Advertisement

ರೈತರ ಬದುಕು ಬದಲಿಸಿದ ಕೃಷಿ ಹೊಂಡ

12:50 PM Oct 04, 2018 | Team Udayavani |

ದೇವನಹಳ್ಳಿ: ಈ ಹಿಂದಿನ ರಾಜ್ಯ ಸರ್ಕಾರದ ಮಹ ತ್ವಾಕಾಂಕ್ಷಿ ಕೃಷಿ ಹೊಂಡ ಯೋಜನೆ ಸುಸ್ಥಿರ ಕೃಷಿಗೆ ಪೂರಕವಾಗಿದ್ದು ನೀರಿಲ್ಲದೆ ಸೊರಗಿದ್ದ ಜಿಲ್ಲೆಯ ರೈತರು ಈಗೀಗ ನೆಮ್ಮದಿ ನಿಟ್ಟುಸಿರು ಬಿಡುತ್ತಿದ್ದಾರೆ. 2016ರಲ್ಲಿ ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಆ ಯೋಜನೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿತ್ತು. ಕೃಷಿಭಾಗ್ಯ ಯೋಜನೆಯಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದು ಇದರಿಂದ ರೈತರು ಮಳೆಗಾಲದ ಬಳಿಕವೂ ತೋಟಗಾರಿಕೆ ಬೆಳೆಗಳಲ್ಲಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ.

Advertisement

ಅಗತ್ಯಕ್ಕೆ ತಕ್ಕ ನೀರು:ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಕುಸಿತದಿಂದ 1200 ರಿಂದ 1500 ಅಡಿಗಳಿಗೆ ಬೋರ್‌ ವೆಲ್‌ ಗಳನ್ನು ಕೊರಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇರುವ ಅಲ್ಪ ಸ್ವಲ್ಪ ನೀರಿನಲ್ಲಿಯೇ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕಳೆದ 4 ವರ್ಷಗಳಿಂದ ಜಿಲ್ಲೆಯಲ್ಲಿನ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದು ಅಗತ್ಯಕ್ಕೆ ತಕ್ಕಂತೆ ನೀರನ್ನು ಕೃಷಿಗೆ ಪೂರೈಸಿ ಕೊಳ್ಳುತ್ತಿದ್ದಾರೆ.

ರೈತ ಪುರುಷೋತ್ತಮ್‌ ಮಾತನಾಡಿ,ಕೃಷಿ ಹೊಂಡಗಳ ನಿರ್ಮಾಣದಿಂದ ರೈತರಿಗಾಗುವ ನೀರಿನ ಅಭಾವ ತಪ್ಪಿದೆ. ಮಳೆಯ ನೀರನ್ನು 5-6 ತಿಂಗಳು ಶೇಖರಿಸಿ ಬೆಳೆ ಬೆಳೆಯಲು ಅನುಕೂಲವಾಗಿದೆ. ಪ್ರತಿ ರೈತರು ಹನಿ ನೀರಾವರಿ ಅಳವಡಿಸಿಕೊಂಡರೆ ಇರುವ ನೀರಿನಲ್ಲಿಯೇ ಉತ್ತಮ ಬೆಳೆ ಬೆಳೆಯಬಹುದು ಎಂದರು. 

4615 ಕೃಷಿ ಹೊಂಡ ನಿರ್ಮಾಣ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4615 ರೈತರು ಕೃಷಿ ಭಾಗ್ಯ ಮತ್ತು ಜಲಾಯನ ಕಾರ್ಯಕ್ರಮದಡಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. 3983 ಹೊಂಡಗಳಿಗೆ ಪಾಲಿಥಿನ್‌ ಹೊದಿಕೆ ಅಳವಡಿ ಸಲಾಗಿದೆ. 2492 ರೈತರು ಡೀಸೆಲ್‌ ಪಂಪ್‌ ಸೆಟ್‌, 1549 ರೈತರು ತುಂತುರು ನೀರಾವರಿ, 452 ಹನಿ
ನೀರಾವರಿ, 102 ನೆರಳು ಪರದೆ ಘಟಕಗಳನ್ನು ನಿರ್ಮಿಸಿಕೊಂಡಿದ್ದಾರೆ. 2014ರಿಂದ 2018ರವರೆಗೆ ಜಿಲ್ಲೆಯ 4 ತಾಲೂಕುಗಳಲ್ಲಿ ಕೃಷಿ ಹೊಂಡಗಳನ್ನು ಮಾಡಿಕೊಂಡು ರೈತರು ಕೃಷಿ ಮಾಡುತ್ತಿದ್ದಾರೆ. 

ಇದರಿಂದ ನೀರು ಉಳಿತಾಯವಾಗಿ ಅಂತರ್ಜಲವೂ ವೃದ್ಧಿಸುತ್ತಿದೆ. ಇನ್ನು ಜಿಲ್ಲೆಯಲ್ಲಿನ ಸರಾಸರಿ ಕೃಷಿ ಹೊಂಡಗಳು ಇಂತಿವೆ. 

