ಕುಷ್ಟಗಿ : ಅಕಾಲಿಕ ಮಳೆಗೆ ಸಿಲುಕಿದ ತೊಗರಿ ಉತ್ಪನ್ನ ಇಳುವರಿ ಕಡಿಮೆಯಾಗಿದ್ದು, ಗುಣಮಟ್ಟವೂ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಸಿಗುತ್ತದೆಯೋ ಇಲ್ಲವೋ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಗೆ ತೊಗರಿ ಭರ್ಜರಿ ಇಳುವರಿ ಕಂಡು ರೈತರು, ಪ್ರಸಕ್ತ ವರ್ಷದಲ್ಲಿ ಉತ್ತಮ ಆದಾಯದ ಲೆಕ್ಕಾಚಾರ ಹಾಕಿದ್ದರು. ಕೀಟ ಬಾಧೆಗೆ ನಿಯಂತ್ರಿಸಲು ಸಕಾಲಿಕವಾಗಿ ಹೆಚ್ಚುವರಿ ಖರ್ಚು ವ್ಯಯಿಸಿ ಮೂರು ಬಾರಿ ಔಷಧಿ ಸಿಂಪಡಿಸಿ ಉತ್ತಮ ಇಳುವರಿ ಉಳಿಸಿಕೊಂಡಿದ್ದರು. ಆದರೆ ಅಕ್ಟೋಬರ್, ನವೆಂಬರ್ ತಿಂಗಳ ಅಕಾಲಿಕ ಮಳೆ ರೈತರ ಆಸೆ ನುಚ್ಚು ನೂರಾಗಿದೆ. ಗಿಡದಲ್ಲಿ ಮೊಳಕೆಯೊಡೆದು ಭಾಗಶಃ ಹಾನಿಯಾದರೆ, ಉಳಿದ ಫಸಲು ಕಾಳು ಬಲಿಯದೇ ಇಳುವರಿ ಕಡಿಮೆಯಾಗಿದೆ.
ಈ ಫಸಲಿನ ಕಟಾವು ಸಹ ದುಬಾರಿಯಾಗಿದ್ದು ಪ್ರಸಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 5ಸಾವಿರ ರೂ.ದಿಂದ 5,500 ರೂ. ಇದೆ. ಪ್ರತಿ ಕ್ವಿಂಟಲ್ ಗೆ 6,300 ರೂ. ಬೆಂಬಲ ಬೆಲೆಗೆ ಮಾರಾಟಕ್ಕೆ ಮುಂದಾದರೆ ಬಲಿಯದ ಕಾಳು (ಕಂಡ್ರಿ), ಹುಳು ಪೀಡಿತವಾಗಿ ತೂತಾಗಿರುವ ಕಾಳನ್ನು ನಿರಾಕರಿಸುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ.
ತೊಗರಿ ಕಾಳು ಗಿಡದಲ್ಲಿ ಈ ರೀತಿಯಾಗಿದ್ದು, ಕೇಂದ್ರ ಸರಕಾರ ಯೋಗ್ಯ ಬೆಲೆಯಲ್ಲಿ ಖರೀದಿಸಬೇಕು ಇಲ್ಲವಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಪ್ರತಿ ಕ್ವಿಂಟಲ್ ಗೆ 1 ಸಾವಿರ ರೂ. ದಿಂದ 800 ರೂ. ವರೆಗೆ ನಷ್ಟ ಅನುಭವಿಸಬೇಕಾಗುತ್ತಿದೆ ಎಂದು ಕಂದಕೂರು ಗ್ರಾಮದ ರೈತ ಶರಣಪ್ಪ ತಾವರಗೇರಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?