Advertisement

ನವಜೋತ್‌ ಐತಿಹಾಸಿಕ ಚಿನ್ನದ ಹಿಂದಿದೆ‌ ತ್ಯಾಗದ ಕಥೆ

06:30 AM Mar 05, 2018 | Team Udayavani |

ಚಂಡೀಗಢ: ಪ್ರತಿಯೊಂದು ಸಾಧನೆಯ ಹಿಂದೆ ನೋವಿನ ಅಧ್ಯಾಯವಿರುತ್ತದೆ. ಅಸಾಮಾನ್ಯ ಸಾಧನೆಗಳ ಹಿಂದೆ ಅಷ್ಟೇ ವೇದನೆಯಿರುತ್ತದೆ. ಅಂತಹದೊಂದು ಕಥೆ ಮೊನ್ನೆಯಷ್ಟೇ ಏಷ್ಯಾ ಕುಸ್ತಿ ಕೂಟದಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತದ ನವಜೋತ್‌ ಕೌರ್‌ ಹಿಂದಿದೆ. ಈ ಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಸ್ಪರ್ಧಿ ನವಜೋತ್‌. ಆದರೆ ಮಗಳ ಈ ಸಾಧನೆಗಾಗಿ ಇಡೀ ಕುಟುಂಬವೇ ತ್ಯಾಗ ಮಾಡಿದೆ ಎನ್ನುವುದು ಇಲ್ಲಿನ ವಿಶೇಷ.

Advertisement

ಮಗಳಿಗಾಗಿ ಬಡರೈತ ಸುಖಚೈನ್‌ ಸಿಂಗ್‌ 13 ಲಕ್ಷ ರೂ. ಸಾಲ ಮಾಡಿಕೊಂಡಿದ್ದರೆ, ಅಕ್ಕನಿಗಾಗಿ 23ರ ಹರೆಯದ ಯುವರಾಜ್‌ ತನ್ನ ಕ್ರಿಕೆಟ್‌ ಆಸಕ್ತಿಗಳನ್ನೇ ತ್ಯಾಗ ಮಾಡಿದ. ತಂಗಿಗಾಗಿ ಸ್ವತಃ ಕುಸ್ತಿಪಟುವಾಗಿದ್ದ ನವಜೀತ್‌ ಕೌರ್‌ ತಮ್ಮ ವೃತ್ತಿಜೀವನವನ್ನು ತ್ಯಜಿಸಿದರು. ಅದರಲ್ಲೂ ಅಪ್ಪ ಸುಖಚೈನ್‌ ಅಂತೂ ಮಗಳ ಯಶಸ್ಸಿಗಾಗಿ ಏನೆಲ್ಲ ಸಾಧ್ಯವೋ ಅಷ್ಟೆಲ್ಲ ಹೊರೆಯನ್ನು ಹೊತ್ತಿದ್ದಾರೆ. ಬಗೇರಿಯಾ ಎಂಬ ಹಳ್ಳಿಯ ಮಟ್ಟಿಗೆ ಈ ಕತೆಗೆ ಒಂದು “ಐತಿಹಾಸಿಕ’ ಮಹತ್ವ ಬಂದಿದೆ.

ಬ್ಯಾಂಕ್‌ನಲ್ಲಿ ಮಗಳ ಖರ್ಚು ವೆಚ್ಚಕ್ಕಾಗಿ ಸುಖಚೈನ್‌ ಸಾಲದ ಮೇಲೆ ಸಾಲ ಮಾಡಿಕೊಂಡಿದ್ದಾರೆ. ಆದರೂ ಸರಕಾರ ಇತ್ತ ತಿರುಗಿ ನೋಡಿಲ್ಲ. ಹಾಗಂತ ನವಜೋತ್‌ ತಿರುಗಿ ನೋಡಬಾರದ ಆ್ಯತ್ಲೀಟ್‌ ಆಗಿರಲಿಲ್ಲ. 2014ರ ಕಾಮನ್‌ವೆಲ್ತ್‌ನಲ್ಲಿ ಕಂಚಿನ ಪದಕ ಗೆದ್ದಾಕೆ. ಇಷ್ಟಾದರೂ ಮಗಳ ಸಂಪೂರ್ಣ ಅಗತ್ಯವನ್ನು ಅಪ್ಪನೇ ನೋಡಿಕೊಳ್ಳಬೇಕಾಗಿ ಬಂದಿದೆ. ಈಗ ನವಜೋತ್‌ ಚಿನ್ನ ಗೆದ್ದಿರುವುದು ಇಡೀ ಕುಟುಂಬದ ಭಾಗ್ಯದ ಬಾಗಿಲು ತೆರೆದಂತಾಗಿದೆ.

