ಪರ್ತ್: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಖಾಸಗಿತನಕ್ಕೆ ಧಕ್ಕೆ ತಂದ ಘಟನೆ ಟಿ20 ವಿಶ್ವಕಪ್ ನಲ್ಲಿ ನಡೆದಿದೆ. ಪರ್ತ್ ಹೋಟೆಲ್ ನಲ್ಲಿ ವಿರಾಟ್ ಕೊಹ್ಲಿ ಕೋಣೆಗೆ ನುಗ್ಗಿದ ಅಭಿಮಾನಿಯೊಬ್ಬರು ವಿರಾಟ್ ಕೋಣೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಗರಂ ಆಗಿರುವ ವಿರಾಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಪರ್ತ್ ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 12 ಹಂತದ ಮೂರನೇ ಪಂದ್ಯವಾಡುತ್ತಿತ್ತು. ಕೊಹ್ಲಿ ತನ್ನ ಕೋಣೆಯಲ್ಲಿ ಇಲ್ಲದಿದ್ದಾಗ ಅಭಿಮಾನಿಯೊಬ್ಬರು ಭಾರತೀಯ ಕ್ರಿಕೆಟ್ ಲೆಜೆಂಡ್ ನ ಹೋಟೆಲ್ ಕೋಣೆಗೆ ಪ್ರವೇಶಿಸಿದ್ದು, ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರ ಬಗ್ಗೆ ವಿರಾಟ್ ಕೋಪಗೊಂಡಿದ್ದು, ಇದು ದುರಾಭಿಮಾನ ಮತ್ತು ತನ್ನ ಖಾಸಗಿತನದ ಮೇಲಿನ ಆಕ್ರಮಣ ಎಂದು ಜರಿದಿದ್ದಾರೆ.
“ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಿದಾಗ ತುಂಬಾ ಸಂತೋಷ ಪಡುತ್ತಾರೆ, ಮತ್ತು ಅವರನ್ನು ಭೇಟಿ ಮಾಡಲು ಉತ್ಸುಕರಾಗುತ್ತಾರೆ. ಇದನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ. ಆದರೆ ಇಲ್ಲಿ ಈ ವೀಡಿಯೊ ನೋಡಿ ನನಗೆ ಭಯವಾಗಿದೆ. ನನ್ನ ಸ್ವಂತ ಹೋಟೆಲ್ ಕೋಣೆಯಲ್ಲಿ ನಾನು ಪ್ರೈವಸಿ ಹೊಂದಲು ಸಾಧ್ಯವಾಗದಿದ್ದರೆ, ನಾನು ಖಾಸಗಿ ಸ್ಥಳವನ್ನು ಎಲ್ಲಿ ನಿರೀಕ್ಷಿಸಬಹುದು? ಈ ರೀತಿಯ ದುರಭಿಮಾನ ಮತ್ತು ಖಾಸಗಿತನದ ಸಂಪೂರ್ಣ ಆಕ್ರಮಣವನ್ನು ನಾನು ಒಪ್ಪುವುದಿಲ್ಲ. ದಯವಿಟ್ಟು ಜನರ ಗೌಪ್ಯತೆಯನ್ನು ಗೌರವಿಸಿ, ಅವರನ್ನು ಮನರಂಜನೆಯ ಸರಕು ಎಂದು ಪರಿಗಣಿಸಬೇಡಿ” ಎಂದು ಖಾರವಾಗಿಯೇ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.