ಕೊಪ್ಪಳ: ದೆಹಲಿ ರೈತ ಹೋರಾಟ ಬೆಂಬಲಿಸಿ ಜಿಲ್ಲೆಯ ವಿವಿಧ ರೈತಪರ ಸಂಘಟನೆಗಳು ಜಂಟಿಯಾಗಿ ತಾಲೂಕಿನ ಹಿಟ್ನಾಳ ಟೋಲ್‌ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-13ನ್ನು 2 ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
ಆಮ್ ಆದ್ಮಿ ಪಾರ್ಟಿ, ಕರ್ನಾಟಕ ರೈತ ಸಂಘ,ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಿಐಟಿಯು, ಎಐಡಿವೈಒ, ರೈತ ಸಂಘಟನೆಗಳ ಸಮನ್ವಯ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಜಂಟಿಯಾಗಿ ತಾಲೂಕಿನ ಹಿಟ್ನಾಳ ಟೋಲ್‌ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-16ರ ಸಂಚಾರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೇಂದ್ರ ಸರ್ಕಾರವು ರೈತ ವಿರೋ ಧಿ ಕಾಯ್ದೆಗಳನ್ನು ಜಾರಿ ಮಾಡಿದೆ. ಇದರಿಂದ ರೈತರಿಗೆ ದೊಡ್ಡ ಅಪಾಯ ಎದುರಾಗಲಿದೆ. ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಹಲವು ದಿನಗಳಿಂದ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದಾರೆ.
ಗಣರಾಜ್ಯೊತ್ಸವ ದಿನದಂದು ರೈತರು ಹೋರಾಟ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರವು ಕೆಂಪು ಕೋಟೆ ಮೇಲೆ ಭಾವುಟ ಹಾರಾಡಿಸಿದರು ಎನ್ನುವ ಕಾರಣದಿಂದ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ರಸ್ತೆಗಳಿಗೆ ಮೊಳೆ ಹೊಡೆಯಿತು. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ ರೈತರ ಪರ ಹಲವರು ಧ್ವನಿ ಎತ್ತಿದ್ದಿರಿಂದ ತಮ್ಮ ಮಾನ ಉಳಿಸಿಕೊಳ್ಳಲು ರಸ್ತೆಯ ಮೇಲೆ ಹೊಡೆದಿದ್ದ ಮೊಳೆ ತೆಗೆಸಿದರು. ಪ್ರಸ್ತುತ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿವೆ. ಸರ್ಕಾರವು ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಗೆ ವೈಜ್ಞಾನಿಕ ಬೆಲೆ ಕೊಟ್ಟರೆ ಅನ್ನದಾತ ಸಮುದಾಯ ಉಳಿಯಲಿದೆ. ಇಲ್ಲದಿದ್ದರೆ ಆಹಾರ ಭದ್ರತೆ ಕೊರತೆ ಎದುರಾಗಲಿದೆ. ಇಂದು ರೈತ ಸಮೂಹ ಸಿಡಿದೆದ್ದಿದೆ. ದೆಹಲಿ ಮಟ್ಟದಲ್ಲಿ ದೊಡ್ಡ ಹೋರಾಟಕ್ಕೆ ನಿಂತಿದೆ. ಪ್ರಧಾನಿ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಪ್ರತಿಭಟನಾ ಸ್ಥಳಕ್ಕೆ ಭೇಟಿಯೂ ನೀಡಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂದು ದೇಶವನ್ನು ಬಿಜೆಪಿ ಆಳುತ್ತಿಲ್ಲ. ಬದಲಾಗಿ ಆರ್‌ಎಸ್ ಎಸ್, ಸಂಘ ಪರಿವಾರ ಆಡಳಿತ ನಡೆಸುತ್ತಿವೆ ಎಂದು ಆರೋಪಿಸಿದರು.
ಇದನ್ನೂ ಓದಿ :ಭಂಗಿ ಭೂತಪ್ಪ ದೇವರ ವಾರ್ಷಿಕೋತ್ಸವ
ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್‌ಸಾಬ್ ಮೂಲಿಮನಿ, ರೈತ ಸಂಘದ ಅಧ್ಯಕ್ಷ ಡಿ.ಎಚ್. ಪೂಜಾರ, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ್, ಶಿವಪ್ಪ ಮುಂಗೋಲಿ, ಎಐಡಿವೈಒನ ಶರಣು ಪಾಟೀಲ್, ಆಮ್ ಆದ್ಮಿ ಪಾರ್ಟಿಯ ಹುಸೇನಸಾಬ್ ಗಂಗನಾಳ, ಶರಣಪ್ಪ ಸಜ್ಜಿಹೊಲ, ಚನ್ನಬಸವ ಜಕ್ಕಿನ್, ಗಣೇಶ ಕಾಟಾಪೂರ, ದೊಡ್ಡಬಸಪ್ಪ, ಗಣೇಶ ಜಂತಕಲ್ ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.