Advertisement

ಕೃಷಿಕರ ಚಿತ್ತ ಸೆಳದ ಕೃಷಿ ಯಂತ್ರ ಮೇಳ

09:59 AM Feb 11, 2023 | Team Udayavani |

ಪುತ್ತೂರು: ಅನ್ನದಾತರಿಗೆ ನೆರವಾಗುವ ನವೋದ್ಯಮಗಳು, ಔಷಧ ಸಿಂಪಡಣೆಗೆ ಬಗೆ-ಬಗೆಯ ಯಂತ್ರಗಳು, ಆಲಂಕಾರಿಕ ಮೀನುಗಳು, ಕಳೆ ತೆಗೆಯಲು ತರಹೇವಾರಿ ಯಂತ್ರಗಳು, ವಿವಿಧ ತಳಿಯ ಹಣ್ಣು, ಹೂವಿನ ಗಿಡಗಳು, ಎಲೆಕ್ಟ್ರಿಕ್‌ ವಾಹನಗಳು… ವೀಕ್ಷಣೆಗೆ, ಖರೀದಿಗೆ ಮುಗಿ ಬಿದ್ದ ಜನ. ಈ ಚಿತ್ರಣ ಕಂಡುಬಂದಿದ್ದು ನೆಹರೂ ನಗರದ ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ಆವರಣದಲ್ಲಿ ಫೆ.10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿರುವ ಬೃಹತ್‌ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನದ ಮೊದಲ ದಿನ. ಹದವಾಗಿ ನೆತ್ತಿ ಸುಡುತ್ತಿದ್ದ ಬಿಸಿಲಿನ
ನಡುವೆಯೂ ಕೃಷಿ ಯಂತ್ರ ಮೇಳಕ್ಕೆ ಮೊದಲ ದಿನವಾದ ಶುಕ್ರವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೇಳವುದ್ದಕ್ಕೂ ಕೃಷಿಕರ ಓಡಾಟ ಕಂಡು ಬಂತು. ಇಡೀ ಮೇಳದ ಅಚ್ಚು ಕಟ್ಟಿನ ವ್ಯವಸ್ಥೆ, ಸುತ್ತಾಟ ಕೃಷಿಕರ ಹುಮ್ಮಸ್ಸು ಹೆಚ್ಚಿಸಿತ್ತು.

Advertisement

ಹೊಸ ಸಂಶೋಧನೆಗಳ ಪ್ರದರ್ಶನ

ಮೇಳದಲ್ಲಿ ಸಾಧಕ ರೈತರ ಪರಿಶ್ರಮ, ಕೃಷಿಯಲ್ಲಿ ಲಾಭ ಕಂಡುಕೊಂಡ ಬಗೆ ಅನಾವರಣಗೊಂಡಿತ್ತು. ಹನಿ ನೀರಾವರಿ ಪದ್ಧತಿ, ಛಾವಣಿ ಹಾಗೂ ಮಳೆ ನೀರು ಸಂಗ್ರಹ ವಿಧಾನ, ಮಣ್ಣು ರಹಿತ ಕೃಷಿಯ ಆವಿಷ್ಕಾರ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಮೇಳದಲ್ಲಿ 250ಕ್ಕೂ ಅಧಿಕ ಮಳಿಗೆಗಳು ಇದ್ದು ಪ್ರತೀ ಮಳಿಗೆಯೂ ವಿಭಿನ್ನ ರೀತಿ ಅನುಭವ ಕಟ್ಟಿಕೊಟ್ಟವು. ತಾಲೂಕು-ಹೊರ ತಾಲೂಕಿನ ಬೇರೆ ಬೇರೆ ಭಾಗದಿಂದ ಆಗಮಿಸಿದ್ದ ರೈತರು ಪ್ರತೀ ಮಳಿಗೆಯತ್ತಲೂ ಕಣ್ಣು ಹಾಯಿಸಿ ಮಾಹಿತಿ ಪಡೆದುಕೊಂಡರು. ಯಂತ್ರೋಪಕರಣ ಮಳಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ರೈತರ ನೆರವಿಗೆ ವಿವಿಧ ಕಂಪೆನಿಗಳು ನಿರ್ಮಿಸಿರುವ ಉಪಕರಣಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಸ್ಥಳದಲ್ಲಿಯೇ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ಕೂಡ ಮನ ಸೆಳೆಯಿತು. ಅಟೋಮೊಬೈಲ್‌, ಆಹಾರ ಮಳಿಗೆ‌ಗಳು, ವ್ಯಾಪಾರ ಮಳಿಗೆ, ಸಾವಯವ ಸಿರಿ ಮಳಿಗೆಗಳು, ಡ್ರೋನ್‌ ಮೂಲಕ ಅಡಿಕೆಗೆ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆಯ ಅನುಭವ, ಸುಸಜ್ಜಿತ ಕಾರ್ಬನ್‌ ಫೈಬರ್‌ ದೋಟಿಗಳ ಪ್ರದರ್ಶನ, ಜಲಕೃಷಿ ವಿಧಾನದ ಸಮಗ್ರ ಪರಿಚಯ ಮೊದಲಾದವುಗಳ ಕೃಷಿ ಪ್ರಿಯರನ್ನು ಆಕರ್ಷಿಸಿತ್ತು.

ಜನರನ್ನು ಸೆಳೆದ ಪಾರಂಪರಿಕ ಗ್ರಾಮ

ಪಾರಂಪರಿಕ ಗ್ರಾಮ ನಿರ್ಮಾಣ ವೀಕ್ಷಕರ ಗಮನ ಸೆಳೆಯಿತು. ತಟ್ಟಿ ಹೆಣೆಯುವಿಕೆ, ಮೀನು ಬೇಟೆಗೆ ಬಳಸುವ ಕೂರಿ, ಸುಡುವ ಬೆಂಕಿ ಕುಲುಮೆಯೊಳಗೆ ಕತ್ತಿ, ಸುತ್ತಿಗೆ ತಯಾರಿಸುವ ಕಮ್ಮಾರರು ಹೀಗೆ ಪಾರಂಪರಿಕ ಗ್ರಾಮ ಹಳ್ಳಿಯ ಕುಲ ಕಸುಬುಗಳನ್ನು ಪ್ರತ್ಯಕ್ಷವಾಗಿ ತೆರೆದಿಟ್ಟಿತ್ತು. ಇನ್ನೊಂದೆಡೆ ಅನೇಕ ಗ್ರಾಮೀಣ ಕಲಾ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಹಳೆಯ ಕಾಯಿನ್‌ಗಳು, ಚಿನ್ನ-ಹಣದ ಪೆಟ್ಟಿಗೆ, ಮರದ ಪೆಟ್ಟಿಗೆ, ಕುಬಲ್‌ ಪೆಟ್ಟಿಗೆ, ಉರ್ಲಿ, ಗಿಂಡೆ, ಕೈಸಟ್ಟಿ, ಅಡಕೆ ಕತ್ತರಿಗಳು, ಬರ್ಚಿ, ಖಡ್ಗ, ದೈವಗಳ, ಮೊಗಗಳು, ವಿಭೂತಿ, ಕಂಚಿನ ಲೋಟ, ಗ್ರಾಮಫೋನ್‌, ಮರಾಯಿ, ಚೆನ್ನೆಮಣೆ, ಹಳೆಯ ದೀಪಗಳುಗಮನ ಸೆಳೆಯಿತು

Advertisement
Advertisement

Udayavani is now on Telegram. Click here to join our channel and stay updated with the latest news.

Next