ಬ್ಯಾಡಗಿ: ಡಿ. 8ರಂದು ರೈತ ಸಂಘಟನೆಗಳ ಒಕ್ಕೂಟಗಳು ಕರೆ ಕೊಟ್ಟಿರುವ “ಭಾರತ ಬಂದ್’ಗೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಬೆಂಬಲ ಸೂಚಿಸಿದ್ದು, ಮಂಗಳವಾರ ಹಾವೇರಿ ಜಿಲ್ಲಾ ಕೇಂದ್ರ ಸ್ಥಗಿತಗೊಳಿಸಿ ಬಂದ್ ನಡೆಸುವುದಾಗಿ ತಿಳಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಇವುಗಳ ವಿರುದ್ಧ ಕಳೆದ 10 ದಿನಗಳಿಂದ ದೇಶದ ರೈತರು ದೆಹಲಿಯಲ್ಲಿ ಹೊರವಲಯದಲ್ಲಿ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ಗಂಗಣ್ಣ ಎಲಿ ಮಾತನಾಡಿ, ಈ ಕಾಯ್ದೆ ರಾಜ್ಯಕ್ಕೂ ಮಾರಕವಾಗಿದ್ದು, ಈಗಾಗಲೇ ಸಾಂಕೇತಿಕ ಧರಣಿ, ಮನವಿಗಳನ್ನು ಸಲ್ಲಿಸಿದಾಗ್ಯೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:ದೀಪೋತ್ಸವ ಪರಿವರ್ತನೆಗೆ ನಾಂದಿ
ಇದರಿಂದ ದೇಶದಲ್ಲಿ ರೈತರುತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಆರೋಪಿಸಿದರು. ಕಿರಣ ಗಡಿಗೋಳ ಮಾತನಾಡಿ, ಈ ಕಾಯ್ದೆ ಜಾರಿಗೊಳಿಸುವುದರಿಂದ ಕಾರ್ಪೋರೇಟ್ ವಲಯಕ್ಕೆ ಹೆಚ್ಚಿನ ಅನುಕೂಲ ಸಿಗಲಿದ್ದು, ಕೃಷಿ ವಲಯಕ್ಕೆ ಧಕ್ಕೆಯಾಗಲಿದೆ. ಯಾವುದೇ ಚರ್ಚೆಗಳನ್ನು ಮಾಡದೇ ಕೊರೊನಾ ಸಂದರ್ಭದಲ್ಲಿ ಸದರಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಚಿಕ್ಕಪ್ಪ ಛತ್ರದ ಮಾತನಾಡಿ, ಡಿ. 8ರಂದು ಬೆಳಗ್ಗೆ 10ಕ್ಕೆ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಬಂದ್ ನಡೆಸಲು ನಿರ್ಧರಿಸಿದ್ದು, ರೈತರು ಹೊಸ್ಮನಿ ಸಿದ್ಧಪ್ಪ ವೃತ್ತದಲ್ಲಿ ಸೇರಿಕೊಳ್ಳುವಂತೆ ಮನವಿ ಮಾಡಿದರು.