Advertisement
ಚಿತ್ರರಂಗದ ತಮ್ಮ ಉತ್ತರಾರ್ಧದ ಜೀವನದಲ್ಲಿ ರಾಜಕುಮಾರ್ ತಮ್ಮ ಪಾತ್ರಗಳಿಗೆ ತಾವೇ ಹಾಡಿದರು. ಪೌರಾಣಿಕ ನಾಟಕಗಳ ಹಲವು ರಂಗಗೀತೆಗಳಿಗೆ ಸಿನಿಮೀಯ ರಾಗ ಸಂಯೋಜನೆ ಮಾಡಿಸಿದರು. ಇತರರ ಪಾತ್ರಗಳಿಗೂ ರಾಜ್ ಹಾಡಿದರು. ಚಿತ್ರ ನಟನಾದ ಆರಂಭದ ಕಾಲದಿಂದಲೇ ಅವರು ಹಾಡಬಹುದಿತ್ತಲ್ಲವೆ? ಎಷ್ಟೋ ವರ್ಷಗಳ ಕಾಲ ಅವರು ಯಾಕೆ ಹಾಡಲಿಲ್ಲ? ಹಾಡನ್ನೇ ಕಸುಬಾಗಿಸಿಕೊಂಡ ಶ್ರೇಷ್ಠ ಹಾಡುಗಾರರಿಂದ ಎಲ್ಲ ಪಾತ್ರಗಳಿಗೆ ಹಾಡು ಜೋಡಣೆ ಮಾಡಿಸುವುದು ಚಿತ್ರರಂಗ ದಲ್ಲಿ ಮೊದಲಿನಿಂದಲೂ ನಡೆದುಬಂದ ಪರಿಪಾಠ. ಪಿ.ಬಿ.ಶ್ರೀನಿವಾಸರ ಕಂಠವಂತೂ ರಾಜಕುಮಾರ್ ಕಂಠಕ್ಕೆ ಹೇಳಿ ಮಾಡಿಸಿದಂತಿತ್ತು. ಇದು ರಾಜಕುಮಾರ್ ಅವರೇ ಹಾಡಿದ್ದು ಎನ್ನುವ ಭಾವನೆಯನ್ನು ಆ ಕಾಲದಲ್ಲಿ ಉಂಟುಮಾಡುತ್ತಿತ್ತು. ಈ ಪ್ರಯೋಗ ಯಶಸ್ವಿಯಾಗಿ ನಡೆಯತೊಡಗಿತು. ಯಾವಾಗ ಈ ಪ್ರಯೋಗ ಸಫಲವಾಯಿತೋ ಅಂದಿನಿಂದ ಚಿತ್ರರಂಗದವರು ರಾಜಕುಮಾರ್ ಅವರ ಪಾತ್ರಗಳಿಗೆ ರಾಜಕುಮಾರ್‌ರಿಂದಲೇ ಹಾಡಿಸುವ “ರಿಸ್ಕ್’ ತೆಗೆದುಕೊಳ್ಳಲಿಲ್ಲ!
ಹೀಗೆ ಗಾಯಕ ನಟನಾಗಿ ಹೊರಹೊಮ್ಮುವುದಕ್ಕೆ ರಂಗ ಭೂಮಿಯ ಹಿನ್ನೆಲೆ ಕಾರಣ. ಬಾಲ್ಯದಲ್ಲೇ ಗುಬ್ಬಿ ವೀರಣ್ಣ ಹಾಗೂ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗಳಲ್ಲಿ ಸಾಕಷ್ಟು ಹಾಡುಗಳನ್ನು ಕಲಿತರು. ತಮ್ಮ ಪಾತ್ರಗಳಿಗೆ ತಾವೇ ಹಾಡಿಕೊಳ್ಳುತ್ತಿದ್ದರು. ಕಂಪನಿಯಲ್ಲಿದ್ದ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ರಂಗಸಂಗೀತ ಶಿಕ್ಷಕರಿಂದಲೂ ಅವರಿಗೆ ಪಾಠ ದೊರೆಯುತ್ತಿತ್ತು.
