ಬೆಳಗಾವಿ/ಚಿಕ್ಕೋಡಿ: ಕೆಲವು ದಿನಗಳ ಹಿಂದೆಯೇ ತನ್ನ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ರೈತನೋರ್ವ ಅನುಮಾನಾಸ್ಪದವಾಗಿ ಸಿಲುಕಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಸುಲ್ತಾನಪುರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡಮನಿ (28) ಕೊಳವೆ ಬಾವಿಯಲ್ಲಿ ಸಿಲುಕಿದ ರೈತ. ಇದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದಾನೋ ಎಂಬುದು ಇನ್ನೂ ಗೊತ್ತಿಲ್ಲ. ಈತ ಸುಮಾರು 20 ಅಡಿ ಆಳದಲ್ಲಿ ಕೊಳವೆ ಬಾವಿಯಲ್ಲಿ ಸಿಲುಕಿದ್ದು, ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೋಮವಾರ ಬೆಳಗ್ಗೆ ಕೊಳವೆ ಬಾವಿಯಲ್ಲಿ ರೈತ ಸಿಲುಕಿಕೊಂಡಿದ್ದಾನೆ. ಮಧ್ಯಾಹ್ನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ರಾಯಬಾಗ ತಹಸೀಲ್ದಾರ, ತಾಪಂ ಇಒ, ಪೊಲಿಸ್ ಹಾಗೂ ಅಗ್ನಿಶಾಮ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಕೊಳವೆ ಬಾವಿ ಮೇಲ್ಭಾಗದಲ್ಲಿ ಅಗಲವಾಗಿದ್ದು, ಸುಮಾರು ಅಡಿ ಬಳಿಕ ಚಿಕ್ಕದಾಗಿರುವುದರಿಂದ ಮೇಲ್ಭಾಗದಿಂದ ರೈತನ ಕೈಗಳು ಕಾಣುತ್ತಿದ್ವವು. ಕೊಳವೆ ಬಾವಿಯ ಪಕ್ಕದಲ್ಲಿಯೇ ಆತನ ಅಂಗಿ, ಪ್ಯಾಂಟ್ ಬಿದ್ದಿದೆ. ರೈತ ಜೀವಂತ ಇದ್ದಾನೋ ಅಥವಾ ಮೃತಪಟ್ಟಿದ್ದಾನೋ ಎಂಬುದು ಗೊತ್ತಾಗಿಲ್ಲ. ಆದರೆ ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೇಸಿಗೆಯಿಂದ ಬಸವಳಿದಿದ್ದ ರೈತ ಹೇಗಾದರೂ ಮಾಡಿ ಈ ಸಲ ಕೊಳವೆ ಬಾವಿಗೆ ನೀರು ಬಂದರೆ ಹುಲುಸಾಗಿ ಬೆಳೆ ತೆಗೆಯಬಹುದೆಂಬ ಕನಸು ಕಂಡಿದ್ದನು ಎಂಬ ಪಕ್ಕದ ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಸತ್ಯಾಂಶ ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.
ಸದ್ಯ ಎರಡು ಜೆಸಿಬಿ ಮೂಲಕ ಆತನನ್ನು ಮೇಲೆತ್ತಲು ಕಾರ್ಯಾಚರಣೆ ಪ್ರಾರಂಭಗೊಂಡಿದೆ.
ಘಟನಾ ಸ್ಥಳಕ್ಕೆ ರಾಯಬಾಗ ತಹಶಿಲ್ದಾರರ ಚಂದ್ರಕಾಂತ ಭಜಂತ್ರಿ.ಟಿಪಿ ಇಒ ಪ್ರಕಾಶ ವಡ್ಡರ. ಟಿಎಚ್ ಒ ಎಸ್.ಎಸ್.ಭಾನೆ. ಡಿವೈಎಸ್ ಪಿ ಎಸ್.ವಿ. ಗಿರೀಶ ಭೇಟಿ ನೀಡಿದ್ದಾರೆ.