Advertisement

ಕೃಷಿ ಹೊಂಡದ ಹಣ 1.35 ಕೋಟಿ ಬಾಕಿ

05:30 PM Sep 08, 2020 | Suhan S |

ಕೊಪ್ಪಳ: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಲ ಸಂರಕ್ಷಣೆ ಜತೆಗೆ ರೈತರ ಹಿತಕ್ಕಾಗಿ ಜಾರಿ ತಂದಿದ್ದ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿರುವ ಕೃಷಿ ಹೊಂಡಕ್ಕೆ ಸರ್ಕಾರದಿಂದ ಇನ್ನೂ 1.35 ಕೋಟಿ ರೂ. ಹಣ ಬರುವುದು ಬಾಕಿ ಇದ್ದು, ಅರ್ಹ ರೈತ ಫಲಾನುಭವಿಗಳು ಹೊಂಡದ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

Advertisement

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿರಾಜ್ಯಾದ್ಯಂತ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಟ್ಟಿತ್ತು. ರೈತರಿಗೆ ಹೊಂಡಗಳ ನಿರ್ಮಾಣಕ್ಕೆ ಶೇ.90 ಸಹಾಯಧನ ನೀಡುತ್ತಿತ್ತು. ಶೇ.10 ಮಾತ್ರ ರೈತರು ಹೊಂಡಕ್ಕೆ ಹಣ ವಿನಿಯೋಗ ಮಾಡುವ ಯೋಜನೆ ಇದಾಗಿತ್ತು.ರಾಜ್ಯದ ಕೆಲವು ಭಾಗದಲ್ಲಿ ಹೊಂಡಗಳು ಯಶಸ್ವಿ ಕಂಡು ರೈತರಿಗೆ ತುಂಬ ನೆರವಾದರೆ ಕೆಲವೊಂದು ಕಡೆ ಹೊಂಡಗಳ ನಿರ್ಮಾಣದಲ್ಲಿ ಬೋಗಸ್‌ ಆಗಿವೆ ಎನ್ನುವ ಆಪಾದನೆ, ದೂರುಗಳು ಕೇಳಿ ಬಂದವು.

ಆದರೂ ರೈತರಿಗೆ ಅವಶ್ಯವಾಗಿರುವ ಹಾಗೂ ಮಳೆಗಾಲದಂತಹ ಸಂದರ್ಭದಲ್ಲಿ ಹೊಂಡಗಳನ್ನು ನಿರ್ಮಿಸಿಕೊಂಡರೆ ಹೊಂಡದಲ್ಲಿ ನೀರು ನಿಂತು ಜಲ ಸಂರಕ್ಷಣೆಯೂ ಆಗುತ್ತಿತ್ತು. ಸರ್ಕಾರವುವಿವಿಧ ಹಂತದಲ್ಲಿ ಹೊಂಡಗಳಿಗೆ ಪರಿಹಾರ ಹಣವನ್ನೂ ಬಿಡುಗಡೆ ಮಾಡುತ್ತಿತ್ತು. ಆದರೆ ಸರ್ಕಾರಗಳು ಬದಲಾದಂತೆ ಹೊಂಡಗಳಿಗೆ ನೆರವು ಕೊಡುವುದೇ ವಿಳಂಬವಾಗಿದೆ.

ಕಳೆದ ಮೈತ್ರಿ ಸರ್ಕಾರದ ಅವ ಧಿಯಲ್ಲಿ ಯೋಜನೆಗಳಿಗೆ ಜೀವಂತಿಕೆ ಇತ್ತಾದರೂ ಯಶಸ್ಸು ಕಾಣಲೇ ಇಲ್ಲ. ಇನ್ನೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್‌ ಸರ್ಕಾರದ ಅವಧಿ ಯಲ್ಲಿ ರಾಜ್ಯದಲ್ಲಿ ನಿರ್ಮಾಣವಾದ ಹೊಂಡಗಳಲ್ಲಿ ಬೋಗಸ್‌ ಆಗಿವೆ. ಭಾರೀ ಅಕ್ರಮ ನಡೆದಿದೆ ಎನ್ನುವ ಆಪಾದನೆ ಹಾಗೂ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರವು ಹೊಂಡಗಳ ಇರುವಿಕೆ ಸತ್ಯಾಂಶ ತಿಳಿಯಲು ತನಿಖೆ ಆರಂಭಿಸಿದೆ. ಪ್ರಸಕ್ತ ವರ್ಷಕ್ಕೆ ಹೊಂಡ ನಿರ್ಮಾಣಕ್ಕೆ ಬ್ರೇಕ್‌ ಹಾಕಿದೆ.