Related Articles
Advertisement
ತಂದೆಯೇ ಗುರುವಾಗಿ ಅಭಿನಯದ ಹಲವು ಪಟ್ಟುಗಳನ್ನು ಹೇಳಿಕೊಟ್ಟರು. ತಲ್ಲೀನತೆ ತಾದ್ಯಾತ್ಮತೆ ಹೊಂದಿದ್ದ ಜತೆಗೆ ಹುಟ್ಟು ನಟನಂತೇ ಇದ್ದ ಮುತ್ತುರಾಜ್ ಅವನ್ನೆಲ್ಲ ಕರಗತ ಮಾಡಿಕೊಂಡರು, ರಕ್ತಗತವಾಗಿಸಿಕೊಂಡರು.
ರಾಜ್ ನಟನಾ ಶೈಲಿತನ್ನ ಕಾಲದ ಇಂತಹದೊಂದು ನಟನಾ ಪರಂಪರೆಯನ್ನು ಜೀರ್ಣಿಸಿಕೊಳ್ಳುವ ಜತೆಗೆ ತಮ್ಮದೇ ಆದ ನಟನಾ ಪರಂಪರೆಯನ್ನು ಕಟ್ಟಿದರು. ಅದೇ ರಾಜಕುಮಾರ್ ವಿಶೇಷತೆ. ಪೌರಾಣಿಕ ಪಾತ್ರ ಗಳು ಕೆಲವು ಸಂದರ್ಭದಲ್ಲಿ ತೋರುತ್ತಿದ್ದ ಅಬ್ಬರ ರಾಜ ಕುಮಾರ್‌ಗೆ ಅತಿ ಎನಿಸಿತು. ತಾವೇ ಅಂತಹ ಪಾತ್ರಗಳಲ್ಲಿ ಅಭಿನಯಿಸುವ ಪ್ರಸಂಗ ಬಂದಾಗ ಅಬ್ಬರಕ್ಕೆ ಕಡಿವಾಣ ಹಾಕಿದರು. ಏರಿಳಿವು ರೂಢಿಸಿಕೊಂಡರು. ಅನಿವಾರ್ಯ ಸಂದರ್ಭ ಬಂದಾಗ ನಾನೇನು ಕಡಿಮೆ ಇಲ್ಲ ಎಂಬಂತೆ ಅಬ್ಬರಿಸಿದರು. ಮಂದ್ರ ಮತ್ತು ತಾರಕ ಸಂಗೀತದಲ್ಲಿ ಮಾತ್ರವಲ್ಲ, ನಟನೆಯಲ್ಲೂ ಇದೆ ಎಂಬುದನ್ನು ಬಹುಬೇಗ ಅರಿತುಕೊಂಡರು. ಅವರ ಅಭಿನಯಕ್ಕೆ ಸಂಗೀತದ ಲಯ ಬಂತು. ಹಿತಮಿತ ಬೇಕು ಎಂಬುದನ್ನು ಮನಗಂಡರು. ಮುತ್ತುರಾಜ್ (ರಾಜಕುಮಾರ್ ಅವರಿಗೆ ತಂದೆ ತಾಯಿ ಇಟ್ಟ ಹೆಸರು ಮುತ್ತುರಾಜ್) ಬಾಲ್ಯದಲ್ಲೇ ತಮ್ಮ ತಮ್ಮನಾದ ಎಸ್.