ಶಾರ್ಜಾ: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಭಾರತದ ಹಾದಿ ದುರ್ಗಮವಾಗಿದೆ. ಭಾನುವಾರ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತ 9 ರನ್‌ಗಳ ಸೋಲನುಭವಿಸಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರ 54 ರನ್ ಗಳ ಹೋರಾಟದ ಹೊರತಾಗಿಯೂ ಭಾರತ ಆಘಾತಕ್ಕೀಡಾಗಿದೆ.
ಇದರೊಂದಿಗೆ ಭಾರತದ ಸೆಮಿ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ. ಕೂಟದ ಮೊದಲ ಪಂದ್ಯದಲ್ಲಿಯೇ ನ್ಯೂಜಿಲ್ಯಾಂಡ್ ವಿರುದ್ದ ಹೀನಾಯ ಸೋಲು ಕಂಡಿದ್ದ ಭಾರತಕ್ಕೆ ರವಿವಾರ ಆಸೀಸ್ ವಿರುದ್ದ ಗೆಲುವು ಅಗತ್ಯವಿತ್ತು. ಆದರೆ ನಾಯಕಿಯ ಕೊನೆಯವರೆಗಿನ ಹೋರಾಟದ ಹೊರತಾಗಿಯೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ.
ಗುಂಪು ಹಂತದ ಎಲ್ಲಾ ಪಂದ್ಯಗಳಲ್ಲಿ ಗೆದ್ದ ಆಸೀಸ್ ಸೆಮಿ ಫೈನಲ್ ಗೆ ಪ್ರವೇಶ ಪಡೆದಿದೆ. ಆದರೆ ಭಾರತ ಸೆಮಿ ತಲುಪುವ ಆಸೆ ಇನ್ನೂ ಸಂಪೂರ್ಣ ಕ್ಷೀಣಿಸಿಲ್ಲ. ಅದು ಸೋಮವಾರ (ಅ.14) ನಡೆಯಲಿರುವ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಗ್ರೂಪ್ “ಎ’ಯಿಂದ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇನ್ನುಳಿದ 1 ಸ್ಥಾನ ಸೋಮವಾರದ ಪಾಕ್-ನ್ಯೂಜಿಲ್ಯಾಂಡ್ ಫಲಿತಾಂಶವನ್ನು ಅವಲಂಭಿಸಿದೆ. ಇಲ್ಲಿ ನ್ಯೂಜಿಲ್ಯಾಂಡ್ ಗೆದ್ದರೆ ಅದು ಸೆಮೀಸ್ ಗೇರುವುದು ಪಕ್ಕಾ. ಆದರೆ ಪಾಕಿಸ್ತಾನವು ಮೊದಲು ಬ್ಯಾಟ್ ಮಾಡಿದರೆ ನ್ಯೂಜಿಲ್ಯಾಂಡ್ ತಂಡವನ್ನು 53 ರನ್ ಗಳಿಗಿಂತ ಕಡಿಮೆ ಅಂತರದಿಂದ ಸೋಲಿಸಬೇಕು. ಒಂದು ವೇಳೆ ಪಾಕ್ ಚೇಸ್ ಮಾಡಿದರೆ ಆಗ 9.1 ಓವರ್ ಗಳ ಮೊದಲು ಜಯ ಗಳಿಸಬಾರದು.
ಒಂದು ವೇಳೆ ಪಾಕಿಸ್ತಾನ 53 ರನ್ ಗಳಿಗಿಂತ ಹೆಚ್ಚು ಅಂತರದಲ್ಲಿ ಗೆದ್ದರೆ ಅಥವಾ 9.1 ಓವರ್‌ಗಳಿಗಿಂತ ಮೊದಲು ಗುರಿಯನ್ನು ಬೆನ್ನಟ್ಟಿದರೆ, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಬದಲು ಪಾಕಿಸ್ತಾನ ಸೆಮಿ ಫೈನಲ್ ಗೆ ಅರ್ಹತೆ ಪಡೆಯುತ್ತದೆ.