ಅಲ್ಲಿ ಎತ್ತ ನೋಡಿದರೂ ಹಬ್ಬದ ಸಂಭ್ರಮ. ರಾರಾಜಿಸುತ್ತಿದ್ದ ಭಾವಚಿತ್ರಗಳು, ಸಾಲುಗಟ್ಟಿದ್ದ ಜನಜಂಗುಳಿ. ಮುಗಿಲು ಮುಟ್ಟಿದ್ದ ಜೈಕಾರ, ಕೈಯಲ್ಲಿ ತರಹೇವಾರಿ ಹೂವು, ಹಾರಗಳು, ಇವೆಲ್ಲದರ ಜತೆಗೆ ಕಣ್ತುಂಬಿಕೊಂಡ ಮನಸುಗಳು…
ಇದೆಲ್ಲಾ ಕಂಡು ಬಂದದ್ದು ಕಂಠೀರ ಸ್ಟುಡಿಯೋದಲ್ಲಿ. ಏಪ್ರಿಲ್ 24 ಅಂದರೆ, ಅದು ಡಾ.ರಾಜ್‌ಕುಮಾರ್ ಅವರ ಅಭಿಮಾನಿಗಳ ಪಾಲಿಗೆ ನಾಡಹಬ್ಬವಿದ್ದಂತೆ. ವರನಟ ಡಾ.ರಾಜ್‌ಕುಮಾರ್ ಅವರ 89 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳದ್ದೇ ಕಾರುಬಾರು.
ಹಾಗಾಗಿ, ಅವರ ಸಮ್ಮುಖದಲ್ಲೇ ಸ್ಮಾರಕ ಬಳಿ, ಡಾ.ರಾಜ್‌ಕುಮಾರ್ ಕುಟುಂಬ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಿತು. ಬೆಳಗ್ಗೆ ಡಾ.ರಾಜ್‌ಕುಮಾರ್ ಅವರ ಸ್ಮಾರಕ ಬಳಿ ಆಗಮಿಸಿದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮರ್ ಹಾಗೂ ಪುನೀತ್‌ರಾಜ್‌ಕುಮಾರ್, ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಜ್ಯೋತಿ ಬೆಳಗಿದರು.
ಅವರೊಂದಿಗೆ ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಗೀತಾ ಶಿವರಾಜ್‌ಕುಮಾರ್, ವಿನಯ್‌ರಾಜ್‌ಕುಮಾರ್, ಗೋವಿಂದ್‌ರಾಜ್ ಸೇರಿದಂತೆ ಡಾ.ರಾಜ್‌ಕುಮಾರ್ ಅವರ ಕುಟುಂಬ ಸ್ಮಾರಕಕ್ಕೆ ನಮನ ಸಲ್ಲಿಸಿತು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್‌ರಾಜ್‌ಕುಮಾರ್ ಅವರುಗಳು ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಚಾಲನೆ ಕೊಟ್ಟರು.
ಸಾಲಾಗಿ ಬಂದ ಸಾವಿರಾರು ಅಭಿಮಾನಿಗಳು, ರಾಜ್‌ಕುಮಾರ್ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ, ಜೈಕಾರ ಹಾಕಿದ್ದು ಸಾಮಾನ್ಯವಾಗಿತ್ತು. ಇನ್ನು, ಕೆಲವರು ಅಣ್ಣಾವ್ರ ಫೋಟೋ ಹಿಡಿದು, ಸ್ಮಾರಕದ ಎದುರು ನಮಸ್ಕರಿಸುತ್ತಿದ್ದದ್ದು ಕಂಡು ಬಂತು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ನಟ,ನಟಿಯರು, ನಿರ್ಮಾಪಕ, ನಿರ್ದೇಶಕರುಗಳು ಉಪಸ್ಥಿತರಿದ್ದರು.