ಪಿ. ವರದರಾಜ್, ತಂಗಿ ಶಾರದಮ್ಮ ಅವರೊಂದಿಗೆ ಗುಬ್ಬಿ ವೀರಣ್ಣ ಕಂಪನಿ ಸೇರುತ್ತಾರೆ. ರಂಗ ದಿಗ್ಗಜರುಗಳಿಂದ ಕಲಾ ಪ್ರಪೂರ್ಣೆಯರಿಂದ ಗಿಜಿಗುಡುತ್ತಿದ್ದ ಗುಬ್ಬಿ ಕಂಪನಿಯಲ್ಲಿ ತಕ್ಷಣಕ್ಕೆ ಅವರಿಗೆ ಪಾತ್ರಗಳೇನೂ ದೊರೆಯಲಿಲ್ಲ. ಅವರ ತಂದೆ ಅದೇ ಕಂಪನಿಯ ದೊಡ್ಡ ನಟರು ಎಂಬುದೂ ಅವರ ನೆರವಿಗೆ ಬರಲಿಲ್ಲ. ಕೆಲ ಕಾಲ ಕಾಯಬೇಕಾಯಿತು. ಕ್ರಮೇಣ ಗೋಪಾಲಕನ ಪಾತ್ರ ಸಿಕ್ಕಿತು. ಅಷ್ಟಕ್ಕೇ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು. ಕ್ರಮೇಣ ಅಭಿಮನ್ಯು ಪಾತ್ರ. ನಂತರ ಅರ್ಜುನನ ಪಾತ್ರಕ್ಕೆ ಬಡ್ತಿ. ಗುಬ್ಬಿ ವೀರಣ್ಣನವರ ಕಂಪನಿಯಿಂದ ಹೊರಬಂದು ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸೇರುವ ಹೊತ್ತಿಗೆ ರಾಜಕುಮಾರ್ ಯುವಕರಾಗಿದ್ದರು, ನಟನೆ ಯಲ್ಲಿ ತುಸು ಪಳಗಿದ್ದರು. ಹಾಗಾಗಿ ಆರಂಭದಲ್ಲೇ ಪ್ರಮುಖ ಪಾತ್ರಗಳು ದೊರೆತವು. ಅಭಿನಯಕ್ಕೆ ತಂದೆಯ ಮಾರ್ಗದರ್ಶನ ಇತ್ತು. ಎಚ್.ಆರ್.ಕೃಷ್ಣಶಾಸ್ತ್ರಿ, ಕೃಷ್ಣಮೂರ್ತಿ, ರಾಧಾಕೃಷ್ಣ ಅಯ್ಯರ್, ಪ್ರಭುಸ್ವಾಮಿ ಅವರು ರಂಗಸಂಗೀತದ ಪರಿಚಯ ಮಾಡಿ ಕೊಟ್ಟರು. ಢಿಕ್ಕಿ ಮಾಧವರಾವ್ ಅವರು ಪೌರಾಣಿಕ
ನಾಟಕಗಳ ಜತೆಗೆ ಸಾಮಾಜಿಕ ನಾಟಕಗಳ ರೀತಿ ರಿವಾಜು ಹೇಳಿಕೊಟ್ಟರು. “ಭಕ್ತ ಅಂಬರೀಷ’ ನಾಟಕದ ರಮಾಕಾಂತನಾಗಿ, “ಭೂ ಕೈಲಾಸ’ದ ನಾರದನಾಗಿ, “ಬಸವೇಶ್ವರ’ ನಾಟಕದ ಬಿಜ್ಜಳ ಹಾಗೂ ಕೆಲವೊಮ್ಮೆ ಬಸವೇಶ್ವರನಾಗಿ, “ಸತ್ಯ ಹರಿಶ್ಚಂದ್ರ’ ನಾಟಕದ ಹರಿಶ್ಚಂದ್ರನಾಗಿ, “ಸಂಪೂರ್ಣ ರಾಮಾಯಣ’ ನಾಟಕದ ರಾಮ ಹಾಗೂ ಆಂಜನೇಯನಾಗಿ, “ಎಚ್ಚಮ ನಾಯಕ’ ನಾಟಕದ ಎಚ್ಚಮ ನಾಯಕ -ಹೀಗೆ ಬಹುತೇಕ ನಾಟಕಗಳ ಪ್ರಮುಖ ಪಾತ್ರಗಳು. ಎಸ್.