Advertisement

ರೈತ ಪ್ರತಿಭಟನೆ ತೀವ್ರ : ಇಂದು ದಿಲ್ಲಿಯಲ್ಲಿ ಅನ್ನದಾತರ ನಿರಶನ

02:19 AM Dec 14, 2020 | sudhir |

ಹೊಸದಿಲ್ಲಿ: ಕೇಂದ್ರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ಕಳೆದ 2 ವಾರಗಳಿಂದ ದಿಲ್ಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಗೊಂಡಿದ್ದು, ಸೋಮವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಿರಶನ ನಡೆಸುವ ಮೂಲಕ ಕೇಂದ್ರ ಸರಕಾರದ ಮೇಲೆ ಮತ್ತಷ್ಟು ಒತ್ತಡ ತರಲು ರೈತ ಸಂಘಟನೆಗಳು ನಿರ್ಧರಿಸಿವೆ.

Advertisement

ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ರೈತರು ಧರಣಿ ನಡೆಸಲಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲೂ ನಿರ್ಧರಿಸಲಾಗಿದೆ. ಇದೇ ವೇಳೆ, ಪ್ರತಿಭಟನೆಯನ್ನು ಬೆಂಬಲಿಸಿ ಸಾವಿರಾರು ರೈತರು ದಿಲ್ಲಿ ಗಡಿಯತ್ತ ತೆರಳುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ. ಬಹು ಹಂತದ ಬ್ಯಾರಿಕೇಡ್‌ಗಳನ್ನು ಇಟ್ಟು ಪ್ರತಿಭಟನಕಾರರನ್ನು ತಡೆಯಲು ಯತ್ನಿಸಲಾಗುತ್ತಿದೆ.

ರವಿವಾರ ರೈತರು ಟ್ರ್ಯಾಕ್ಟರ್‌ ರ್ಯಾಲಿ ನಡೆಸಿ 3 ಗಂಟೆಗಳ ಕಾಲ ದಿಲ್ಲಿ-ಜೈಪುರ ಹೆದ್ದಾರಿಯನ್ನು ತಡೆದಿದ್ದಾರೆ. ತದನಂತರ ರೈತರೇ ರಸ್ತೆ ತಡೆ ನಿರ್ಧಾರದಿಂದ ಹಿಂದೆ ಸರಿದು, ಭಾಗಶಃ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಶಾ- ತೋಮರ್‌ ಚರ್ಚೆ: ಬಿಕ್ಕಟ್ಟು ಮುಂದುವರಿದಿರು ವಂತೆಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೃಷಿ ಸಚಿವ ತೋಮರ್‌ ಹಾಗೂ ಪಂಜಾಬ್‌ನ ಬಿಜೆಪಿ ನಾಯಕರೊಂದಿಗೆ ರವಿವಾರ ಮಾತುಕತೆ ನಡೆಸಿದ್ದಾರೆ. ಈ ನಡುವೆ, ರೈತರಿಗೆ ಬೆಂಬಲ ಸೂಚಿಸಿ ಸೋಮವಾರ ತಾವೂ ಉಪವಾಸ ಕೈಗೊಳ್ಳುವುದಾಗಿ ದಿಲ್ಲಿ ಸಿಎಂ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಡಿಐಜಿ ರಾಜೀನಾಮೆ: ರೈತರಿಗೆ ಬೆಂಬಲ ಸೂಚಿಸಿ ಪಂಜಾಬ್‌ ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌ ಲಖ್‌ಮೀಂದರ್‌ ಸಿಂಗ್‌ ಜಾಖರ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಾನು ಕೂಡ ಒಬ್ಬ ರೈತ. ನನ್ನ ಆತ್ಮ ಸಾಕ್ಷಿಯಂತೆ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

Advertisement

ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸಿದರು: ಇನ್ನೊಂದೆಡೆ, ರೈತರಿಗೆ ಬೆಂಬಲ ಸೂಚಿಸಿ ಗಾಜಿಪುರ ಗಡಿಗೆ ಬಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಗುಂಪನ್ನು ಪ್ರತಿಭಟನನಿರತರು ವಾಪಸ್‌ ಕಳುಹಿಸಿದ್ದಾರೆ. “ನಮ್ಮ ಹೋರಾಟವನ್ನು ನಾವೇ ಮಾಡುತ್ತೇವೆ. ದೇಶವನ್ನು ಒಡೆಯಲು ಬಯಸುವ ಯಾರೂ ನಮಗೆ ಅಗತ್ಯವಿಲ್ಲ’ ಎಂದು ರೈತರು ಹೇಳಿದ್ದಾರೆ.

ಕೇಂದ್ರದ ಸಚಿವರನೇಕರು ಪ್ರತಿಭಟನ ನಿರತರನ್ನು “ತುಕ್ಡೆ ತುಕ್ಡೆ ಗ್ಯಾಂಗ್‌, ಖಲಿಸ್ಥಾನಿಗಳು, ಪಾಕ್‌-ಚೀನ ಏಜೆಂಟರು, ನಕ್ಸಲರು’ ಎಂದೆಲ್ಲ ಕರೆಯುತ್ತಿದ್ದಾರೆ. ಅವರು ರೈತರೇ ಅಲ್ಲ ಎಂದ ಮೇಲೆ ಸರಕಾರ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದೇಕೆ?
– ಪಿ.ಚಿದಂಬರಂ, ಕಾಂಗ್ರೆಸ್‌ ನಾಯಕ

ಪ್ರಧಾನಿ ಮೋದಿ ನೇತೃತ್ವದ ಸರಕಾರವು ರೈತರನ್ನು ಗೌರವಿಸುತ್ತದೆ. ಆದರೆ, ರೈತರ ಪ್ರತಿಭಟನೆಯನ್ನು ತುಕ್ಡೆ ತುಕ್ಡೆ ಗ್ಯಾಂಗ್‌  ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು.
– ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next