Advertisement

ಎಲ್ಲೆಡೆ ಮೇರೆ ಮೀರಿದ ಅಭಿಮಾನಿಗಳ ಸಂಭ್ರಮ

06:33 AM May 31, 2019 | Team Udayavani |

ಬೆಂಗಳೂರು: ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

Advertisement

ಶಿವಮೊಗ್ಗ, ಮದ್ದೂರು, ಪುತ್ತೂರುಗಳಲ್ಲಿ ಉಚಿತ ಲಡ್ಡು ವಿತರಣೆ ಮಾಡಿದರೆ, ಹಾಸನ, ಮೈಸೂರು ಸೇರಿ ರಾಜ್ಯದ ಹಲವೆಡೆ ನಮೋ ಟೀ ಸ್ಟಾಲ್‌ ಮೂಲಕ ಉಚಿತ ಚಹ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ, ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ವಾಟ್ಸಪ್‌ಗ್ಳಲ್ಲಿಯೂ ನಮೋ ಪ್ರಮಾಣವಚನದ ಸುದ್ದಿಯೇ ಹರಿದಾಡುತ್ತಿತ್ತು.

ಎಲ್‌ಇಡಿ ಪರದೆ ವ್ಯವಸ್ಥೆ: ಮಂಗಳೂರಿನಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್‌ ಅವರ ನೇತೃತ್ವದಲ್ಲಿ ಪಿವಿಎಸ್‌ ಬಳಿಯಿರುವ ಬಿಜೆಪಿ ಕಚೇರಿಯ ಎದುರು, ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು, ಪಿವಿಎಸ್‌ ಕಲಾಕುಂಜದ ಬಳಿ ಇರುವ ಬಿಜೆಪಿ ಕಾರ್ಯಾಲಯದಲ್ಲಿ, ಪುತ್ತೂರು ನಗರದ ಹಲವೆಡೆ ಬೃಹತ್‌ ಎಲ್‌ಸಿಡಿ ಪರದೆಗಳನ್ನು ಹಾಕಿ, ಮೋದಿ ಸಂಪುಟದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.

ದಿಲ್ಲಿಯಲ್ಲಿ ಸಮಾರಂಭ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಾ, ಮೋದಿ, ಮೋದಿ ಎಂಬ ಘೋಷಣೆಗಳನ್ನು ಕೂಗಿದರು. ಈ ಮಧ್ಯೆ, ಮಂಗಳೂರಿನ ಪಿವಿಎಸ್‌ ಕಲಾಕುಂಜದ ಬಳಿಯಿರುವ ಬಿಜೆಪಿ ಕಾರ್ಯಾಲಯದಲ್ಲಿ ಮರಳು ಚಿತ್ರಕಾರ ಹರೀಶ್‌ ಆಚಾರ್ಯ ಅವರಿಂದ ಮೋದಿಯವರ ಮರಳಿನ ರೂಪ ಚಿತ್ರವನ್ನು ಪ್ರದರ್ಶಿಸುವ ವ್ಯವಸ್ಥೆ ಇತ್ತು.

ಮೋರ್ಗನ್‌ಗೆಟ್‌ ಜಂಕ್ಷನ್‌ನಲ್ಲಿ ನಮೋ ಟೀ ಸ್ಟಾಲ್‌ ತೆರೆಯಲಾಗಿದ್ದು, ಗುರುವಾರ ಬೆಳಗ್ಗೆಯಿಂದಲೇ ಉಚಿತ ಟಿ ಮತ್ತು ಸಮೋಸದ ವ್ಯವಸ್ಥೆ ಮಾಡಲಾಗಿತ್ತು. ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಪುನಿಕ್‌ ಸ್ಟುಡಿಯೋದಲ್ಲಿ ಉಚಿತ ಪಾಸ್‌ಪೋರ್ಟ್‌ ಸೇವೆ ಒದಗಿಸಲಾಗಿತ್ತು.

