ಬೆಂಗಳೂರು: “ನನ್ನ ಬೆಳೆ ನನ್ನ ಹಕ್ಕು”ಬೆಳೆ ಸಮೀಕ್ಷೆ ಆ್ಯಪ್ ಸಮೀಕ್ಷೆ ಸೆ.23 ಕ್ಕೆ ಅಂತ್ಯಗೊಂಡಿದ್ದು, ಯಶಸ್ವಿಯಾಗಿದೆ. ಪ್ರಾಯೋಗಿಕ ಹಂತದಲ್ಲಿಯೇ ಶೇ.88 ಕ್ಕೂ ಹೆಚ್ಚಿನ ಪ್ರಗತಿ ಸಾಧಿಸಿದೆ. ರೈತರೇ ಮೊಬೈಲ್ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಈ ಯೋಜನೆ ಕಡಿಮೆ ಅವಧಿಯಲ್ಲಿಯೇ ಇಡೀ ದೇಶದ ಗಮನ ಸೆಳೆದಿದೆ. ರೈತರೇ ಬೆಳೆ ಸಮೀಕ್ಷೆ ನಡೆಸುವ ಪ್ರಾಯೋಗಿಕ ಹಂತವನ್ನು ಈ ಬಾರಿ ಪರಿಚಯಿಸಲಾಗಿದ್ದು, ಇದು ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣಪತ್ರ ನೀಡುವ ರೈತಬೆಳೆ ಸಮೀಕ್ಷೆ ಇದಾಗಿದ್ದು, ಕೇವಲ 1 ತಿಂಗಳು 15 ದಿನಗಳೊಳಗೆ ಕಳೆದ 2 ವರ್ಷ ಇತಿಹಾಸವನ್ನೇ ಈ ಸಮೀಕ್ಷೆ ಬದಲಿಸಿದೆ. ಕಳೆದ ಆಗಸ್ಟ್ 15 ರಂದು ಇದಕ್ಕೆ ಚಾಲನೆ ನೀಡಲಾಗಿತ್ತಾದರೂ ಆಗಸ್ಟ್ ಅಂತ್ಯದಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗಿತ್ತು. ಮಳೆ, ನೆಟ್ ವರ್ಕ್ ಸಮಸ್ಯೆ ಆರಂಭಿಕ ಹಂತದಲ್ಲಿ ಕಂಡುಬಂದಿತ್ತಾದರೂ ಇವೆಲ್ಲವನ್ನು ಸರಿಪಡಿಸಿಕೊಂಡು ಹಾಗೂ ರಾಜ್ಯದ್ಯಾಂತ ಬೆಳೆ ಸಮೀಕ್ಷೆಯನ್ನು ಉತ್ಸವದಂತೆ ಪರಿಗಣಿಸಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು
2017 ರಿಂದ ರಾಜ್ಯದಲ್ಲಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ಬರೀ 3 ಸಾವಿರ ಪ್ಲಾಟ್ ಗಳು ಸಮೀಕ್ಷೆಯಾಗಿದ್ದವು. ಮುಂಗಾರು ಹಂಗಾಮಿಗೆ ಸರ್ಕಾರಿ ಅಧಿಕಾರಿಗಳನ್ನು ಉಪಯೋಗಿಸಿ ಸಮೀಕ್ಷೆ ಮಾಡಲಾಗುತ್ತಿತ್ತು. 2018 ರಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. 2019 ರಲ್ಲಿ ಪೂರ್ವ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ ಗಳ ಸರ್ವೆ ಮಾಡಲಾಗಿತ್ತು. ಇದಕ್ಕಾಗಿ 4 ತಿಂಗಳ ಸಮಯಾವಾಕಾಶ ನೀಡಲಾಗಿತ್ತು. ಆದರೆ ಈ ಬಾರಿ ರೈತರೇ ಸ್ವತಃ ತಾವೇ ಬೆಳೆ ಸಮೀಕ್ಷೆ ನಡೆಸುವ ಯೋಜನೆ ಇದಾಗಿದ್ದು, 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳನ್ನು ರೈತರೇ ಅಪ್ಲೋಡ್ ಮಾಡಿದ್ದಾರೆ. 2 ಕೋಟಿ 1 0 ಲಕ್ಷ ಗುರಿಯಿದ್ದು, ಕಡಿಮೆ ಅವಧಿಯಲ್ಲಿಯೇ 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳು ಅಂದರೆ ನಿಗದಿತ ಕಡಿಮೆ ಅವಧಿಯಲ್ಲಿ ಶೇ.88 ಕ್ಕೂ ಪ್ಲಾಟ್ ಸಮೀಕ್ಷೆಯಲ್ಲಿ ಅಪ್ಲೋಡ್ ಆಗಿ ಸಾಧನೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಈ ಬಾರಿಯ ದತ್ತಾಂಶವನ್ನು ಬೆಳೆ ವಿಮೆ ಯೋಜನೆ ಇತ್ಯರ್ಥಪಡಿಸಲು, ಪ್ರಾಕೃತಿಕ ವಿಕೋಪ ಹಾನಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ಪಡೆಯಲು, ರಾಜ್ಯ ಹಾಗೂ ಕೇಂದ್ರ ಬೆಳೆ ಆಧಾರಿತ ಪ್ರೋತ್ಸಾಹ ಧನ ನೀಡಲು, ರಾಜ್ಯದ ಬೆಳೆ ವಿಸ್ತೀರ್ಣ ಮರುಹೊಂದಾಣಿಕೆ ಹಾಗೂ ಬೆಳೆ ಉತ್ಪಾದನೆ ಲೆಕ್ಕಹಾಕಲು ಬಳಸಿಕೊಳ್ಳಲಾಗುವುದು ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.