ನವದೆಹಲಿ : ಐಪಿಎಲ್ ಗೆ ಇನ್ನು ಉಳಿದಿರುವುದು ಒಂದೇ ದಿನ. ಈ ಮಧ್ಯ ಆರ್ ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್ ನ್ನು ಬಿಡುಗಡೆ ಮಾಡಿದ್ದು,ಕನ್ನಡದ ಅಭಿಮಾನಿಗಳಿಗೆ ಈ ಹಾಡು ಕೊಂಚ ನಿರಾಶೆ ಹುಟ್ಟಿಸಿದೆ. ಅದಕ್ಕೆ ಕಾರಣ ಹಾಡಿನಲ್ಲಿ ಕನ್ನಡ ಪದಗಳು ಕೇಳಲು ಸಿಗದಿರುವುದು.!
ಐಪಿಎಲ್ ನಲ್ಲಿ ಆರ್ ಸಿಬಿ ತಂಡಕ್ಕೆ ತನ್ನದೇ ಆದ ದೊಡ್ಡ ಬೆಂಬಲಿಗರ ಪಡೆಯಿದೆ,ಸೋತರು ಗೆದ್ದರು ಆರ್ ಸಿಬಿಯೇ ನಮ್ಮ ತಂಡ ಎನ್ನುವ ಅಭಿಮಾನಿ ಬಳಗವಿದೆ. ಆರ್ ಸಿಬಿ ತಂಡ ಇಂದು ತನ್ನ ಅಧಿಕೃತ ಥೀಮ್ ಸಾಂಗ್ ನ್ನು ಬಿಡುಗಡೆ ಮಾಡಿದೆ. 1 ನಿಮಿಷ 47 ಸೆಕೆಂಡ್ ಗಳಿರುವ ಈ ಹಾಡಿನಲ್ಲಿ ಆರ್ ಸಿಬಿ ತಂಡದ ಆಟಗಾರರ ಅಭ್ಯಾಸದ ದೃಶಾವಳಿಗಳು, ಅಭಿಮಾನಿಗಳ ಉತ್ಸಾಹಭರಿತ ಕ್ಷಣಗಳನ್ನು ತೋರಿಸಲಾಗಿದೆ. ಇಡೀ ಹಾಡಿನಲ್ಲಿ ಹಿಂದಿ ಹಾಗೂ ಇಂಗ್ಲೀಷಿನ ಸಾಹಿತ್ಯವೇ ಮೇಲಾಗಿ ಕೇಳುತ್ತದೆ ವಿನಃ ಕನ್ನಡದ ಪದಗಳ ಬಳಕೆ ಇಲ್ಲವೇ ಇಲ್ಲ. ಸದ್ಯ ಇದು ಕನ್ನಡದ ಅಭಿಮಾನಿಗಳಿಗೆ ನಿರಾಶೆ ತಂದಿದ್ದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಟ್ವೀಟ್ ಮಾಡಿ ಹಾಡು ಚೆನ್ನಾಗಿದೆ, ಹಿಂದಿಯ ಬದಲು ಕನ್ನಡದ ಸಾಹಿತ್ಯ ಬಳಕೆಯಾಗಿದ್ದಾರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾರೆ. ಇನ್ನು ಕೆಲವರು ಹಿಂದಿ ಹೇರಿಕೆಯ ವಿರುದ್ಧ ಹೇಳಿ ಹಾಡಿನಲ್ಲಿ ಕನ್ನಡ ಸಾಹಿತ್ಯ ಇರಬೇಕಿತ್ತು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೇಗೆ ತಮ್ಮ ತಂಡದ ಥೀಮ್ ಸಾಂಗ್ ನಲ್ಲಿ ಸ್ಥಳೀಯ ಭಾಷೆಯನ್ನು ಬಳಿಸಿದ್ದಾರೆಯೋ ಹಾಗೆ ಆರ್ ಸಿಬಿ ತಂಡವೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕಿತ್ತು ಎಂದು ಕೆಲ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಆರ್ ಸಿ ಬಿ ತಂಡದ ಅಧಿಕೃತ ಥೀಮ್ ಸಾಮಗ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಈಗಾಗಲೇ 5 ಲಕ್ಷ ವೀಕ್ಷಣೆಯತ್ತ ಸಾಗುತ್ತಿದೆ.