ಯಡ್ರಾಮಿ: ಪ್ರಸಕ್ತ ವರ್ಷದಲ್ಲಿ ಅತಿವೃಷ್ಟಿಗೆ ಹತ್ತಿ, ತೊಗರಿ ಬೆಳೆ ಸಂಪೂರ್ಣ ನಾಶವಾಗಿ ಈ ಭಾಗದ ರೈತರನ್ನು ಕಂಗಾಲಾಗಿಸಿದೆ. ತೊಗರಿಗೆ ನೆಟೆ ರೋಗ ಆವರಿಸಿದರೆ, ಹತ್ತಿ ಬೆಳೆಗೆ ಕೆಂಪು ಕೀಟದ ಅತಿಯಾದ ಕಾಟದಿಂದ ರೈತರಿಗೆ ಶೂನ್ಯ ಇಳುವರಿಯೇ ಗತಿ ಎನ್ನುವಂತಾಗಿದೆ.
ತಾಲೂಕಿನ ಮಳ್ಳಿ, ನಾಗರಹಳ್ಳಿ, ಕುಳಗೇರಿ, ವಡಗೇರಿ, ಬಿರಾಳ,ಮಾಗಣಗೇರಿ, ಪಡದಳ್ಳಿ, ಬಳಬಟ್ಟಿ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ಸೂಕ್ತ ಬೆಲೆ ದೊರಕದೇ ಈ ವರ್ಷ ಆರ್ಥಿಕವಾಗಿ ದುರ್ಬಲ ಆಗುವಂತೆ ಆಗಿದೆ. ಈ ಬಾರಿ ಭತ್ತ ನಾಟಿ ಮಾಡಿದ ರೈತರು ಸದ್ಯರಾಶಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಬಹುತೇಕ ರಾಶಿ ಕಾರ್ಯ ಕೊನೆ ಹಂತದಲ್ಲಿದೆ. ಉತ್ತಮ ಫಸಲು ಬಂದಿದೆ.
ಪ್ರತಿ ಎಕರೆ ಭತ್ತ ಬೆಳೆಯಲು 30ರಿಂದ 35 ಸಾವಿರ ರೂ. ಖರ್ಚು ತಗುಲುವುದು. ಪ್ರಸಕ್ತ ವರ್ಷಕ್ಕೆ ಸರಾಸರಿ 30ರಿಂದ 38ಕ್ವಿಂಟಲ್ ಭತ್ತದ ಇಳುವರಿ ಬಂದಿದ್ದು, ಸದ್ಯ ಪ್ರತಿ 75ಕೆ.ಜಿ ಭತ್ತದಚೀಲಕ್ಕೆ 980ರೂ.ದಿಂದ 1050ರೂ. ಮಾತ್ರ ಬೆಲೆ ಸಿಗುತ್ತಿದೆ. ಈಹಿನ್ನೆಲೆಯಲ್ಲಿ ಖರ್ಚು ಮಾಡಿದಷ್ಟೂ ಹಣ ಬಾರದೆ ಲಕ್ಷಾಂತರ ರೂ.ನಷ್ಟ ಅನುಭವಿಸುತ್ತಿದ್ದೇವೆ ಎಂದು ಭತ್ತ ಬೆಳೆಯುವ ರೈತರು ತಮ್ಮಅಳಲು ತೋಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಸರ್ಕಾರ ಪ್ರತಿ ಕ್ವಿಂಟಲ್‌ಗೆ 1870 ರೂ. ಬೆಂಬಲ ಬೆಲೆನಿಗದಿ ಮಾಡಿ, ಪ್ರತಿ ರೈತನಿಂದ ಕೇವಲ 40 ಕ್ವಿಂಟಲ್ ಭತ್ತಖರೀದಿಸುವುದರಿಂದ ಆಗುವ ಲಾಭವಾದರೂ ಏನು? ಸಾವಿರಾರು ಕ್ವಿಂಟಲ್ ಭತ್ತ ಬೆಳೆದರೂ ಯಾವ ಲಾಭವೂ ದಕ್ಕದಂತಾಗಿದೆ ಎನ್ನುವಅಳಲು ರೈತರದ್ದು.
ಪ್ರಸಕ್ತ ವರ್ಷ ಕೌಳಿ (ಭತ್ತ)ಗೆ ಧಾರಣಿನೆ ಇಲ್ಲ. ಪ್ರತಿ ಎಕರೆಗೆ15ರಿಂದ 20 ಸಾವಿರ ರೂ. ನಷ್ಟ ಆಗಿದೆ. ಭತ್ತ ಕಟಾವು ಮಾಡುವುದಕ್ಕೆ ಪ್ರತಿ ಗಂಟೆಗೆ 2500ರೂ.ಗಳನ್ನು ಮಶೀನ್ ಮಾಲೀಕರಿಗೆ ಕೊಟ್ಟಾಗ ನಮಗೆ ಯಾವುದೇ ಲಾಭವೂಆಗುವುದಿಲ್ಲ. ಅದರಲ್ಲೂ ಈ ಬಾರಿ ಭತ್ತ ಖರೀದಿಗೆ ಯಾರೂಮುಂದೆ ಬರುತ್ತಿಲ್ಲ. ನಾವು ಬೆಳೆಯುವ ಸಂಪೂರ್ಣ ಭತ್ತವನ್ನು ಸರ್ಕಾರ ಖರೀದಿಸಿದರೆ ಮಾತ್ರ ರೈತರು ಬದುಕಲು ಸಾಧ್ಯ.
–ಬಸವರಾಜ ಟಿ. ಕೋಟ್ಯಾಳ, ಮಳ್ಳಿ, ರೈತ
-ಸಂತೋಷ ಬಿ. ನವಲಗುಂದ