ಇನ್ನೂ ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ನಿರ್ಮಾಣವಾದ ಹೊಂಡಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಕೊಪ್ಪಳ ತಾಲೂಕು-44,60,490, ಕುಷ್ಟಗಿ ತಾಲೂಕು-52,35,484, ಯಲಬುರ್ಗಾ ತಾಲೂಕು- 6,74,733, ಗಂಗಾವತಿ ತಾಲೂಕು 32,26,200 ರೂ. ಸೇರಿದಂತೆ ಜಿಲ್ಲೆಯಾದ್ಯಂತ 1,35,96,907 ಕೋಟಿ ರೂ. ಬರುವುದು ಬಾಕಿಯಿದೆ. ಫಲಾನುಭವಿಗಳು ಮಾತ್ರ ಹೊಂಡದ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ.

Advertisement

ಕೋವಿಡ್‌ನಿಂದ ಪರಿಹಾರ ವಿಳಂಬ: ಕೃಷಿ ಇಲಾಖೆ ಹಾಗೂ ಅಧಿಕಾರಿಗಳು ಮಾತ್ರ, ಸರ್ಕಾರದ ಮಟ್ಟದಲ್ಲಿ ಹಣ ಹಂತ ಹಂತವಾಗಿ ಬರುತ್ತಿದೆ. ಪ್ರಸ್ತುತ ಕೋವಿಡ್‌ ಇರುವುದರಿಂದ ಎಲ್ಲವೂ ತೊಂದರೆಯಾಗಿದೆ. ಆರ್ಥಿಕ ಸ್ಥಿತಿಯೂ ಅಷ್ಟೊಂದು ಸರಿಯಿಲ್ಲ. ಸರ್ಕಾರಿ ನೌಕರರಿಗೆ ವೇತನ ಕೊಡುವುದೇ ಕಷ್ಟದ ಸ್ಥಿತಿಯಾಗುತ್ತಿದೆ. ಹಣಕಾಸಿನ ಇತಿಮಿತಿ ನೋಡಿಕೊಂಡು ಸರ್ಕಾರವು ಹೊಂಡಗಳಿಗೆ ಹಣ ಬಿಡುಗಡೆ ಮಾಡಲಿದೆ ಎನ್ನುವ ಮಾತನ್ನಾಡುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ರೈತರ ಹಿತದೃಷ್ಟಿಯಿಂದ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಆದರೆ ಸಕಾಲಕ್ಕೆ ಸಹಾಯಧನ, ನೆರವು ಕೊಡಲ್ಲ ಎನ್ನುವ ಆಪಾದನೆಯೂ ಸಾಮಾನ್ಯವಾಗುತ್ತಿದೆ. ಇನ್ನಾದರೂ ಸರ್ಕಾರವು ಅರ್ಹ ಫಲಾನುಭವಿಗಳಿಗಾದರೂ ಹಣ ಶೀಘ್ರ ಅವರ ಖಾತೆಗೆ ಜಮೆ ಮಾಡಲಿ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದೆ. ಕೋವಿಡ್‌ ಇರುವುದರಿಂದ ಸ್ವಲ್ಪ ವಿಳಂಬವಾಗಿರಬಹುದು. ಹೊಂಡಗಳ ನಿರ್ಮಾಣದ ಕುರಿತು ಸರ್ಕಾರ ವರದಿ ಕೇಳಿತ್ತು. ಆ ವರದಿಯನ್ನೂ ಕೊಟ್ಟಿದ್ದೇವೆ. ಅರ್ಹ ಫಲಾನುಭವಿಗಳಿಗೆ ಬರಬೇಕಾದ ಪರಿಹಾರ ಬರಲಿದೆ. – ಶಿವಕುಮಾರ, ಕೃಷಿ ಜಂಟಿ ನಿರ್ದೇಶಕ, ಕೊಪ್ಪಳ

ರಾಜ್ಯದಲ್ಲಿ 40 ಕೋಟಿಯಷ್ಟು ಕೃಷಿ ಹೊಂಡಕ್ಕೆ ಹಣ ಬಿಡುಗಡೆ ಮಾಡುವುದು ಬಾಕಿಯಿದೆ. ಕೋವಿಡ್‌ ಉಲ್ಬಣದಿಂದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಇದರಿಂದ ಸ್ವಲ್ಪ ವಿಳಂಬವಾಗಿದೆ. ಮುಂದಿನ ದಿನದಲ್ಲಿ ವಿವಿಧ ಹಂತದಲ್ಲಿ ರೈತರಿಗೆ ಹಣ ಬರಲಿದೆ.

-ಬಿ.ಸಿ. ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ

 

­ದತ್ತು ಕಮ್ಮಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next