Advertisement

ದೇವನಹಳ್ಳಿ ತಾಲೂಕು: 2014 ರಲ್ಲಿ 464, 2015 ರಲ್ಲಿ 131, 2016 ರಲ್ಲಿ 226, 2017 ರಲ್ಲಿ 297 ಹಾಗೂ ವಾಟರ್‌ ಶೆಡ್‌ 164, 2018 ರಲ್ಲಿ 163 ಒಟ್ಟು 1345 ಕೃಷಿ ಹೊಂಡಗಳು ನಿರ್ಮಾಣವಾಗಿದೆ. ದೊಡ್ಡಬಳ್ಳಾಪುರ ತಾಲೂಕು:2014 ರಲ್ಲಿ 397, 2015 ರಲ್ಲಿ 86 , 2016 ರಲ್ಲಿ 22, 2017 ರಲ್ಲಿ 90 ಹಾಗೂ ವಾಟರ್‌ ಶೆಡ್‌ 567, 2018 ರಲ್ಲಿ 60 ಒಟ್ಟು 1202 ಕೃಷಿ ಹೊಂಡಗಳು ನಿರ್ಮಾಣವಾಗಿದೆ. ನೆಲಮಂಗಲ ತಾಲೂಕು: 2014 ರಲ್ಲಿ 398, 2015 ರಲ್ಲಿ 68 , 2016 ರಲ್ಲಿ 40, 2017 ರಲ್ಲಿ 25 ಹಾಗೂ ವಾಟರ್‌ ಶೆಡ್‌ 240, 2018 ರಲ್ಲಿ 42 ಒಟ್ಟು 813 ಕೃಷಿ ಹೊಂಡಗಳು ನಿರ್ಮಾಣವಾಗಿದೆ.
 
ಹೊಸಕೋಟೆ ತಾಲೂಕು: 2014 ರಲ್ಲಿ 466, 2015 ರಲ್ಲಿ 89 , 2016 ರಲ್ಲಿ 19, 2017 ರಲ್ಲಿ 62 ಹಾಗೂ ವಾಟರ್‌ ಶೆಡ್‌ 452, 2018 ರಲ್ಲಿ 167 ಒಟ್ಟು 1255 ಕೃಷಿ ಹೊಂಡಗಳು ನಿರ್ಮಾಣವಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡ ರೈತರಿಗೆ ಶೇ. 90 ಹಾಗೂ ಸಾಮಾನ್ಯ ವರ್ಗದ ರೈತರಿಗೆ ಶೇ.80 ಸಹಾಯ ಧನ ಸಹಾಯ ನಿಗದಿ ಪಡಿಸಲಾಗಿದೆ. ಅದರಂತೆ ಕೃಷಿ ಹೊಂಡಗಳಲ್ಲಿನ ಪ್ರಾಣಹಾನಿ ತಡೆಯಲು ಮುನ್ನೆಚರಿಕೆಯಾಗಿ ತಂತಿ ಬೇಲಿ ನಿರ್ಮಾಣಕ್ಕಾಗಿ ಸಹಾಯ ಧನ 16 ಸಾವಿರ ರೂ.ಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ.

ರೈತರ ಖಾತೆಗೆ ಸಹಾಯಧನ ಜಿಲ್ಲೆಯಲ್ಲಿ 4615 ರೈತರು ಕೃಷಿ ಭಾಗ್ಯ ಯೋಜನೆ ಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. 4449 ರೈತರಿಗೆ ಕೃಷಿ ಹೊಂಡಗಳು ನಿರ್ಮಾಣ ಪಾಲಿಥಿನ್‌ ಅಳವಡಿಕೆ, ಡೀಸೆಲ್‌ ಪಂಪ್‌ ಸೆಟ್‌, ತುಂತುರು ನೀರಾವರಿ, ನೆರಳು ಪರದೆ ಅಳವಡಿಕೆಗೆ ಸಂಬಂಧಿಸಿದಂತೆ 2938.23 ಲಕ್ಷ ರೂ. ಸಹಾಯ ಧನವನ್ನು ರೈತರ ಖಾತೆ-ಸರಬ ರಾಜು ಸಂಸ್ಥೆಗೆ ವರ್ಗಾಹಿಸಲಾಗಿದೆ ಎಂದು ಕೃಷಿ ಜಿಲ್ಲಾ ಜಂಟಿ ನಿರ್ದೇಶಕ ಗಿರೀಶ್‌ ತಿಳಿಸಿದರು

ದೇವನಹಳ್ಳಿ ತಾಲೂಕಿನಲ್ಲಿ 1345 ಕೃಷಿ ಹೊಂಡಗಳು ನಿರ್ಮಾಣವಾಗಿದೆ. ರೈತರು ಕೃಷಿ ಹೊಂಡಗಳನ್ನು ಸದ್ಬಳಕೆ
ಮಾಡಿಕೊಳ್ಳುತ್ತಿದ್ದಾರೆ. 
ಮಂಜುಳಾ, ದೇವನಹಳ್ಳಿ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next