Advertisement

ಹುಯ್ಯೋ ಹುಯ್ಯೋ ಮಳೆರಾಯ

08:20 AM Jun 18, 2019 | Suhan S |

ಕೊಪ್ಪಳ: ಬರದ ನಾಡಿನ ಜನತೆಗೆ ವರುಣ ಮತ್ತೆ ಬೆಂಕಿ ಇಟ್ಟಂತೆ ಕಾಣುತ್ತಿದೆ. ಮುಂಗಾರು ಆರಂಭವಾದರೂ ಮಳೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ವರುಣನ ಆಗಮನಕ್ಕಾಗಿ ರೈತ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಜಿಲ್ಲೆಯಲ್ಲಿ ಆರು ತಿಂಗಳಿಂದ ಶೇ.25ರಷ್ಟು ಮಳೆಯ ಕೊರತೆ ಎದುರಾಗಿದೆ.

Advertisement

ಹೌದು. ಕೊಪ್ಪಳ ಜಿಲ್ಲೆಗೆ ಪದೇ ಪದೆ ಬರದ ಛಾಯೆ ಆವರಿಸುತ್ತಿದೆ. ಕಳೆದ 18 ವರ್ಷದಲ್ಲಿ 12 ವರ್ಷಗಳ ಕಾಲ ಬರ ಕಂಡಿರುವ ಜನ ಸಮೂಹವು ಇತ್ತೀಚಿನ ವರ್ಷಗಳಲ್ಲಿ ಸಮೃದ್ಧಿ ಮಳೆಯನ್ನೇ ಕಂಡಿಲ್ಲ. ಜನ ಹನಿ ನೀರಿಗೂ ಪರಿತಪಿಸುವಂತ ಪರಿಸ್ಥಿತಿ ಉದ್ಭವಿಸುತ್ತಿದೆ.

ಕಳೆದ ವರ್ಷ ಬರದ ಬಿಸಿ ಅನುಭವಿಸಿದ್ದ ಅನ್ನದಾತ ಈ ವರ್ಷ ಕೃಷಿ ಬದುಕು ಕೈ ಹಿಡಿಯಲಿದೆ ಎಂದು ಖುಷಿಯಿಂದಲೇ ಭೂಮಿ ಹಸನು ಮಾಡಿಕೊಂಡಿದ್ದಾನೆ. ಆದರೆ ಇಲ್ಲಿಯ ತನಕ ಉತ್ತಮ ಮಳೆಗಳೇ ಸುರಿದಿಲ್ಲ. ಜಿಲ್ಲೆಯಲ್ಲಿ ಕುಷ್ಟಗಿ, ಯಲಬುರ್ಗಾ ತಾಲೂಕಿನ ಕೆಲ ಹೋಬಳಿ ಬಿಟ್ಟರೆ ಮತ್ತ್ಯಾವ ಹೋಬಳಿಯಲ್ಲೂ ಸಮೃದ್ಧ ಮಳೆಗಳೇ ಆಗಿಲ್ಲ. ಮುಂಗಾರು ಪೂರ್ವಗಳ ಮಳೆಗಳು ಕೂಡ ಮುನಿಸಿಕೊಂಡಿವೆ.

ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ, 2019ರ ಜನವೆರಿಯಿಂದ ಜೂ. 15ರ ವರೆಗೂ ವಾಡಿಕೆಯ ಪ್ರಕಾರ 120.05 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 89.8 ಮಿ.ಮೀ ಮಳೆಯಾಗಿದೆ. ಅಂದರೆ 25.5 ಮಿ.ಮೀ. ಮಳೆ ಕೊರತೆಯಾಗಿದೆ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ 100 ಮಿ.ಮೀ. ಪೈಕಿ 74 ಮಿ.ಮೀ. ಮಳೆಯಾಗಿದ್ದು 25 ಮಿ.ಮೀ. ಮಳೆ ಕೊರತೆಯಿದೆ. ಕೊಪ್ಪಳ ತಾಲೂಕಿನಲ್ಲಿ 128 ಮಿ.ಮೀ. ವಾಡಿಕೆ ಮಳೆ ಪೈಕಿ 61 ಮಿ.ಮೀ. ಮಳೆಯಾಗಿದ್ದು, 52 ಮಿ.ಮೀ. ಮಳೆ ಕೊರತೆಯಾಗಿದೆ. ಇನ್ನೂ ಕುಷ್ಟಗಿ ತಾಲೂಕಿನಲ್ಲಿ ಮಾತ್ರ ವಾಡಿಕೆಯಂತೆ 128 ಮಿ.ಮೀ. ಮಳೆಯಾಗಿದೆ. ಇನ್ನೂ ಯಲಬುರ್ಗಾ ತಾಲೂಕಿನಲ್ಲಿ 124 ಮಿ.ಮೀ ವಾಡಿಕೆ ಪೈಕಿ, 93 ಮಿ.ಮೀ ಮಳೆಯಾಗಿದ್ದರೆ 25 ಮಿ.ಮೀ ಮಳೆ ಕೊರತೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 128 ಮಿ.ಮೀ. ಮಳೆ ಪೈಕಿ 89 ಮಿ.ಮೀ ಮಳೆಯಾಗಿದ್ದು, ಉಳಿದಂತೆ 25 ಮಿ.ಮೀ ಮಳೆ ಕೊರತೆಯಾಗಿದೆ.

Advertisement

ಮುಂಗಾರು ಪೂರ್ವ ಮಳೆ ಮಾಯ: ಪ್ರತಿ ವರ್ಷ ಮುಂಗಾರು ಪೂರ್ವ ಮಳೆಗಳು ಮೇ ತಿಂಗಳಲ್ಲಿ ಆರ್ಭಟಿಸುತ್ತಿದ್ದವು. ಆದರೆ ಪ್ರಸಕ್ತ ವರ್ಷ ಎಲ್ಲಿಯೂ ಆ ಲಕ್ಷಣಗಳೇ ಕಂಡಿಲ್ಲ. ಕಳೆದ ತಿಂಗಳಲ್ಲೂ 63 ಮಿ.ಮೀ. ಮಳೆ ಕೊರತೆಯಾಗಿದೆ. ಇನ್ನೂ ಜೂನ್‌ ತಿಂಗಳಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು, ಮುಂಗಾರಿನ ಮಳೆಗಳ ಸುಳಿವೇ ರೈತರಿಗೆ ಸಿಗುತ್ತಿಲ್ಲ. ಕೇವಲ ಹೋಬಳಿಯಲ್ಲಿ ಮಾತ್ರ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸುರಿಯುತ್ತಿದ್ದು ರೈತರಿನ್ನು ತೃಪ್ತಿದಾಯಕವಾಗಿಲ್ಲ.