ಕೆ.ಕರೀಂಖಾನ್ ಅವರು ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಬರೆದುಕೊಟ್ಟ ಏಕೈಕ ಸಾಮಾಜಿಕ ನಾಟಕ “ನಿರ್ದೋಷಿ’. ಅದರಲ್ಲೂ ರಾಜಕುಮಾರ್ ಅವರದು ಪ್ರಮುಖ ಪಾತ್ರ. “”ಹಿತಮಿತವಾದ ಅವರ ಅಭಿನಯ ಆ ಕಾಲಕ್ಕೆ ಹೊಸದೊಂದು ಅಭಿರುಚಿಯನ್ನೇ ಬೆಳೆಸಿತು” ಎನ್ನುತ್ತಾರೆ ಆ ಕಾಲಕ್ಕೆ ಅವರಿಗೆ ಸಂಗೀತದ ಸಾಥ್ ನೀಡಿದ ಜೊತೆಗಾರ ಆರ್.ಪರಮಶಿವನ್. ಸಿನಿಮಾದಲ್ಲಿ ನಟಿಸಲು ಆಹ್ವಾನ
ಸುಬ್ಬಯ್ಯ ನಾಯ್ಡು ಅವರ ಕಂಪನಿಯ “ಭಕ್ತ ಅಂಬರೀಷ’ ನಾಟಕಕಕ್ಕೆ ಚಿತ್ರದುರ್ಗದಲ್ಲಿ ಭಾರಿ ಹೆಸರು ಬಂತು. ಅಲ್ಲಿಂದ ಹೊಸಪೇಟೆ, ನಂತರ ಹುಬ್ಬಳ್ಳಿ ಕ್ಯಾಂಪ್. ಅಲ್ಲಿದ್ದಾಗಲೇ “ಬೇಡರ ಕಣ್ಣಪ್ಪ’ (ರಾಜಕುಮಾರ್ ನಾಯಕನಾಗಿ ನಟಿಸಿದ ಮೊದಲ ಚಿತ್ರ) ಚಿತ್ರದಲ್ಲಿ ನಟಿಸಲು ಆಹ್ವಾನ ಬಂತು. ಆಗೆಲ್ಲಾ ವರ್ಷಕ್ಕೆ ಒಂದೋ ಎರಡು ಚಿತ್ರಗಳು ನಿರ್ಮಾಣ ವಾಗುತ್ತಿದ್ದ ಕಾಲ. “ಬೇಡರ ಕಣ್ಣಪ್ಪ’ ಮತ್ತಿತರ ಒಂದೆರಡು ಚಿತ್ರಗಳ ನಂತರ ರಾಜಕುಮಾರ್ ಹಾಗೂ ಆ ಕಾಲದ ಹೆಸರಾಂತ ನಟ ನಟಿಯರಾದ ಬಾಲಕೃಷ್ಣ , ನರಸಿಂಹರಾಜು, ಚಿತ್ರದುರ್ಗದ ವೀರಭದ್ರಪ್ಪ, ಬಿ.ಜಯಾ, ಜಿ.ವಿ.ಅಯ್ಯರ್ ಮುಂತಾದವರೆಲ್ಲ ಸೇರಿಕೊಂಡು ಕನ್ನಡ ಚಲನಚಿತ್ರ ಕಲಾವಿದರ ಸಂಘ ರಚಿಸಿಕೊಂಡು ಮಧ್ಯದ ಬಿಡುವಿನ ಸಮಯದಲ್ಲಿ ರಾಜ್ಯದ ವಿವಿಧೆಡೆ ನಾಟಕ ಆಡಲು ಹೋಗುತ್ತಿದ್ದರು. “ಸಾಹುಕಾರ’, “ಎಚ್ಚಮ ನಾಯಕ’ ಸಂಘದ ಅತ್ಯಂತ ಯಶಸ್ವಿ ನಾಟಕಗಳು. ಸ್ಫುರದ್ರೂಪಿ ರಾಜ್‌ಗೆ ಚಿತ್ರರಂಗದ ಅವಕಾಶಗಳು ಮುಂದಿನ ದಿನಗಳಲ್ಲಿ ಸಾಲುಗಟ್ಟಿದವು. ಚಿತ್ರರಂಗದಲ್ಲಿ ರಾಜ್ ಅದೆಷ್ಟು “ಬಿಜಿ’ ಆದರೆಂದರೆ ನಾಟಕಗಳತ್ತ ಅವರಿಗೆ ಹೊರಳಿ ನೋಡಲು ಪುರುಸೊತ್ತು ಆಗಲಿಲ್ಲ. ರಾಜಕುಮಾರ್ ನಾಟಕದಲ್ಲಿ ನಟಿಸಿದ ಅವಧಿ ಕಡಿಮೆ ಇರಬಹುದು. ಆದರೆ ಚಿತ್ರರಂಗದ ಧ್ರುವತಾರೆಯಾಗಿ ಬೆಳಗಲು ಒಬ್ಬ ಪರಿಪೂರ್ಣ ಕಲಾಕಾರನನ್ನು ನಿರ್ಮಿಸಿಕೊಟ್ಟದ್ದರಲ್ಲಿ ಮೊದಲನೆಯದು ರಂಗಭೂಮಿ, ಮತ್ತೂಂದು ಅವರ ತಂದೆ. “ನಿನ್ನ ಕಂಗಳ ಬಿಸಿಯ ಹನಿಗಳು…’ “ಕಣ್ಣೀರ ಧಾರೆ ಇದೇಕೆ…ಇದೇಕೆ…’, “ಓ ಎಂಥ ಸೌಂದರ್ಯ ಕಂಡೆ’, “ಇದು ಯಾರು ಬರೆದ ಕತೆಯೋ…’, “ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು…’ ಇಂತಹ ನೂರಾರು ಹಾಡುಗಳಿಂದ; ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಹೃದಯದಲ್ಲಿ ಡಾ.ರಾಜಕುಮಾರ್
ಗಾಯಕ ನಟನಾಗಿ ಶಾಶ್ವತವಾಗಿ ನೆಲೆನಿಂತರು. ಹಾಗೆ ನೆಲೆ ನಿಲ್ಲಲು ತಾಯಿ ಬೇರು ಆಗಿ ಅವರನ್ನು ಪೋಷಿಸಿ ಬೆಳೆಸಿದ್ದು ರಂಗಭೂಮಿ. ಅಸ್ಖಲಿತ ಮಾತುಗಾರಿಕೆ, ಗಾಯನವಂತೂ ರಂಗಭೂಮಿಯ ಕೊಡುಗೆಯೇ. ವೃತ್ತಿ ರಂಗಭೂಮಿಯ ಭರ್ಜರಿಯಾದ ಅಭಿನಯ ಶೈಲಿಯನ್ನು ಹದಗೊಳಿಸಿಕೊಂಡದ್ದು ರಾಜಕುಮಾರ್ ಅವರ ಅನನ್ಯ ಪ್ರತಿಭೆ. ಹಾಗಾಗಿ ರಾಜಕುಮಾರ್ ಎಂಬ ಐಕಾನ್ ನಿಸ್ಸಂಶಯವಾಗಿ ರಂಗಭೂಮಿಯ ಕೊಡುಗೆ.
(ಇಂದು ಡಾ.ರಾಜಕುಮಾರ್ ಜನ್ಮದಿನ. ತನ್ನಿಮಿತ್ತ ಲೇಖನ)
*ಗುಡಿಹಳ್ಳಿ ನಾಗರಾಜ