಪ್ರಮುಖವಾಗಿವೆ. ಹೀಗಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ರಾಜಕೀಯ ದೊಂಬರಾಟ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರು ನಿಮ್ಮ ನಾಟಕಕ್ಕೆ ಬೀದಿಯಲ್ಲಿ ಉತ್ತರ ನೀಡಲಿದ್ದು, ರೈತರು ಸಹ ಹೋರಾಟ ನಡೆಸಬೇಕಾಗುತ್ತದೆ.
-ಬಡಗಲಪುರ ನಾಗೇಂದ್ರ, ರೈತ ಮುಖಂಡ.