ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಶನಿವಾರ(ಫೆಬ್ರುವರಿ 06) ದೇಶಾದ್ಯಂತ “ಚಕ್ಕಾ ಜಾಮ್” (ರಸ್ತೆ ಬಂದ್) ನಡೆಸುವುದಾಗಿ ಘೋಷಿಸಿವೆ.
ಇದನ್ನೂ ಓದಿ:ಮುಂದುವರಿದ ಮುಂಬೈ ಷೇರುಪೇಟೆ ನಾಗಾಲೋಟ; ಸೆನ್ಸೆಕ್ಸ್ 1.200 ಅಂಕ ಜಿಗಿತ
ಮಧ್ಯಾಹ್ನ 1ಗಂಟೆಯಿಂದ 3ಗಂಟೆವರೆಗೆ ಪ್ರತಿಭಟನೆ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದೆ. ಸೋಮವಾರ(ಫೆ.1) ಸಂಜೆ ಸಂಸತ್ ಚಲೋ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಸಿದ್ಧತೆ ನಡೆಸಿತ್ತು. ಆದರೆ ಸಂಸತ್ ಚಲೋ ಪ್ರತಿಭಟನೆ ರದ್ದುಗೊಳಿಸಿದ ನಂತರ ರಸ್ತೆ ತಡೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಪ್ರತಿಭಟನೆ ನಡೆಸುತ್ತಿರುವ ಪ್ರದೇಶದಲ್ಲಿನ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಿರುವುದರ ವಿರುದ್ಧ ರಸ್ತೆ ಬಂದ್ ನಡೆಸಲು ಉದ್ದೇಶಿಸಿರುವುದಾಗಿ ತಿಳಿಸಿರುವ ರೈತ ಸಂಘಟನೆ, ವಿದ್ಯುತ್ ಮತ್ತು ನೀರು ಸರಬರಾಜನ್ನು ಕೂಡಾ ಅಧಿಕಾರಿಗಳು ಸ್ಥಗಿತಗೊಳಿಸಿರುವುದಾಗಿ ಆರೋಪಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಕುರಿತು ಅಸಮಾಧಾನವ್ಯಕ್ತಪಡಿಸಿರುವ ರೈತರು, ಬಜೆಟ್ ನಲ್ಲಿ ರೈತರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಕಳೆದ ವಾರ ರೈತರು ಟ್ರ್ಯಾಕ್ಟರ್ ರಾಲಿ ನಡೆಸಿದ್ದು, ಅದು ಹಿಂಸಾಚಾರ ಮತ್ತು ಘರ್ಷಣೆಯಲ್ಲಿ ಅಂತ್ಯಗೊಳ್ಳುವ ಮೂಲಕ ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯ ಘನತೆ ಮೌಲ್ಯ ಕಳೆದುಕೊಳ್ಳುವಂತೆ ಮಾಡಿತ್ತು ಎಂದು ವರದಿ ತಿಳಿಸಿದೆ.