Advertisement

ಹೆದ್ದಾರಿಯಲ್ಲಿ ರೈತರ ಹೋರಾಟದ ಕಿಚ್ಚು

05:45 PM Feb 07, 2021 | Team Udayavani |

ಬೆಳಗಾವಿ: ರೈತರಿಗೆ ಮಾರಕವಾಗಿರುವ 3 ಕಾಯ್ದೆಗಳನ್ನು ಕೂಡಲೇ ವಾಪಸ್‌ ಪಡೆಯ ಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತರ ಸಂಘ,ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ತಡೆ ನಡೆಸಿದರು.

Advertisement

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಧರಣಿ ಕುಳಿತು ರಸ್ತೆ ತಡೆ ಚಳವಳಿ ನಡೆಸಿದ ಸುಮಾರು 50 ಜನ ಭಾರತೀಯ ಕೃಷಿಕ ಸಮಾಜ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಇನ್ನೊಂದು ಕಡೆ ಕೇಂದ್ರದ ಮಾಜಿ ಸಚಿವ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕರಾದ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ನೂರಾರು ರೈತರು ಚಿಕ್ಕಬಾಗೇವಾಡಿ ಗ್ರಾಮದ ಬಳಿ ರಸ್ತೆ ತಡೆ ನಡೆಸಿ  ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.

ನಿಪ್ಪಾಣಿಯಲ್ಲಿ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆ ನಡೆಸಿ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ದೆಹಲಿಯಲ್ಲಿ ಕೊರೆಯುವ ಚಳಿಯಲ್ಲೂ ಸಾವಿರಾರು ರೈತರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

Advertisement

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಧ್ಯಾಹ್ನ ಸುಮಾರು 12 ಗಂಟೆಗೆ ಧರಣಿ ಆರಂಭಿಸಿದ ಭಾರತೀಯ ಕೃಷಿಕ ಸಮಾಜ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು  ಪೊಲೀಸರು ವಶಕ್ಕೆ ಪಡೆದಿದ್ದರಿಂದ ಪ್ರತಿಭಟನೆ ಒಂದು ಗಂಟೆಯೊಳಗೆ ಮುಕ್ತಾಯ ಕಂಡಿತು. ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರನ್ನು ಬಂಧಿಸಿದ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಇದಕ್ಕೂ ಮುನ್ನ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂದೆ ಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ಕೃಷಿಕ ಸಮಾಜದ ಅಖೀಲಾ ಪಠಾಣ, ಕರ್ನಾಟಕ ರಾಜ್ಯ ರೈತ ಸಂಘದ ಜಯಶ್ರೀ ಗುರಣ್ಣವರ ಮೊದಲಾದವರು ಪಾಲ್ಗೊಂಡಿದ್ದರು.

ಮೋದಿ ಮೇಲೆ ವಿಶ್ವಾಸ ಇಲ್ಲ: ಚಿಕ್ಕಬಾಗೇವಾಡಿ ಬಳಿ ನಡೆದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ 18 ತಿಂಗಳ ಕಾಲ ಕಾನೂನುಗಳನ್ನು ಜಾರಿ ಮಾಡುವುದಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಮೇಲೆ ನಮಗೆ ವಿಶ್ವಾಸ ಇಲ್ಲ. ಕಾರಣ ಅವರು ಕೊಟ್ಟ  ಯಾವ ಭರವಸೆಗಳೂ ಇದುವರೆಗೆ ಈಡೇರಿಲ್ಲ. ಹೀಗಾಗಿ ರೈತರಿಗೆ ಶಾಪವಾಗಿರುವ ಮೂರು  ಕಾನೂನುಗಳನ್ನು ವಾಪಸ್‌ ಪಡೆಯಬೇಕು. ಅದನ್ನು ಬಿಟ್ಟು ಬೇರೆ ಮಾತೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕಾನೂನುಗಳು ನಮ್ಮನ್ನು ದಾಸರನ್ನಾಗಿ ಮಾಡುತ್ತವೆ. ಇದರಿಂದ ನಾವು ರೈತರು ಮುಂದೆ ಅಂಬಾನಿ, ಅದಾನಿ ಅಂಥವರ ಮನೆಗಳಲ್ಲಿ ಆಳುಗಳಾಗಿ ದುಡಿಯಬೇಕಾಗುತ್ತದೆ. ಅವರ ವಾಹನಗಳ ಚಾಲಕರಾಗಿ ಕೆಲಸ ಮಾಡಬೇಕಾಗುತ್ತದೆ. ರೈತರ ಪರ ಕಾನೂನು ಮಾಡುವುದೇ ಇದ್ದರೆ  ಮೊದಲು ಅವು ಹಳ್ಳಿಗಳಲ್ಲಿ ಪಾಸ್‌ ಆಗಬೇಕು. ನಂತರ ಸಂಸತ್‌ನಲ್ಲಿ ಅನುಮೋದನೆ ನೀಡಬೇಕು ಎಂದು ಬಾಬಾಗೌಡ ಪಾಟೀಲ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದರು.

ಇದನ್ನೂ ಓದಿ :ಗಣತಿಯಲ್ಲಿ “ಬ್ರಾಹ್ಮಣ’ ನಮೂದಿಸಲು ಹಿಂಜರಿಕೆ ಬೇಡ

ಪ್ರಧಾನಿ ಮೋದಿ, ಕೇಂದ್ರದ ಕೃಷಿ ನರೇಂದ್ರಸಿಂಗ್‌ ತೋಮರ್‌ ಸೇರಿದಂತೆ ಬಿಜೆಪಿ ಯವರು ರೈತರ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ನಮ್ಮದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂಬುದು ಒಂದೇ ಮಾತು. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೃಷಿ ಕಾನೂನು ಬಗ್ಗೆ ಖ್ಯಾತ ಕ್ರಿಕೆಟ್‌ ಪಟು ಸಚಿನ್‌ ತೆಂಡೂಲ್ಕರ ಹೇಳಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಾಬಾಗೌಡ ಸಚಿನ್‌ ತೆಂಡೂಲಕರ ಸೇರಿದಂತೆ ಪದ್ಮಭೂಷಣ ಪಡೆದವರು ರೈತರ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ಒಕ್ಕಲುತನ ಮಾಡಿಯೇ ಗೊತ್ತಿಲ್ಲ. ಬೇಕಾದರೆ ಅವರಿಗೆ ನಾವು ಸ್ವಂತ ಜಮೀನು ಕೊಡುತ್ತೇವೆ. ಎತ್ತುಗಳನ್ನು ಕೊಡಿಸುತ್ತೇವೆ. ಐದು ವರ್ಷ ಒಕ್ಕಲುತನ ಮಾಡಲಿ ನಂತರ ಕೃಷಿ ಕಾಯ್ದೆ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next