ಹಟ್ಟಿಚಿನ್ನದಗಣಿ: ನಂದವಾಡಗಿ, ನಾರಾಯಣಪುರ, ರಾಂಪುರ 9ಎ ನಾಲೆಗಳ ನಿರ್ಮಾಣ, ದುರಸ್ತಿ ಹೆಸರಿನಲ್ಲಿ ಮಾಜಿ ಶಾಸಕ ಮಾನಪ್ಪ ಡಿ.ವಜ್ಜಲ್ ಹಾಗೂ ಬಿಜೆಪಿ ಸರ್ಕಾರ 4,500 ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ಲಿಂಗಸುಗೂರಿನ ಸಮಗ್ರ ನೀರಾವರಿ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ 8ನೇ ದಿನದ ರೈತ ಜಾಗೃತಿ ಜಾಥಾವು ಸಮೀಪದ ಗೆಜ್ಜಲಗಟ್ಟಾ ಗ್ರಾಪಂ ಹಾಗೂ ಆನ್ವರಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿತು.
ಕಳೆದ 8 ದಿನಗಳಿಂದ ನಡೆಯುತ್ತಿರುವ ಜಾಗೃತಿ ಜಾಥಾ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಪ್ರಚಾರದ ಅಂಗವಾಗಿ ಏರ್ಪಡಿಸಲಾದ ಬಹಿರಂಗ ಸಭೆಗಳಲ್ಲಿ ಆಯಾ ಗ್ರಾಮದ ರೈತರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಜಾಥಾವನ್ನು ಗೌರವ ಪೂರ್ವಕವಾಗಿ ಸ್ವಾಗತಿಸಿದರು.
ಆನ್ವರಿ ಗ್ರಾಪಂ ಹಾಗೂ ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ನಂದವಾಡಗಿ ಯೋಜನೆಯಿಂದ ಕೈಬಿಟ್ಟಿದ್ದು, ಕೂಡಲೇ ಯೋಜನೆಗೆ ಸೇರ್ಪಡೆಗೊಳಿಸಲು ಪತ್ರ ಬರೆದಿರುವ ವಿಚಾರವನ್ನು ರೈತ ಮುಖಂಡರು ಜಾಗೃತ ಸಭೆಯಲ್ಲಿ ನೆರೆದ ರೈತರ ಮುಂದಿಟ್ಟರು. ಆನ್ವರಿ ಹಾಗೂ ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ನೀರಾವರಿಯಿಂದ ವಂಚಿಸಿ, ಮೋಸ ಮಾಡಿದ ರಾಜ್ಯ ಬಿಜೆಪಿ ಸರಕಾರ, ಮಾನಪ್ಪ ವಜ್ಜಲ್ ಮತ್ತು ಶಾಸಕ ಡಿ.ಎಸ್. ಹೂಲಿಗೇರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ರೈತರು ಆಕ್ರೋಶಭರಿತರಾಗಿ ನುಡಿದರು.
ನವೆಂಬರ್ 8ರಂದು ಲಿಂಗಸುಗೂರಿನಲ್ಲಿ ನಡೆಯುವ ರೈತರ ಸಮಾವೇಶಕ್ಕೆ ಸುತ್ತಲಿನ ಗ್ರಾಮಗಳ ರೈತರೆಲ್ಲ ಒಗ್ಗಟ್ಟಿನಿಂದ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸುವುದಾಗಿ ರೈತ ಮುಖಂಡರಿಗೆ ತಿಳಿಸಿದರು.
ರೈತ ಮುಖಂಡ ಹಾಗೂ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಚಿನ್ನಪ್ಪ ಕೊಟ್ರಿಕಿ, ತಿಪ್ಪರಾಜ, ಶಾಂತಕುಮಾರ ಚಿಕ್ಕನಗನೂರು, ಆದೇಶ ನಗನೂರು, ತಿಪ್ಪಣ್ಣ ಚಿಕ್ಕಹೆಸರೂರು, ಬಸವರಾಜ ನಾಯಕ, ರಮೇಶ ತಳವಾರ, ಶರಣಬಸವ, ಶಿವನಗೌಡ ಹಿರೇಹೆಸರೂರು, ಅಮರೇಗೌಡ ಗುಂತಗೋಳ, ರಾಮಚಂದ್ರ ನಿಲೋಗಲ್, ನಾಗಪ್ಪ ತಳವಾರ, ಹೂವ್ವಪ್ಪಸ್ವಾಮಿ, ದುರುಗಪ್ಪ, ಚಂದಾಸಾಬ, ಮೌಲಪ್ಪ ಪಾಮನಕಲ್ಲೂರು, ಕೆ.ಆದಪ್ಪ, ಡಿ.ಜಿ.ಶಿವು ಗೆಜ್ಜಲಗಟ್ಟಾ, ಭೋಜಪ್ಪ ಗೆಜ್ಜಲಗಟ್ಟಾ ಇದ್ದರು.