ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಬಿ.ಎ. ಮೊಹಿಯುದ್ದೀನ್(80)ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನದಿಂದ ನಗರದಲ್ಲಿರುವ ಪುತ್ರನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಅವರು, ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದರು.
ಮೊಹಿಯುದ್ದೀನ್ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 9.30ರ ಸುಮಾರಿಗೆ ಆಸ್ಪತ್ರೆಯಿಂದ ಸಂಜಯನಗರದಲ್ಲಿರುವ ಅವರ ಮಗನ ಮನೆಗೆ ತರಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನಸಭಾ ಧ್ಯಕ್ಷ ರಮೇಶ್ ಕುಮಾರ್, ಸಚಿವರಾದ ಯು.ಟಿ.ಖಾದರ್, ಜಮೀರ್ ಅಹ್ಮದ್, ಮಾಜಿ ಸಚಿವ ತನ್ವೀರ್ ಸೇಠ್, ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಎಂ.ಎ. ಫರೂಕ್ ಇತರರು ಅಂತಿಮ ದರ್ಶನ ಪಡೆದರು.
ಮೊಹಿಯುದ್ದೀನ್ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಒಂದೇ ವರ್ಷ ವಿಧಾನ ಸಭೆ ಪ್ರವೇಶ ಮಾಡಿದವರು. ಹೀಗಾಗಿ ಇಬ್ಬರ ನಡುವೆಯೂ ಆತ್ಮೀಯವಾದ ಸ್ನೇಹ, ಬಾಂಧವ್ಯ ಬೆಳೆದಿತ್ತು. ನಿಧನ ಸುದ್ದಿ ತಿಳಿಯುತ್ತಿದ್ದಂತೆ ನೇರವಾಗಿ ಸಂಜಯನಗರಕ್ಕೆ ಆಗಮಿಸಿದ ರಮೇಶ್ ಕುಮಾರ್, ಮೃತದೇಹವನ್ನು ನೋಡಿ ಗಳಗಳನೆ ಕಣ್ಣೀರಿಟ್ಟರು. ನಂತರ ಸಚಿವ ಯು.ಟಿ.ಖಾದರ್ ಅವರನ್ನು ಸಮಾಧಾನ ಪಡಿಸಿದರು. ರಾಜಕೀಯ ಪಕ್ಷದ ಮುಖಂಡರು ಸೇರಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. 11.30ರ ಸುಮಾರಿಗೆ ಆ್ಯಂಬುಲೆನ್ಸ್ ಮೂಲಕ ಶಿರಾಡಿ ಘಾಟಿ ಮಾರ್ಗವಾಗಿ ಬಜ್ಪೆಗೆ ಮೃತದೇಹ ರವಾನೆ ಮಾಡಲಾಯಿತು.
1987ರಲ್ಲಿ ಬಂಟ್ವಾಳ ಕ್ಷೇತ್ರದಿಂದ 6ನೇ ವಿಧಾನಸಭೆಗೆ ಚುನಾಯಿತರಾಗಿ ಶಾಸಕರಾಗಿ ಮೊಹಿಯುದ್ದೀನ್ ಸೇವೆ ಸಲ್ಲಿಸಿದ್ದರು. 1990ರಿಂದ 2002ರ ಅವಧಿಯಲ್ಲಿ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 1995ರಿಂದ 1996ರವರೆಗೆ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕರಾಗಿ ಹಾಗೂ 1996ರಲ್ಲಿ ಸಣ್ಣ ಕೈಗಾರಿಕೆ ಮತ್ತು 1999ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು. ಕಾರವಾರ ತಾಲೂಕಿನ ಕೊಲಂಬೆಯ ಗ್ರಾಮದಲ್ಲಿ 1938ರಂದು ಜನಿಸಿದ ಅವರು ಬಿ.ಎಸ್ಸಿ ಪದವೀಧರರು.
ಮಂಗಳೂರಿನ ಬಜ್ಪೆ ಸಮೀಪ ವಾಸವಾಗಿದ್ದ ಮೊಹಿಯುದ್ದೀನ್ ರಾಜಕೀಯದ ಜತೆಗೆ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು. ಅಂತ್ಯಕ್ರಿಯೆ: ಬಿ.ಎ. ಮೊಹಿಯು ದ್ದೀನ್ ಅವರ ಅಂತ್ಯಕ್ರಿಯೆ ಬಜ್ಪೆಯ ಈದ್ಗಾ ಮಸೀದಿಯ ದಫನ ಭೂಮಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ನಡೆಯಿತು.
ದೇವರಾಜ ಅರಸು ಒಡನಾಡಿಯಾಗಿದ್ದ ಮೊಹಿಯುದ್ದೀನ್ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. 2016ರಲ್ಲಿ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ನಿಧನದಿಂದ ನಾಡು ಹಿರಿಯ ಮುತ್ಸದ್ದಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಉಜಿರೆ ಸಮೀಪದ ಶಾಂತಿವನದಲ್ಲಿ ನಾನು ನಿಸರ್ಗ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮೊಹಿಯುದ್ದೀನ್ ಭೇಟಿಯಾಗಿದ್ದರು. ಅವರು ಬರೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದರು. ಬ್ಯಾರಿ ಭವನ ನಿರ್ಮಾಣ ಅವರ ಕನಸಾಗಿತ್ತು. ಅದರ ಉದ್ಘಾಟನೆಗೆ ಬರುತ್ತೇನೆಂದು ಭರವಸೆ ನೀಡಿದ್ದೆ.
● ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ರಾಜ್ಯ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಅವರ ನಿಧನದಿಂದ ವೈಯಕ್ತಿಕವಾಗಿ ಬಹಳ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.
● ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ನನ್ನ ಹಿರಿಯ ಮಿತ್ರ, ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಮೊಹಿಯುದ್ದೀನ್ ಅವರು ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ
ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು.
● ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