ಧಾರವಾಡ: ಕೃಷಿ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಮತ್ತು ರೈತರು-ಕೃಷಿ ವಿಜ್ಞಾನಿಗಳ ಚರ್ಚಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿವಿ ಕುಲಪತಿ ಡಾ| ಮಹಾದೇವ ಚೆಟ್ಟಿ ಮಾತನಾಡಿ, ರೈತ ಉತ್ಪಾದನಾ ಕಂಪನಿಗಳು ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ವಿಶ್ವವಿದ್ಯಾಲಯವೂ ಸಹ ರೈತ ಉತ್ಪಾದನಾ ಕಂಪನಿಗಳ ಜತೆಗೆ ಸೇರಿ ಬೀಜೋತ್ಪಾದನೆ ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತಿದೆ ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ| ರಾಜಶೇಖರ ಬಿಜಾಪುರ ಮಾತನಾಡಿ, ಮೌಲ್ಯವರ್ಧನೆ ಚಟುವಟಿಕೆಗಳ ಮೂಲಕ ರೈತರು ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ, ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿದರು. ಲಕ್ಕುಂಡಿ ಗ್ರಾಮದ ನಿವೃತ್ತ ಸೇನಾನಿಗಳು ಹಾಗೂ ಪ್ರಗತಿಪರ ರೈತರಾದ ದತ್ತಣ್ಣಾ ಜೋಶಿ, ಪಾರ್ವತಿ ದಂಡಿನ ಅವರನ್ನು ಸನ್ಮಾನಿಸಲಾಯಿತು.
ರೈತರು ಮತ್ತು ಕೃಷಿ ವಿಜ್ಞಾನಿಗಳ ಚರ್ಚಾಗೋಷ್ಠಿಯಲ್ಲಿ ಕಳೆ ನಿರ್ವಹಣೆ ಕುರಿತು ಡಾ|ರಮೇಶ ಬಾಬು, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಬಗ್ಗೆ ಡಾ| ಸತೀಶ ಎಸ್. ದೇಸಾಯಿ ಮತ್ತು ರೈತ ಉತ್ಪಾದಕ ಕಂಪನಿಗಳಿಂದ ಬೀಜೋತ್ಪಾದನೆ ಎಂಬ ವಿಷಯ ಕುರಿತು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಉಪನ್ಯಾಸ ನೀಡಿದರು. ವಿಶ್ವವಿದ್ಯಾಲಯದ ಸ್ನೇಹ ತಂಡದ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಮತ್ತು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಯಲ್ಲನಗೌಡ ಎನ್. ಪಾಟೀಲ, ಮಲ್ಲೇಶ ಪಿ., ವಿವಿ ವಿದ್ಯಾ ಧಿಕಾರಿ ಡಾ| ಬಿ.ಡಿ. ಬಿರಾದಾರ, ಡಾ| ಪಿ.ಎಲ್. ಪಾಟೀಲ, ಡಾ| ಶ್ರೀಪಾದ ಕುಲಕರ್ಣಿ, ಡಾ| ಎಸ್.ಎ. ಬಿರಾದಾರ ಇದ್ದರು. ಡಾ| ಬಾಲಚಂದ್ರ ಕೆ. ನಾಯಕ್ ಸ್ವಾಗತಿಸಿದರು. ಡಾ| ಗೀತಾ ಎಸ್. ತಾಮಗಾಳೆ ನಿರೂಪಿಸಿದರು. ಡಾ| ಪಿ.ಎಸ್. ಹೂಗಾರ ವಂದಿಸಿದರು.