5ನೇ ಮಳೆಯೂ ಆಗುತ್ತಿಲ್ಲ: ಅಶ್ವಿ‌ನಿ, ಭರಣಿ ಮಳೆಗೆ ಭೂಮಿ ಹಸನ ಮಾಡಿಕೊಳ್ಳುವ ರೈತರು ಕೃತಿಕಾ ಮಳೆಗೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಕೆಲವು ಹೋಬಳಿಯಲ್ಲಿ ಸ್ವಲ್ಪ ಮಳೆಯಾಗಿದ್ದು ಹೆಸರು ಬಿತ್ತನೆ ಮಾಡಿದ್ದು ಬಿಟ್ಟರೆ ಮುಂದೆ ರೋಹಿಣಿ ಮಳೆಯೂ ಆಗಿಯೇ ಇಲ್ಲ. ಮೃಗಶಿರ ಮಳೆಯೂ 4ನೇ ಪಾದ ಆರಂಭವಾಗುವ ಹಂತದಲ್ಲಿದ್ದರೂ ಮಳೆಯ ಸುಳಿವು ಸಿಗುತ್ತಿಲ್ಲ. ಬಿತ್ತನೆಗೆ ಸಜ್ಜಾಗಿರುವ ಅನ್ನದಾತನಿಗೆ ಈ ವರ್ಷ ಮತ್ತೆ ಬರ ಸಿಡಿಲಿನ ನೋವು ಸದ್ದಿಲ್ಲದೆ ಕಾಣಿಸಿಕೊಳ್ಳುತ್ತಿದೆ. ಮುಂಗಾರಿನ ಐದು ಮಳೆಗಳು ಇಲ್ಲದಂತಾಗಿದ್ದು, ಮುಂದೆ ಆರಿದ್ರ, ಪುಷ್ಯ, ಪುನರ್ವಸು ಮಳೆಗಳು ಮುಗಿದರೆ ಮುಂಗರಿನ ಬಹುತೇಕ ಮಳೆಗಳು ಮುಕ್ತಾಯವಾದಂತಾಗಲಿವೆ. ಆಶ್ಲೇಷ, ಮಘ, ಹುಬ್ಬಿ, ಉತ್ತರ, ಹಸ್ತ, ಚಿತ್ತ, ಸ್ವಾತಿ ಮಳೆಗಳು ಹಿಂಗಾರು ಬೆಳೆಯ ಮಳೆಗಳಾಗಿವೆ.

ಮುಂಗಾರಿನ ಮಳೆಗಳೇ ರೈತರಿಗೆ ಭರವಸೆ ಕೊಡುತ್ತಿಲ್ಲ. ಇನ್ನೂ ಹಿಂಗಾರಿನ ಮಳೆಗಳ ಬಗ್ಗೆ ರೈತನಿಗೆ ಖಾತ್ರಿಯಾಗದಂತಾಗುತ್ತಿವೆ.

ಮೋಡ ಬಿತ್ತನೆ ಮಾಡಲಿದೆಯೇ ಸರ್ಕಾರ?:

ಬರದ ಜಿಲ್ಲೆಗಳಲ್ಲಿ ಸರ್ಕಾರ ಮೋಡ ಬಿತ್ತನೆಗೆ ಮನಸ್ಸು ಮಾಡಲಿದೆಯೇ ಎನ್ನುವ ಮಾತು ರೈತಾಪಿ ವಲಯದಿಂದ ಕೇಳಿ ಬಂದಿದೆ. ಬಜೆಟ್‌ನಲ್ಲಿ ಮೋಡ ಬಿತ್ತನೆಗೆ ಅನುದಾನ ಮೀಸಲಿಟ್ಟು ರೈತರಿಗೆ ಭರವಸೆ ಮೂಡಿಸುತ್ತಿದೆ. ಆದರೆ ಮಳೆಯ ತೀವ್ರ ಕೊತೆ ಉಂಟಾದಾಗ ಮೋಡ ಬಿತ್ತನೆ ಪ್ರಕ್ರಿಯೆ ಆರಂಭಿಸುವಲ್ಲಿ ಎಡವುತ್ತಿದೆ. ಈ ಬಾರಿ ತೀವ್ರ ಬರದ ಪರಿಸ್ಥಿತಿ ಉಂಟಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಜನರಿಗೆ ಮುಂದೇನು ಗತಿ ಎನ್ನುವುದೇ ಚಿಂತೆಯಾಗಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಬೋರ್‌ವೆಲ್ ನೀರು ಕ್ರಮೇಣ ಕಡಿಮೆಯಾಗಿ ಕುಡಿಯಲು ನೀರು ಸಿಗದಂತಾಗುತ್ತಿದೆ. ಸರ್ಕಾರ ಬರದ ನಾಡಿನಲ್ಲಿ ಕಣ್ತೆರೆದು ನೋಡಬೇಕಿದೆ.
•ದತ್ತು ಕಮ್ಮಾರ
Advertisement

Udayavani is now on Telegram. Click here to join our channel and stay updated with the latest news.

Next