2 ವರ್ಷದ ಹಿಂದೆ ನವಜೋತ್‌ ಸೊಂಟಕ್ಕೆ ಗಾಯ ಮಾಡಿಕೊಂಡಿದ್ದರು. ಅಲ್ಲಿಂದ ಸತತ 2 ವರ್ಷ ಅವರು ಕಬಡ್ಡಿಯನ್ನೇ ತ್ಯಜಿಸಬೇಕಾಯಿತು. ಈ ಹಂತದಲ್ಲಿ ಯಾರೂ ತಮ್ಮ ನೆರವಿಗೆ ಬರಲಿಲ್ಲ. ಆಗ ಪೂರ್ತಿ ಖರ್ಚನ್ನು ನಿಭಾಯಿಸುವುದಕ್ಕಾಗಿ ಅಪ್ಪ ಸಾಲ ಮಾಡಬೇಕಾಯಿತು ಎಂದು ಸಹೋದರಿ ನವಜೀತ್‌ ಹೇಳಿಕೊಂಡಿದ್ದಾರೆ.

ತಿಂಗಳಿಗೆ ಬೇಕು ಒಂದು 1 ಲಕ್ಷ ರೂ.
ಒಬ್ಬ ವೃತ್ತಿಪರ ಅಭ್ಯಾಸ ಮಾಡುವುದಕ್ಕೆ ಪ್ರತಿ ತಿಂಗಳು ಒಂದು ಲಕ್ಷ ರೂ. ಹಣ ಅಗತ್ಯವಿದೆ. ತರಬೇತಿ, ಅದಕ್ಕೆ ಬೇಕಾದ ಸಲಕರಣೆ, ಆಹಾರ, ಓಡಾಟ, ವಾಸ್ತವ್ಯ ಇದೆಲ್ಲ ಸೇರಿ ಅಷ್ಟು ಖರ್ಚಾಗುತ್ತದೆ. ಇದನ್ನೆಲ್ಲ ಅನಿವಾರ್ಯವಾಗಿ ನವಜೋತ್‌ 50,000 ರೂ.ಗಳೊಳಗೆ ಮುಗಿಸುತ್ತಿದ್ದಾರೆ ಎಂದು ನವಜೀತ್‌ ವಿವರಿಸಿದ್ದಾರೆ.

Advertisement

ಸದ್ಯಕ್ಕೆ ನವಜೋತ್‌ ರೈಲ್ವೆಯಲ್ಲಿ ಗುಮಾಸ್ತೆಯಾಗಿದ್ದಾರೆ. ಭಾರತೀಯ ಮಹಿಳಾ ಟಿ20 ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ರಂತೆಯೇ ಈಕೆಗೂ ಒಳ್ಳೆಯ ಹುದ್ದೆ ನೀಡಿ, ತಾರತಮ್ಯ ನಿಲ್ಲಿಸಿ ಎನ್ನುವುದು ನವಜೀತ್‌ ಆಗ್ರಹ.

ನವಜೋತ್‌ ಸಾಧನೆಗೇಕೆ ಮಹತ್ವ?
ಕುಸ್ತಿಯಲ್ಲಿ ಭಾರತೀಯ ಮಹಿಳೆಯರು ಇನ್ನೂ ವಿಶ್ವಮಟ್ಟದಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತದೆ. ಕಾಮನ್ವೆಲ್ತ್‌ನಲ್ಲಿ 2010ರಲ್ಲಿ ಗೀತಾ ಪೋಗಟ್‌ ಚಿನ್ನ ಗೆದ್ದಿದ್ದರು. 2016ರ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್‌ ಕಂಚು ಗೆದ್ದಿದ್ದರು. ಇದುವರೆಗೆ ಏಶ್ಯನ್‌ಕುಸ್ತಿಯಲ್ಲಿ ಒಮ್ಮೆಯೂ ಭಾರತ ಚಿನ್ನ ಗೆದ್ದಿರಲಿಲ್ಲ. ಒಟ್ಟು 13 ಬಾರಿ ಭಾರತೀಯರು ಅಂತಿಮ ಸುತ್ತಿಗೇರಿದ್ದರೂ ಚಿನ್ನ ಸಾಧ್ಯವಾಗಿರಲಿಲ್ಲ. 2013ರಲ್ಲಿ ಸ್ವತಃ ನವಜೋತ್‌ ಫೈನಲ್‌ನಲ್ಲಿ ಸೋತಿದ್ದರು. ಸುದೀರ್ಘ‌ ಪ್ರಯತ್ನದ ಅನಂತರ ಪದಕ ಒಲಿದಿರುವುದರಿಂದ ನವಜೋತ್‌ ಸಾಧನೆಗೆ ಹೆಚ್ಚಿನ ಮೌಲ್ಯ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next