Advertisement

ಕೂರಿಗೆ ಬಿತ್ತನೆಯತ್ತ ಮುಖ ಮಾಡಿದ ರೈತ!

02:45 PM Jul 21, 2017 | |

ಬಳ್ಳಾರಿ: ಭತ್ತದ ಸಸಿಯನ್ನು ನಾಟಿ ಮಾಡುವ ಸಾಂಪ್ರದಾಯಿಕ ಕ್ರಮವನ್ನು ಅಳವಡಿಸಿಕೊಂಡಿದ್ದ ಜಿಲ್ಲೆಯ ನೀರಾವರಿ ಪ್ರದೇಶಗಳ ರೈತರು ಪ್ರಸ್ತುತ ಮುಂಗಾರು ಹಂಗಾಮಿನಿಂದ ಭತ್ತದ ನೇರ ಬಿತ್ತನೆಯತ್ತ ಪರಿವರ್ತನೆಗೊಳ್ಳುತ್ತಿರುವ ಸಕಾರಾತ್ಮಕ ಬೆಳವಣಿಗೆ ಜಿಲ್ಲೆಯಲ್ಲಿ ಆರಂಭವಾಗಿದೆ.

Advertisement

ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎರಡು ಅವಧಿಯಲ್ಲಿ ಭತ್ತದ ಬೆಳೆ ಬೆಳೆಯಲಾಗದ ನೀರಾವರಿ ಪ್ರದೇಶಗಳ ರೈತರು ಕಡಿಮೆ ನೀರು ಬೇಡುವ, ಭತ್ತದ ಕೃಷಿಯ ಒಳ ಸುರಿ ವೆಚ್ಚದಲ್ಲಿ ಶೇ.25ರಷ್ಟು ಕಡಿಮೆ ಆಗುವ, ಸಾಂಪ್ರದಾಯಿಕ ನಾಟಿ ಬಿತ್ತನೆಯ ಸರಿಸಮವಾಗಿ ಇಳುವರಿ ನೀಡುವ ನೇರ ಬಿತ್ತನೆ ಪದ್ಧತಿಗೆ ನಿಧಾನವಾದರೂ ರೈತರು ಇತ್ತ ಕಡೆ ವಾಲುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಭತ್ತದ ನೇರ ಬಿತ್ತನೆ: ಸಾಂಪ್ರದಾಯಿಕ ನಾಟಿ ಪದ್ಧತಿಗೆ ಹೊರತಾದ ಭತ್ತದ ನೇರ ಬಿತ್ತನೆ ಪದ್ಧತಿ 2013ರಲ್ಲಿ ಆರಂಭವಾಗಿದ್ದರೂ
ಆ ವರ್ಷ ಜಿಲ್ಲೆಯ ಕೆಲವೇ ರೈತರು ಈ ಪದ್ಧತಿ ಅಳವಡಿಸಿಕೊಂಡಿದ್ದರು. ನಂತರದ ವರ್ಷಗಳಲ್ಲಿ ಈ ಪದ್ಧತಿ ಕ್ರಮೇಣ ರೈತರ ಗಮನ ಸೆಳೆಯುವಲ್ಲಿ ಸಫಲವಾದರೂ 2016ನೇ ಸಾಲಿನಲ್ಲಿ ಕೇವಲ 1,100 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನೇರ ಬಿತ್ತನೆಯಾಗಿತ್ತು. ರೈತರ ಈ ಬಗೆಯ ಪರಿವರ್ತನೆ ಜಿಲ್ಲೆಯ ತುಂಗಭದ್ರಾ ನಾಲೆಗಳು ಹರಿಯುವ ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ ತಾಲೂಕುಗಳ
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹಾಗೂ ಏತ ನೀರಾವರಿ ಯೋಜನಾ ಪ್ರದೇಶಗಳಲ್ಲಿ ಆಗುತ್ತಿರುವುದು ಮಹತ್ವದ್ದಾಗಿದೆ.
ಈಗಾಗಲೇ ನೇರ ಬಿತ್ತನೆ ಪದ್ಧತಿ ಅಳವಡಿಸಿಕೊಂಡು ಅದರ ಲಾಭ ಪಡೆದಿರುವ ರೈತರು ಈ ಪದ್ಧತಿಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮುಂದುವರೆದಿದ್ದರೆ, ಮತ್ತೆ ಕೆಲವು ರೈತರು ಈ ಪದ್ಧತಿಯ ಯಶಸ್ವಿ ರೈತರ ಸಲಹೆ ಹಾಗೂ ಪ್ರೇರಣೆಯೊಂದಿಗೆ ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳುವ ಉತ್ಸಾಹ ತೋರಿದ್ದಾರೆ. 

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹೆಚ್ಚು ಜನ ರೈತರು ಭತ್ತದ ನೇರ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ನೇರ ಬಿತ್ತನೆ ಪದ್ಧತಿ ಉತ್ತೇಜಿಸಲು ಇಲಾಖೆ ಹೆಕ್ಟೇರ್‌ ಗೆ 4 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಈ ಪ್ರೋತ್ಸಾಹ ಧನ
2 ಹೆಕ್ಟೇರ್‌ಗೆ ಸೀಮಿತವಾಗಿದೆ. ನೇರ ಬಿತ್ತನೆ ಅಳವಡಿಸಿಕೊಳ್ಳಲು ಬಯಸುವ ರೈತರಿಗೆ ಕೃಷಿ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ.
ಶರಣಗೌಡ ಪಾಟೀಲ್‌, ಉಪ ನಿರ್ದೇಶಕರು, ಕೃಷಿ ಇಲಾಖೆ.

ನಮ್ಮ ಜಮೀನುಗಳಲ್ಲಿ 2016ರವರೆಗೆ ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿ ಅನುಸರಿಸಿಕೊಂಡು ಬಂದಿದ್ದೆವು. 2015ರಲ್ಲಿ ಉಂಟಾದ ಮಳೆಯ ಅಭಾವದಿಂದ ನೀರಿನ ಕೊರತೆ ಅನುಭವಿಸಿದೆವು. ಆದ್ದರಿಂದ 2016ರಲ್ಲಿ ನಮ್ಮ 8 ಹೆಕ್ಟೇರ್‌ ಜಮೀನಿನಲ್ಲಿ ಭತ್ತದ ನೇರ ಬಿತ್ತನೆ ಪದ್ಧತಿ ಅಳವಡಿಸಿಕೊಂಡೆವು. ಆ ವರ್ಷವೂ ಮಳೆ ಕೊರತೆ ಉಂಟಾದ ಕಾರಣ ನಾವು ಅಳವಡಿಸಿಕೊಂಡ ನೇರ ಬಿತ್ತನೆ
ಪದ್ಧತಿ ವರವಾಯಿತು. ಇದರಿಂದ ಈ ವರ್ಷ ನಾನು 16 ಹೆಕ್ಟೇರ್‌ ಜಮೀನಿನಲ್ಲಿ ನೇರ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದೇನೆ.
ಎಸ್‌.ರಾಮಕೃಷ್ಣ, ರೈತ, ಹಚ್ಚೊಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next