ವಿಜಯಪುರ: ಬೇಸಿಗೆ ಮಳೆಯ ಬಿರುಗಾಳಿ, ಸಿಡಿಲಿಗೆ ಜಿಲ್ಲೆಯಲ್ಲಿ ಓರ್ವ ರೈತ ಹಾಗೂ ಒಂದು ಜಾನುವಾರು ಬಲಿಯಾಗಿದ್ದು, ಮತ್ತೋರ್ವ ರೈತ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಬಿರುಗಾಳಿ, ಗುಡು, ಸಿಡಿಲಿನ ಅಬ್ಬರ ಜೋರಾಗಿದೆ. ಪರಿಣಾಮ ಗೋದಿ ರಾಶಿಯನ್ನು ಮಳೆಯಿಂದ ರಕ್ಷಿಸಲು ತಾಡಪತ್ರಿ ಹೊದಿಸುವಾಗ ಬಬಲೇಶ್ವರ ತಾಲೂಕಿನ ಸಂಗಾಪೂರ ಎಸ್.ಎಚ್. ಗ್ರಾಮದ ಯುವ ರೈತ ಬಸವರಾಜ ಹಣಮಂತ ಹಮಾರಿ ಹಾಗೂ ಸಂಗಪ್ಪ ಹಣಮಂತ ಹಮಾರಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಸವರಾಜ (27) ಮೃತಪಟ್ಟಿದ್ದಾನೆ.
ಇದೇ ಗ್ರಾಮದ ಬೌರಮ್ಮ ಹಿರೇಮಠ ಇವರಿಗೆ ಸೇರಿದ ಹೋರಿ ಸಿಡಿಲು ಬಡಿದು ಮೃತಪಟ್ಟಿದೆ.
ಇದಲ್ಲದೇ ಬಬಲೇಶ್ವರ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಕಟಾವು ಹಂತದಲ್ಲಿದ್ದ ದ್ರಾಕ್ಷಿ ಬೆಳೆ ಹಾನಿಗೀಡಾಗಿದೆ. ಕಂದಾಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಹಾನಿಯ ಸಮೀಕ್ಷೆ ನಡೆಸಿದ್ದು, ಹಾನಿಯ ಅಂದಾಜು ಇನ್ನೂ ಲಭ್ಯವಾಗಿಲ್ಲ.