Advertisement

ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣದ ಬಳಿ ಮೋದಿ ಅಭಿಮಾನಿ ಶಂಕರ್‌ ಎಂಬುವರು, ಗುರುವಾರ ಸಂಜೆ 5ರಿಂದ 8ರ ತನಕ ತಮ್ಮ ಅಂಗಡಿಗೆ ಆಗಮಿಚಿಸಿದ ಎಲ್ಲರಿಗೂ ಉಚಿತ ಕಬ್ಬಿನ ಹಾಲು ವಿತರಿಸಿದರು. ಉಪ್ಪಿನಂಗಡಿ ಸಹಿತ ಕೆಲವು ಕಡೆಗಳಲ್ಲಿ ಆಟೋ ರಿಕ್ಷಾ ಚಾಲಕರು ಉಚಿತ ಸೇವೆ ನೀಡಿದರು.

ಉಚಿತ ಚಹ, ಬಿಸ್ಕತ್‌ ವಿತರಣೆ: ಮೈಸೂರಿನ ಚಾಮುಂಡಿಪುರಂನ ಹೋಟೆಲ್‌ ಮುಂಭಾಗ ಸಾರ್ವಜನಿಕರಿಗೆ ಉಚಿತವಾಗಿ ಚಹಾ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆ ಆಚರಿಸಲಾಯಿತು. ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸರ್ಕಲ್‌ನಲ್ಲಿರುವ ನಮೋ ಟೀ ಸ್ಟಾಲ್‌ ಮತ್ತು ವರ್ಧಮಾನ್‌ ಪ್ರಾವಿಜನ್‌ ಸ್ಟೋರ್‌ ಮಾಲೀಕ ಉಮೇಶ್‌ ಎಂಬುವರು, ಗುರುವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ನೂರಾರು ಜನರಿಗೆ ಉಚಿತವಾಗಿ ಟೀ ಮತ್ತು ಬಿಸ್ಕತ್‌ ನೀಡಿ ಮೋದಿಯವರ ಮೇಲಿನ ಅಭಿಮಾನ ಮೆರೆದರು. ಮದ್ದೂರಿನಲ್ಲಿ ಸಾರ್ವಜನಿಕರಿಗೆ ಲಡ್ಡು ವಿತರಿಸಿ ಸಂಭ್ರಮ ಆಚರಿಸಲಾಯಿತು.

ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ನರೇಂದ್ರ ಮೋದಿ ಟೀ ಸ್ಟಾಲ್‌ನಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಉಚಿತ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಯಿತು. ಕೊಪ್ಪಳದಲ್ಲಿ ಮೋದಿ ಅಭಿಮಾನಿಗಳು ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ನೆರವೇರಿಸಿದರು.

ಇದೇ ವೇಳೆ, ಮೋದಿ ಅಭಿಮಾನಿಗಳು ರಾಜ್ಯದ ಇತರೆಡೆಯೂ ಸಿಹಿ ತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‍ಬುಕ್‌, ವಾಟ್ಸಪ್‌ಗ್ಳಲ್ಲಿಯೂ ನಮೋ ಪ್ರಮಾಣವಚನದ ಸುದ್ದಿಯೇ ಹರಿದಾಡುತ್ತಿತ್ತು.

ಇನ್ನು, ಪ್ರಮಾಣವಚನ ಸಮಾರಂಭ ಆರಂಭವಾಗುತ್ತಿದ್ದಂತೆ ಮನೆಗಳು, ಅಂಗಡಿ ಮುಂಗಟ್ಟು, ಹೋಟೆಲ್‌, ಮಾಲ್‌ ಸೇರಿದಂತೆ ಎಲ್ಲೆಡೆಯೂ ಜನ ಸೇರಿ ಕುತೂಹಲದಿಂದ ಟಿವಿ ವೀಕ್ಷಣೆಯಲ್ಲಿ ತೊಡಗಿದ ದೃಶ್ಯ ಕಂಡು ಬಂತು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲ ಕಡೆ ಬಂದೋಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next